ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ | ಮತದಾನ ನಿಧಾನ, ಅಲ್ಲಲ್ಲಿ ಜೋರು

20ನೇ ಬಾರಿ ಮತ ಚಲಾಯಿಸಿದ ವೃದ್ಧ-ಒಂದೇ ಕುಟುಂಬದ 23 ಮಂದಿಯಿಂದ ಏಕಕಾಲದಲ್ಲಿ ಮತದಾನ
Published 26 ಏಪ್ರಿಲ್ 2024, 15:42 IST
Last Updated 26 ಏಪ್ರಿಲ್ 2024, 15:42 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ನಿಧಾನಗತಿಯಲ್ಲಿ ಮತದಾನ ಜರುಗಿತು. ಕೆಲ ಮತಗಟ್ಟೆಗಳಲ್ಲಿ ಮತದಾರರ ಸರತಿ ಸಾಲು ದೊಡ್ಡದಿದ್ದರೆ, ಹಲವು ಮತಗಟ್ಟೆಗಳಲ್ಲಿ ಮತದಾರರ ಕೊರತೆ ಎದ್ದು ಕಾಣುತ್ತಿತ್ತು.

ಸರ್ವಜ್ಞ ನಗರ, ಸಿ.ವಿ.ರಾಮನ್ ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳಲ್ಲಿ ಮತದಾನ ನಡೆಯಿತು.

‘ಮನೆಯಲ್ಲಿ ಮತದಾನ’ ಸೌಲಭ್ಯದ ಮಾಹಿತಿ ಕೊರತೆಯಿಂದಾಗಿ ಹಲವು ವೃದ್ಧರು, ಮತಗಟ್ಟೆಗಳಿಗೆ ಬಂದು ಮತದಾನ ಮಾಡಿದರು. ಮೊದಲ ಬಾರಿಗೆ ಮತ ಚಲಾಯಿಸುವ ಅವಕಾಶ ಪಡೆದಿದ್ದ ಯುವಜನತೆ ಸಹ ಉತ್ಸಾಹದಲ್ಲಿ ಮತಗಟ್ಟೆಗೆ ಬಂದಿದ್ದರು.

ಗಂಗಾಧರ ಚೆಟ್ಟಿ ರಸ್ತೆಯಲ್ಲಿರುವ ಆರ್‌ಬಿಎಎನ್‌ಎಂಎಸ್ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು. ಸರ್ವಜ್ಞನಗರ ಕಾಕ್ಸ್‌ಟೌನ್‌ನಲ್ಲಿರುವ ಸಂತ ಅಲಾಷಿಯಸ್ ಪದವಿ ಪೂರ್ವ ಕಾಲೇಜು ಮತಗಟ್ಟೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಲ್ಲಲು ಬ್ಯಾರಿಕೇಡ್‌ ವ್ಯವಸ್ಥೆ ಮಾಡಲಾಗಿತ್ತು. ಎರಡೂ ಮತಗಟ್ಟೆಗಳಲ್ಲಿ ನಿಧಾನಗತಿಯಲ್ಲಿ ಮತದಾನ ನಡೆಯಿತು.

ನಾಗವಾರಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ನೆರೆದಿದ್ದರು. ಅರ್ಧ ಕಿ.ಮೀ.ನಷ್ಟು ಸರದಿ ಸಾಲು ಇತ್ತು. ‘ಬೆಳಿಗ್ಗೆ 8.30 ಗಂಟೆಗೆ ಮತಗಟ್ಟೆಗೆ ಬಂದಿದ್ದೇವೆ. ಈಗ 9.10 ಆಯಿತು. ಮತಗಟ್ಟೆಯೊಳಗೆ ಹೋಗಲು ಇನ್ನು 10 ನಿಮಿಷ ಬೇಕು. ಮತದಾನಕ್ಕೆ ಕಾಯುತ್ತ ನಿಂತಿದ್ದೇವೆ’ ಎಂದು ಮತದಾರ ಜಾನ್‌ ಹೇಳಿದರು.

ಬೆಳಿಗ್ಗೆ ಹಾಗೂ ಸಂಜೆ ಮಾತ್ರ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಿತ್ತು. ಮಧ್ಯಾಹ್ನ ಬಿಸಿಲಿನ ಕಾರಣಕ್ಕೆ ಮತದಾರರ ಸಂಖ್ಯೆ ತಗ್ಗಿತ್ತು.

20ನೇ ಬಾರಿ ಮತ ಚಲಾಯಿಸಿದ ವೃದ್ಧ: ಸಿ.ವಿ. ರಾಮನ್‌ ನಗರದಲ್ಲಿರುವ ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯದ ಮತಗಟ್ಟೆಯಲ್ಲಿಯೂ ಜನರು ಉತ್ಸಾಹದಿಂದ ಮತ ಚಲಾಯಿಸಿದರು. ಇದೇ ಮತಗಟ್ಟೆಗೆ ಬಂದಿದ್ದ 86 ವರ್ಷ ವಯಸ್ಸಿನ ಶಿವರಾಮಕೃಷ್ಣ ಶಾಸ್ತ್ರಿ ಎಂಬುವವರು 20ನೇ ಬಾರಿ ತಮ್ಮ ಮತ ಚಲಾಯಿಸಿದರು.

ಸಿ.ವಿ.ರಾಮನ್ ನಗರದಲ್ಲಿರುವ ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯದ ಮತಗಟ್ಟೆಯಲ್ಲಿ ಮತದಾನ ಮಾಡಿದ ಕುಟುಂಬದ ಸದಸ್ಯರು ಸಾಮೂಹಿಕ ಸೆಲ್ಪಿ ಕ್ಲಿಕ್ಕಿಸಿಕೊಂಡರು – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಸಿ.ವಿ.ರಾಮನ್ ನಗರದಲ್ಲಿರುವ ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯದ ಮತಗಟ್ಟೆಯಲ್ಲಿ ಮತದಾನ ಮಾಡಿದ ಕುಟುಂಬದ ಸದಸ್ಯರು ಸಾಮೂಹಿಕ ಸೆಲ್ಪಿ ಕ್ಲಿಕ್ಕಿಸಿಕೊಂಡರು – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

‘ಮನೆಯಲ್ಲಿ ಮತದಾನ’ದ ಅವಕಾಶವಿದ್ದರೂ ಇವರು ನೋಂದಣಿ ಮಾಡಿಸಿರಲಿಲ್ಲ. ಹೀಗಾಗಿ, ಸಂಬಂಧಿಕರ ಜೊತೆ ಮತಗಟ್ಟೆಗೆ ಬಂದು ಮತ ಹಾಕಿದರು. ಭದ್ರತಾ ಸಿಬ್ಬಂದಿ, ಶಿವರಾಮಕೃಷ್ಣ ಅವರನ್ನು ವ್ಹೀಲ್ ಚೇರ್‌ನಲ್ಲಿ‌ ಮತಗಟ್ಟೆಗೆ ಕರೆದೊಯ್ದು ಮತದಾನಕ್ಕೆ ನೆರವಾದರು.

ನಾಗವಾರಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಎದುರು ಸರದಿಯಲ್ಲಿ ನಿಂತಿದ್ದ ಮತದಾರರು – ಪ್ರಜಾವಾಣಿ ಚಿತ್ರ
ನಾಗವಾರಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಎದುರು ಸರದಿಯಲ್ಲಿ ನಿಂತಿದ್ದ ಮತದಾರರು – ಪ್ರಜಾವಾಣಿ ಚಿತ್ರ

‘ಮತದಾನ ನಮ್ಮ ಹಕ್ಕು. ಮನೆಯಲ್ಲಿ ಮತದಾನ ಮಾಡಿದರೆ ಅದರ ಮಹತ್ವ ತಿಳಿಯುವುದಿಲ್ಲ. ಜನರೂ ಭೇಟಿಯಾಗುವುದಿಲ್ಲ. ಅದಕ್ಕೆ‌ ಮತಗಟ್ಟೆಗೆ ಬಂದಿದ್ದೇನೆ. ಸ್ನೇಹಿತರು ಹಾಗೂ ಸಂಬಂಧಿಕರು ಎಲ್ಲರೂ‌ ಭೇಟಿಯಾಗುತ್ತಾರೆ. ಕುಶಲೋಪರಿ ವಿಚಾರಿಸುತ್ತಾರೆ. ಖುದ್ದು ಮತಗಟ್ಟೆಯಲ್ಲಿ‌ ಮತ ಚಲಾಯಿಸಿದರೆ ಮನಸ್ಸಿಗೆ ನೆಮ್ಮದಿ’ ಎಂದು ಶಿವರಾಮಕೃಷ್ಣ ಶಾಸ್ತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅನಿವಾಸಿ ಭಾರತೀಯರಿಂದ ಮತದಾನ: ಶಾಂತಿನಗರದ ಬಾಲ್ಡ್‌ವಿನ್ ಬಾಲಕರ ಶಾಲೆ ಮತಗಟ್ಟೆ ಹಾಗೂ ಸುತ್ತಮುತ್ತಲಿನ ಕೆಲ ಮತಗಟ್ಟೆಗಳಲ್ಲಿ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದರು.

ಅಮೆರಿಕ, ದುಬೈ ಸೇರಿದಂತೆ ಹೊರದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಮತಗಟ್ಟೆಯಲ್ಲಿಯೇ ಪರಸ್ಪರ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಸರದಿಯಲ್ಲಿ ನಿಂತು ಮತಚಲಾಯಿಸಿದರು.

ಶಾಂತಿನಗರದ ಬಾಲ್ಡ್‌ವಿನ್ ಬಾಲಕರ ಪ್ರೌಢಶಾಲೆಯ ಮತಗಟ್ಟೆಯಲ್ಲಿ ತಾಯಿಯೊಬ್ಬರು ಮಗುವಿನ ಸಮೇತ ಸರದಿಯಲ್ಲಿ ಸಾಗಿ ಮತ ಚಲಾಯಿಸಿದರು  – ಪ್ರಜಾವಾಣಿ ಚಿತ್ರ
ಶಾಂತಿನಗರದ ಬಾಲ್ಡ್‌ವಿನ್ ಬಾಲಕರ ಪ್ರೌಢಶಾಲೆಯ ಮತಗಟ್ಟೆಯಲ್ಲಿ ತಾಯಿಯೊಬ್ಬರು ಮಗುವಿನ ಸಮೇತ ಸರದಿಯಲ್ಲಿ ಸಾಗಿ ಮತ ಚಲಾಯಿಸಿದರು  – ಪ್ರಜಾವಾಣಿ ಚಿತ್ರ

‘ಉದ್ಯೋಗಕ್ಕೆಂದು ಹಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದೇವೆ. ನಾವಿರುವ ಊರಿನ ಅಕ್ಕಪಕ್ಕದ ಪ್ರದೇಶಗಳಲ್ಲಿ ಶಾಂತಿನಗರ ನಿವಾಸಿಗಳು ಇದ್ದಾರೆ. ಆದರೆ, ಅವರು ಅಮೆರಿಕದಲ್ಲಿ ಭೇಟಿಯಾಗಲು ಸಿಕ್ಕಿರಲಿಲ್ಲ. ಈಗ ಮತಗಟ್ಟೆಯಲ್ಲಿ ಭೇಟಿಯಾದಾಗ, ತಾವೂ ಅಮೆರಿಕದಲ್ಲಿ ನೆಲಸಿರುವುದಾಗಿ ಹೇಳಿದರು. ಮತದಾನದಿಂದಾಗಿ ನಾವು ಪರಸ್ಪರ ಭೇಟಿಯಾಗಲು ಅನುಕೂಲವಾಯಿತು’ ಎಂದು ವೃದ್ಧೆಯೊಬ್ಬರು ಹೇಳಿದರು. 

ಕೇಸರಿ ಅಂಗಿ ಧರಿಸಿದ್ದ ಯುವಕನ ಮೇಲೆ ಹಲ್ಲೆ
ಸಿ.ವಿ. ರಾಮನ್ ನಗರದ ಸುದ್ದಗುಂಟೆಪಾಳ್ಯದಲ್ಲಿ ಕೇಸರಿ ಅಂಗಿ ಧರಿಸಿ ಮತಗಟ್ಟೆಯೊಳಗೆ ಹೊರಟಿದ್ದ ಯುವಕನನ್ನು ಅಡ್ಡಗಟ್ಟಿ ಹಲ್ಲೆ ಮಾಡಲಾಗಿದ್ದು ಈ ಸಂಬಂಧ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ‘ಸ್ಥಳೀಯ ಯುವಕ ಮೋಹನ್ ಎಂಬುವವರು ಮತ ಚಲಾಯಿಸಲು ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದಿದ್ದರು. ಕೇಸರಿ ಬಣ್ಣದ ಅಂಗಿ ಧರಿಸಿದ್ದ ಅವರು ಮತಗಟ್ಟೆಯೊಳಗೆ ಹೊರಟಿದ್ದರು. ಅದನ್ನು ಪ್ರಶ್ನಿಸಿದ್ದ ಕೆಲವರು ಮತಗಟ್ಟೆ ಒಳಗೆ ಹೋಗದಂತೆ ತಡೆದಿದ್ದರು. ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿತ್ತು. ಯುವಕನ ಮೇಲೆ ಅಪರಿಚಿತರು ಹಲ್ಲೆ ಮಾಡಿದ್ದರು. ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಧ್ಯಪ್ರವೇಶಿಸಿದ್ದರು. ಎರಡೂ ಪಕ್ಷದವರ ನಡುವೆಯೇ ಜಗಳ ಶುರುವಾಗಿತ್ತು. ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT