ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಜಿತ ಮನಸ್ಸುಗಳನ್ನು ಸಾಹಿತ್ಯ ಬೆಸೆಯಿಲಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಆಶಯ
Last Updated 13 ಮಾರ್ಚ್ 2021, 22:16 IST
ಅಕ್ಷರ ಗಾತ್ರ

ಬೆಂಗಳೂರು: ‘ಇವತ್ತಿನ ವಿಭಜಿತ ಸಮಾಜದಲ್ಲಿ ಸಾಹಿತ್ಯವು ಮನಸ್ಸುಗಳನ್ನು ಒಟ್ಟುಗೂಡಿಸುವ ಸೇತುವೆಯಂತೆ ಕೆಲಸ ಮಾಡಬೇಕಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಶನಿವಾರ ಹೇಳಿದರು.

ಸಪ್ನಾ ಬುಕ್‌ ಹೌಸ್‌ ಆಯೋಜಿಸಿದ್ದ ಸಾಹಿತಿ ಹಂಪ ನಾಗರಾಜಯ್ಯ ಸಂಪಾದಿಸಿರುವ ‘ಕವಿರಾಜಮಾರ್ಗಂ’ ಹಾಗೂ ‘ವಡ್ಡಾರಾಧನೆ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಪುಸ್ತಕಗಳ ಮುಖಾಂತರ ಓದಿನ ಹಸಿವು ಇನ್ನೂ ಹೆಚ್ಚಿಸಿದ್ದೀರಿ.ಇವತ್ತಿನ ಮಕ್ಕಳಿಗೆ ಹಳಗನ್ನಡದ ಪರಿಚಯವಿಲ್ಲ. ಆಯಾ ಕಾಲಘಟ್ಟದಲ್ಲಿ ಅವರಿಗೆ ಹಳಗನ್ನಡ ಹೇಳಿಕೊಡುವ ಕೆಲಸ ಆಗಬೇಕು. ವಿಶ್ವವಿದ್ಯಾಲಯವೊಂದು ಮಾಡಬೇಕಾದ ಕೆಲಸವನ್ನು ಹಂಪನಾ ದಂಪತಿ ಮಾಡಿದ್ದಾರೆ’ ಎಂದರು.

ಹಂಪ ನಾಗರಾಜಯ್ಯ, ‘ಕವಿರಾಜಮಾರ್ಗ ಹಾಗೂ ವಡ್ಡಾರಾಧನೆ ಹಳಗನ್ನಡ ಸಾಹಿತ್ಯದ ಶ್ವಾಸಕೋಶಗಳು. ಇವು ಕನ್ನಡದಲ್ಲಿ ಉಪಲಬ್ದವಾಗಿರುವ ಮೊಟ್ಟಮೊದಲ ಕೃತಿಗಳು. ಕಥೆಗಳ ಸಂಕಲನ ವಡ್ಡಾರಾಧನೆ ಸೃಜನ ಸಾಹಿತ್ಯವಾದರೆ, ಕವಿರಾಜಮಾರ್ಗ ಸೃಜನೇತರ ಸಾಹಿತ್ಯ. ಎರಡೂ ಕೃತಿಗಳನ್ನು ಸಂಪಾದಿಸಿರುವುದು ಖುಷಿಯ ವಿಚಾರ’ ಎಂದರು.

‘ಕವಿ ಮಧುರ 1331ರಲ್ಲಿ ಧರ್ಮನಾಥಪುರಾಣವನ್ನು ರಚಿಸಿದ. ಪಂಪನನ್ನು ಆದಿಕವಿ ಎಂದು ಮೊದಲು ಕರೆದಿದ್ದೇ ಆತ. ಕೂಲಯಮಾಲಾ ಎಂಬ ಕಾವ್ಯವುಕನ್ನಡ ಸಾಹಿತ್ಯಕ್ಕೆ ದೊಡ್ಡ ಪ್ರೇರಣೆ ನೀಡಿತ್ತು. ನಾಗವರ್ಮ ಅದ್ಭುತ ಕವಿ.ಕನ್ನಡ ಭಾಷೆಯನ್ನು ಕನ್ನಡೇತರರಿಗೆ ಪರಿಚಯಿಸುವಲ್ಲಿ ಆತನ ಪಾತ್ರ ಹಿರಿದು’ ಎಂದರು.

‘ಒಂಬತ್ತನೇ ಶತಮಾನ ಕನ್ನಡ ಸಾಹಿತ್ಯಕ್ಕೆ ದೊಡ್ಡ ಎತ್ತರವನ್ನು ಕೊಟ್ಟ ಕಾಲಘಟ್ಟ. ಇದರ ಬಗ್ಗೆ ಹೆಚ್ಚು ಅಧ್ಯಯನಗಳು ನಡೆಯಬೇಕು. ಈಗಿನ ಯುವಕರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸಂಸ್ಕೃತ ನಮಗೆ ಬೇಕೆ ಬೇಕು. ಪ್ರಾಕೃತ ಭಾಷೆ ಕನ್ನಡಕ್ಕೆ ತುಂಬಾ ಅಗತ್ಯ. ಅದರ ಅಧ್ಯಯನವನ್ನೂ ನಡೆಸಬೇಕು’ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್‌, ‘ಎಲ್ಲಾ ಕಾಲ, ದೇಶ ಹಾಗೂ ಮತಕ್ಕೂ ಈ ಕೃತಿಗಳು ಪ್ರಸ್ತುತ. ಜೀವನ ಸಿದ್ಧಾಂತವನ್ನು ಕಟ್ಟಿಕೊಡುವ ಈ ಕೃತಿಗಳು ಮತ್ತೆ ಮತ್ತೆ ಪ್ರಕಟಣೆಗೊಳ್ಳಬೇಕು. ವಡ್ಡಾರಾಧನೆಯು ಸಾಹಿತ್ಯಿಕ ಕೃತಿ ಮಾತ್ರವಲ್ಲ, ಅದು ಸಂಸ್ಕೃತಿಯ ಖಜಾನೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಪಿ.ವಿ.ನಾರಾಯಣ, ‘ಕವಿರಾಜಮಾರ್ಗಕಾರನ ಬಗ್ಗೆ ಹಂಪನಾ ಅವರು ಕೃತಿಯಲ್ಲಿ ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ.ಮೂರು ಜನ ಶ್ರೀವಿಜಯರಿದ್ದರು. ಆ ಪೈಕಿ ಕವಿರಾಜಮಾರ್ಗವನ್ನು ಬರೆದಿದ್ದು ಎರಡನೇ ಶ್ರೀವಿಜಯ ಎಂದು ಉಲ್ಲೇಖಿಸಿದ್ದಾರೆ.ಶ್ರೀವಿಜಯ ಅನೇಕ ಪ್ರಥಮಗಳ ಸರದಾರ ಎಂದೂ ಹಂಪನಾ ಬಣ್ಣಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT