ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ– ಕಾಮರ್ಸ್ ಜಾಲತಾಣಗಳ ಗ್ರಾಹಕರಿಗೆ ನಕಲಿ ವಸ್ತು ನೀಡಿ ₹ 70 ಲಕ್ಷ ವಂಚನೆ

* ಇ– ಕಾಮರ್ಸ್ ಕಂಪನಿಗಳಿಗೆ ನಷ್ಟ * ದತ್ತಾಂಶ ಕದ್ದು ಕೃತ್ಯ: 21 ಮಂದಿ ಬಂಧನ
Published 28 ಆಗಸ್ಟ್ 2023, 23:30 IST
Last Updated 28 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಇ– ಕಾಮರ್ಸ್ ಜಾಲತಾಣಗಳ ಗ್ರಾಹಕರಿಗೆ ನಕಲಿ ವಸ್ತುಗಳನ್ನು ಪೂರೈಸಿ ವಂಚಿಸುತ್ತಿದ್ದ ಜಾಲ ಭೇದಿಸಿರುವ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು, 21 ಆರೋಪಿಗಳನ್ನು ಬಂಧಿಸಿದ್ದಾರೆ.

‘ವಸ್ತುಗಳ ಡೆಲಿವರಿ ಏಜೆನ್ಸಿಯೊಂದರ ಮಾಲೀಕ ವಂಚನೆ ಬಗ್ಗೆ ಇತ್ತೀಚೆಗೆ ದೂರು ನೀಡಿದ್ದರು. ಮಹಾರಾಷ್ಟ್ರ, ಗುಜರಾತ್ ಹಾಗೂ ಮಧ್ಯಪ್ರದೇಶದ ನಿವಾಸಿಯಾಗಿರುವ 21 ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ₹ 7.50 ಲಕ್ಷ ನಗದು, 11 ಮೊಬೈಲ್‌, 3 ಲ್ಯಾಪ್‌ಟಾಪ್ ಹಾಗೂ ಹಾರ್ಡ್‌ಡಿಸ್ಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಕಂಪನಿ ಸಿಬ್ಬಂದಿ ಶಾಮೀಲು: ‘ಇ–ಕಾಮರ್ಸ್ ಜಾಲತಾಣ ಮೂಲಕ ವಸ್ತುಗಳನ್ನು ಕಾಯ್ದಿರಿಸುತ್ತಿದ್ದ ಗ್ರಾಹಕರ ಮಾಹಿತಿ ಸರ್ವರ್‌ನಲ್ಲಿ ದಾಖಲಾಗುತ್ತಿತ್ತು. ಇ–ಕಾಮರ್ಸ್ ಕಂಪನಿಯ ಕೆಲ ಸಿಬ್ಬಂದಿಯೇ ದತ್ತಾಂಶವನ್ನು ಕಳ್ಳತನ ಮಾಡಿ ಆರೋಪಿಗಳಿಗೆ ನೀಡುತ್ತಿದ್ದರು. ಅದರ ನೆರವಿನಿಂದಲೇ ಆರೋಪಿಗಳು ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಕೋರಿಯರ್ ಮೂಲಕ ನಕಲಿ ವಸ್ತು: ‘ಕ್ಯಾಶ್ ಆನ್ ಡೆಲಿವರಿ (ಸಿಒಡಿ) ಸೌಲಭ್ಯದೊಂದಿಗೆ ಜಾಲತಾಣದಲ್ಲಿ ಬುಕ್ಕಿಂಗ್ ಮಾಡುತ್ತಿದ್ದ ಗ್ರಾಹಕರಿಗೆ ಅಸಲಿ ವಸ್ತುಗಳನ್ನು ಕಳುಹಿಸಲು ಕಂಪನಿಯವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇದಕ್ಕೂ ಮುನ್ನವೇ ಆರೋಪಿಗಳು, ಅಧಿಕೃತ ಏಜೆನ್ಸಿಯಿಂದ ವಸ್ತುಗಳು ಡೆಲಿವರಿ ಆಗುವ ಮುನ್ನವೇ ಬೇರೆ ಕೊರಿಯರ್ ಮೂಲಕ ಗ್ರಾಹಕರ ವಿಳಾಸಕ್ಕೆ ನಕಲಿ ವಸ್ತುಗಳನ್ನು ಕಳುಹಿಸಿ ಹಣ ಪಡೆದುಕೊಳ್ಳುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ವಸ್ತು ನಕಲಿ ಎಂಬುದು ಗೊತ್ತಾಗುತ್ತಿದ್ದಂತೆ ಗ್ರಾಹಕರು, ಜಾಲತಾಣ ಮೂಲಕ ಕಂಪನಿಗೆ ವಾಪಸು ಕಳುಹಿಸುತ್ತಿದ್ದರು. ಕೆಲ ಗ್ರಾಹಕರ ಖಾತೆಗೆ ಹಣ ಜಮೆ ಆಗುತ್ತಿತ್ತು. ಎರಡು ದಿನಗಳ ನಂತರ ಅಸಲಿ ವಸ್ತುಗಳು ಬಂದರೂ ಗ್ರಾಹಕರು ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ, ಅಸಲಿ ವಸ್ತುಗಳನ್ನೂ ಏಜೆನ್ಸಿಯವರು ವಾಪಸು ಕಂಪನಿಗೆ ಕಳುಹಿಸುತ್ತಿದ್ದರು’ ಎಂದು ಹೇಳಿದರು.

ಲೆಕ್ಕ ತಪಾಸಣೆಯಿಂದ ಪತ್ತೆ: ‘ಆರೋಪಿಗಳು ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದರು. ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಕಂಪನಿಯವರಿಗೆ ಈ ಸಂಗತಿ ಗೊತ್ತಾಗಿರಲಿಲ್ಲ. ಇತ್ತೀಚೆಗೆ ಲೆಕ್ಕ ತಪಾಸಣೆ ವೇಳೆ ₹ 70 ಲಕ್ಷ ವ್ಯತ್ಯಾಸ ಕಂಡುಬಂದಿತ್ತು’ ಎಂದು ಪೊಲೀಸರು ತಿಳಿಸಿದರು.

‘ಆಂತರಿಕ ತನಿಖೆ ನಡೆಸಿದ್ದ ಕಂಪನಿ ಅಧಿಕಾರಿಗಳು ಹಾಗೂ ಡೆಲಿವರಿ ಏಜೆನ್ಸಿ ಸಿಬ್ಬಂದಿ, ನಕಲಿ ವಸ್ತು ನೀಡುತ್ತಿದ್ದ ಜಾಲದ ಬಗ್ಗೆ ಮಾಹಿತಿ ಕಲೆಹಾಕಿದ್ದರು. ನಂತರವೇ ಠಾಣೆಗೆ ದೂರು ನೀಡಿದ್ದರು’ ಎಂದು ಹೇಳಿದರು.

ಬ್ಯಾಂಕ್ ವಹಿವಾಟು ನೀಡಿದ ಸುಳಿವು: ‘ವಸ್ತು ಸ್ವೀಕರಿಸುತ್ತಿದ್ದ ಗ್ರಾಹಕರು, ಕೋರಿಯರ್ ಸಿಬ್ಬಂದಿ ಕೈಗೆ ಹಣ ನೀಡುತ್ತಿದ್ದರು. ಅದೇ ಹಣದಲ್ಲಿ ಕಮಿಷನ್ ಪಡೆಯುತ್ತಿದ್ದ ಕೋರಿಯರ್ ಸಿಬ್ಬಂದಿ, ಉಳಿದ ಹಣವನ್ನು ಆರೋಪಿಗಳ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ಈ ವಹಿವಾಟಿನಿಂದಲೇ ಆರೋಪಿಗಳ ಸುಳಿವು ಸಿಕ್ಕಿತ್ತು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳ ಬ್ಯಾಂಕ್ ಖಾತೆಯಲ್ಲಿ ₹ 19.45 ಲಕ್ಷ ಹಣವಿದೆ. ಕೃತ್ಯದ ಬಗ್ಗೆ ಬ್ಯಾಂಕ್‌ಗಳಿಗೆ ಮಾಹಿತಿ ನೀಡಿ, ಖಾತೆಗಳ ವಹಿವಾಟು ಸ್ಥಗಿತಗಳಿಸಲಾಗಿದೆ’ ಎಂದರು.

ಬಂಧಿತ ಆರೋಪಿಗಳು ಅಭಿಷೇಕ್ ಗುಪ್ತಾ ಆಶೀಷ್ ತಲಿವೈ ಮಿಲನ್ ಗೌತಮ್ ಪನಸೂರ್ಯ ಪಾರ್ಥ್ ತಲಿವೈ ವಾಗಸೀಯಾ ಮನಸೂಕಬೈ ಅಕ್ಷಯ್ ಪ್ರದೀಪ್‌ಬೈ ದರ್ಶಿತ್ ರಫಿಲಿಯಾ ರಾಹುಲ್ ಡಕೇಜಾ ವಾಗಸೀಯಾ ಕೆಯೂರ್ ಬ್ರಿಜೇಶ್ ಸರೋಲ್ ಗೌರವ್ ಬೈ ರೇಖಾಬಿನ್ ಬೈ ವಿವೇಕ್ ಸದ್ವೋದಯ ತಲವಿಯಾ ಭೂಮಿತ್ ಪನಸೂರ್ಯ ಉತ್ತಮ್ ನಿಕುಂಜಾ ಮೊಹಮ್ಮದ್ ಶಕೀರ್ ಅನ್ಸಾರಿ ಅಂಕಿತ್ ವಿ. ಅನಿಕೇತ್ ವಿ. ಶುಭಮ್ ವರ್ಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT