ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ವಸತಿ ಸಮುಚ್ಚಯಗಳಲ್ಲಿ ಸಮಸ್ಯೆ ಅಗಾಧ: ಆಶ್ವಾಸನೆ ಮರೆತ ಜನಪ್ರತಿನಿಧಿಗಳು

ಮತದಾನದಿಂದ ದೂರ ಉಳಿಯುವ ಬೆದರಿಕೆ
Published 14 ಏಪ್ರಿಲ್ 2024, 22:35 IST
Last Updated 14 ಏಪ್ರಿಲ್ 2024, 22:35 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಈಗ ‘ಅಪಾರ್ಟ್‌ಮೆಂಟ್‌ ನಗರ’ವೆಂದೂ ಕರೆಸಿಕೊಳ್ಳುತ್ತಿದೆ. ಆ ಸಂಖ್ಯೆಯಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ಫ್ಲ್ಯಾಟ್‌ಗಳತ್ತ ಜನರ ಒಲವು ಹಾಗೂ ವಾಸ್ತವ್ಯವೂ ಹೆಚ್ಚುತ್ತಿದೆ. ಕಟ್ಟಡಗಳು ದೊಡ್ಡದಾಗಿ ಕಂಡರೂ ಅಲ್ಲಿನ ನಿವಾಸಿಗಳಿಗೆ ಸಮಸ್ಯೆಗಳೂ ಅಗಾಧವಾಗಿಯೇ ಕಾಡುತ್ತಿವೆ.

ಚುನಾವಣೆ ವೇಳೆ ಅಭ್ಯರ್ಥಿಗಳಿಗೆ ಮೊದಲು ನೆನಪಾಗುವುದೇ ಈ ರೀತಿ ಗಗನಚುಂಬಿ ಕಟ್ಟಡಗಳಲ್ಲಿ (ಅಪಾರ್ಟ್‌ಮೆಂಟ್‌ಗಳು) ನೆಲೆಸಿರುವ ಮತದಾರರು. ಲೋಕಸಭಾ ಚುನಾವಣೆಗಾಗಿ ಮತಬ್ಯಾಂಕ್‌ ಭದ್ರ ಪಡಿಸಿಕೊಳ್ಳಲು ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಿಂದ ಹಿಡಿದು ಸಣ್ಣಪುಟ್ಟ ಕಟ್ಟಡಗಳ ಸಮುಚ್ಚಯಗಳತ್ತಲೂ ಎಲ್ಲ ಪಕ್ಷದ ಅಭ್ಯರ್ಥಿಗಳೂ ಹೆಜ್ಜೆ ಹಾಕುತ್ತಿದ್ದಾರೆ.

‘ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ನೀವೆಲ್ಲರೂ ಸೇರಿ ನಮಗೆ ಶಕ್ತಿ ನೀಡಬೇಕು. ನೀವು ನಮಗೆ ಸಹಾಯ ಮಾಡಿದರೆ ಮಾತ್ರ ನಿಮಗೆ ಸಹಾಯ ಮಾಡಲು ಸಾಧ್ಯವಿದೆ’ ಎಂಬ ತಂತ್ರವನ್ನು ಅಪಾರ್ಟ್‌ಮೆಂಟ್‌ ಭೇಟಿ ವೇಳೆ ಹಾಗೂ ಸಭೆಗಳಲ್ಲಿ ರಾಜಕಾರಣಿಗಳು ಪ್ರಸ್ತಾಪಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಇದು ಫಲ ನೀಡುವುದೇ ಎಂಬ ಚರ್ಚೆ ಆರಂಭವಾಗಿದೆ.

ಮಹಾನಗರದಲ್ಲಿ ಪ್ರತ್ಯೇಕವಾಗಿ ಮನೆ ನಿರ್ಮಿಸಲು ಜಾಗದ ಕೊರತೆ. ಇತ್ತೀಚಿನ ವರ್ಷಗಳಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಸಿದೆ. ಈಗ ವಸತಿ ಕಲ್ಪಿಸಲು ಅಪಾರ್ಟ್‌ಮೆಂಟ್‌ಗಳೇ ಆಧಾರ. ನಗರದ ಹಲವು ಬಡಾವಣೆಗಳಲ್ಲಿ ಈಗಾಗಲೇ ಹಲವು ಗಗನಚುಂಬಿ ಅಪಾರ್ಟ್‌ಮೆಂಟ್‌ಗಳು ತಲೆಯೆತ್ತಿದ್ದು, ಇನ್ನೂ ನೂರಾರು ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ.

ಕ್ರೆಡೈ ಬಿಲ್ಡರ್ಸ್‌ (ಅಸೋಸಿಯೇಷನ್‌ ಆಫ್‌ ಬಿಲ್ಡರ್ಸ್‌) ಪ್ರತಿವರ್ಷ ಅಂದಾಜು 200 ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಮುಂದಾಗುತ್ತದೆ. ಸಣ್ಣಪುಟ್ಟ ಬಿಲ್ಡರ್‌ಗಳು, ಸುಮಾರು 150ರಿಂದ 200 ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಾರೆ ಎಂದು ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್ ಅಂದಾಜಿಸಿದೆ. ದೊಡ್ಡ ಸಂಖ್ಯೆಯ ಜನರು ಅಪಾರ್ಪ್‌ಮೆಂಟ್‌ಗಳಲ್ಲಿ ನೆಲೆಸಿರುವ ಕಾರಣಕ್ಕೆ ರಾಜಕೀಯ ಪಕ್ಷಗಳ ಚಿತ್ತವೂ ಚುನಾವಣೆ ವೇಳೆ ಫ್ಲ್ಯಾಟ್‌ಗಳತ್ತ ನೆಟ್ಟಿರುತ್ತದೆ.

ಮಾಲೀಕತ್ವದ್ದೇ ಸಮಸ್ಯೆ

ನಗರದ ಹೃದಯ ಭಾಗದಲ್ಲಿ ಪ್ರತಿಷ್ಠಿತ ಬಿಲ್ಡರ್‌ಗಳು ನಿರ್ಮಿಸಿದ ಅಪಾರ್ಟ್‌ಮೆಂಟ್‌ಗಳಲ್ಲಿನ ಒಂದು ಮನೆ(ಫ್ಲ್ಯಾಟ್‌) ಒಂದರಿಂದ ಎರಡು ಕೋಟಿ ರೂಪಾಯಿಗೂ ಅಧಿಕ ಬೆಲೆಯಿದೆ. ಆದರೆ, ಅಷ್ಟು ದೊಡ್ಡಮೊತ್ತದ ಹಣ ನೀಡಿ ಫ್ಲ್ಯಾಟ್‌ ಖರೀದಿಸಿದ್ದರೂ ಮಾಲೀಕತ್ವ ಮಾತ್ರ ದೊರೆಯುತ್ತಿಲ್ಲ ಎಂಬ ಕೊರಗು ಮಾಲೀಕರದ್ದು.

‘ಅಪಾರ್ಟ್‌ಮೆಂಟ್‌ ನಿವಾಸಿಗಳ ಅಸೋಸಿಯೇಷನ್‌ನವರೇ ಆ ಜಾಗದ ಮಾಲೀಕರಾಗುವಂತೆ ಕಾನೂನು ರೂಪಿಸುವುದಾಗಿ ಸರ್ಕಾರ ಈ ಹಿಂದೆ ಹೇಳಿತ್ತು. ಆದರೆ, ಇದುವರೆಗೂ ಮಾಲೀಕತ್ವದ ಬಲ ಸಿಕ್ಕಿಲ್ಲ. ಇದರಿಂದ ಬಹುತೇಕ ಫ್ಲ್ಯಾಟ್‌ ಮಾಲೀಕರು ಕಂಗಾಲಾಗಿದ್ದಾರೆ’ ಎಂದು ಚೇಂಜ್‌ಮೇಕರ್ಸ್‌ ಆಫ್‌ ಕನಕಪುರ ಅಸೋಸಿಯೇಷನ್‌ ಅಧ್ಯಕ್ಷ ಅಬ್ದುಲ್‌ ಅಲೀಂ ನೋವು ತೋಡಿಕೊಳ್ಳುತ್ತಾರೆ.

‘ಅಪಾರ್ಟ್‌ಮೆಂಟ್‌ಗಳ ನಿರ್ಮಾಣದ ಜಾಗವು ಜಮೀನಿನ ಮಾಲೀಕನ ಹೆಸರಿನಲ್ಲೇ ಇರುವುದರಿಂದ ಅನೇಕರು ಆ ಜಾಗದ ಮೇಲೆ ಸಾಲ ಪಡೆಯುತ್ತಿದ್ದಾರೆ. ಕಟ್ಟಡದ ಆಯಸ್ಸು ಮುಕ್ತಾಯವಾದ ಮೇಲೆ ಫ್ಲ್ಯಾಟ್ ನಿವಾಸಿಗಳಿಗೆ ಜಾಗದ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ನಮ್ಮ ಹೆಸರಿಗೆ ಫ್ಲ್ಯಾಟ್‌ ನೋಂದಣಿ ಆಗಿದ್ದರೂ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವ ಪರಿಸ್ಥಿತಿಯಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಅಲೀಂ.

ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಒಡಿಶಾದಲ್ಲಿ ಹೊಸ ನಿಯಮ ರೂಪಿಸಲಾಗಿದೆ. ರಾಜ್ಯದಲ್ಲಿ ಮಾತ್ರ ಈ ಮಾಲೀಕತ್ವಕ್ಕೆ ಸಂಬಂಧಿಸಿದ ಷೇರು, ಫ್ಲ್ಯಾಟ್‌ ಮಾಲೀಕರಿಗೆ ದೊರೆಯುತ್ತಿಲ್ಲ. ಜಾರಿಯಲ್ಲಿರುವ ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಕಾಯ್ದೆಗೆ ತಕ್ಷಣ ತಿದ್ದುಪಡಿ ತರಬೇಕು ಎಂಬ ಕೂಗು ಈಗ ಬಲವಾಗಿದೆ.

ಈಗಿರುವ ನಿಯಮಗಳಂತೆ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ವಿರುದ್ಧ ದೂರು ಸಲ್ಲಿಕೆಗೂ ಅವಕಾಶ ಇಲ್ಲ. ಸಣ್ಣಪುಟ್ಟ ಸಮಸ್ಯೆಗಳು ಎದುರಾದರೂ ಕೋರ್ಟ್‌ನಲ್ಲೇ ಪರಿಹರಿಸಿಕೊಳ್ಳಬೇಕಾಗಿದೆ. ರೇರಾ ಕಾಯ್ದೆ ಅನ್ವಯ ಬಿಲ್ಡರ್‌ಗಳ ಸಮಸ್ಯೆಗಳನ್ನು ಮಾತ್ರ ಬಗೆ ಹರಿಸಿಕೊಳ್ಳಲು ಸಾಧ್ಯವಿದೆ. ಅಸೋಸಿಯೇಷನ್‌ಗಳ ನಿಯಂತ್ರಣಕ್ಕೆ ಪ್ರತ್ಯೇಕ ಏಜೆನ್ಸಿ ರಚಿಸಬೇಕು ಎಂಬುದು ಫ್ಲ್ಯಾಟ್ ಮಾಲೀಕರ ಬೇಡಿಕೆ.

ಹಲವು ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರು ಸೇರಿದಂತೆ ಮೂಲಸೌಲಭ್ಯಗಳು ಇಲ್ಲ. ಇದು ನಿವಾಸಿಗಳಿಗೆ ಸಿಟ್ಟು ತರಿಸಿದೆ. ಮೂಲಸೌಲಭ್ಯ ಕಲ್ಪಿಸಿದಿದ್ದರೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ನಿವಾಸಿಗಳು ಬೆದರಿಕೆ ಹಾಕಿದ್ಧಾರೆ. ಜೆ.ಪಿ. ನಗರ 8ನೇ ಹಂತದ ಅಪಾರ್ಟ್‌ಮೆಂಟ್‌ವೊಂದರ ನಿವಾಸಿಗಳು ಚುನಾವಣೆ ಆಯೋಗಕ್ಕೂ ಪತ್ರ ಬರೆದಿದ್ಧಾರೆ.

ನಿಯಮ ಸಡಿಲಿಕೆ: ಇನ್ನೂ ಎಲ್ಲ ಆಪಾರ್ಟ್‌ಮೆಂಟ್‌ಗಳಲ್ಲೂ ಎಸ್‌.ಟಿ.ಪಿ (ತ್ಯಾಜ್ಯ ನೀರು ಶುದ್ಧೀಕರಣ ಘಟಕ) ಕಡ್ಡಾಯ ಎಂಬ ನಿಯಮವನ್ನು ಈ ಹಿಂದೆ ಜಾರಿಗೆ ತರಲಾಗಿತ್ತು. ಎಸ್‌ಟಿಪಿ ನಿರ್ವಹಣೆ ದುಬಾರಿ ಎನ್ನುವ ಕಾರಣಕ್ಕೆ ನಿವಾಸಿಗಳಿಂದಲೇ ವಿರೋಧ ವ್ಯಕ್ತವಾಗಿತ್ತು. ಈಗ ಜಲಮಂಡಳಿ ನಿಯಮ ಸಡಿಲಗೊಳಿಸಿದ್ದು ದೊಡ್ಡ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಎಸ್‌ಟಿಪಿ ಕಡ್ಡಾಯಗೊಳಿಸಿದೆ. ಸಂಸ್ಕರಿಸಿದ ತ್ಯಾಜ್ಯದ ನೀರಿನಲ್ಲಿ ಶೇ 50ರಷ್ಟು ಬಳಕೆ ಮಾಡಿಕೊಂಡು ಉಳಿದ ನೀರನ್ನು ಮಾರಾಟ ಮಾಡಬಹುದು ಎಂಬ ನಿಯಮವನ್ನೂ ಇತ್ತೀಚೆಗೆ ರೂಪಿಸಲಾಗಿದೆ. ಇದು ತುಸು ನೆಮ್ಮದಿ ತಂದಿದೆ ಎಂದು ಅಸೋಸಿಯೇಷನ್‌ ಸದಸ್ಯರು ಹೇಳುತ್ತಾರೆ.

ಸತೀಶ್‌ ಮಲ್ಯ
ಸತೀಶ್‌ ಮಲ್ಯ
ಅಬ್ದುಲ್‌ ಅಲೀಂ
ಅಬ್ದುಲ್‌ ಅಲೀಂ

ಫ್ಲ್ಯಾಟ್‌ ಮಾಲೀಕರಿಗೆ ಸೆಸ್‌ ‘ಬರೆ’

ಬಹುತೇಕ ಅಪಾರ್ಟ್‌ಮೆಂಟ್‌ಗಳೇ ತ್ಯಾಜ್ಯ ವಿಲೇವಾರಿ‌ ನಿರ್ವಹಣೆ ಮಾಡುತ್ತಿವೆ. ಆದರೂ ತ್ಯಾಜ್ಯಕ್ಕೆ ಸಂಬಂಧಿಸಿದ ಸೆಸ್‌ ಬರೆ ಮಾಲೀಕರ ಮೇಲೆಯೇ ಬೀಳುತ್ತಿದೆ. ಸಾಮಾನ್ಯ ಮನೆಗಳಿಗೆ ತ್ಯಾಜ್ಯಕ್ಕೆ ಸಂಬಂಧಿಸಿದ ಸೆಸ್ ಇಲ್ಲ. ಆದರೆ ಫ್ಲ್ಯಾಟ್‌ ನಿವಾಸಿಗಳು ಸೆಸ್‌ ಕಟ್ಟಡ ಹಾಗೂ ಉದ್ಯಾನ ನಿರ್ವಹಣೆ ತ್ಯಾಜ್ಯವನ್ನು ಹೊರಗೆ ಸಾಗಿಸಲು ಹಣ ಪಾವತಿಸುವ ಸ್ಥಿತಿಯಿದೆ. – ಅಬ್ದುಲ್‌ ಅಲೀಂ ಅಧ್ಯಕ್ಷ ಚೇಂಜ್‌ಮೇಕರ್ಸ್‌ ಆಫ್‌ ಕನಕಪುರ ಅಸೋಸಿಯೇಷನ್‌

ಶೇ 50ರಷ್ಟು ಕಟ್ಟಡಕ್ಕೆ ಕಾವೇರಿ ನೀರು ಅಲಭ್ಯ

‘ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್’ ಅಡಿ 180 ವಾರ್ಡ್‌ಗಳ 1280 ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ಗಳು ನೋಂದಣಿ ಮಾಡಿಕೊಂಡಿವೆ. ಶೇ 50ರಷ್ಟು ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರಿನ ಸಂಪರ್ಕ ಇಲ್ಲವಾಗಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತದೆ. – ಸತೀಶ್‌ ಮಲ್ಯ ಉಪಾಧ್ಯಕ್ಷ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್‌

ಮಳೆ ಬಂದರೆ ಜಲಾವೃತ ಜೋರು

ಮಳೆಯಾದಾಗ ಕೆಲವು ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿ ಸಮಸ್ಯೆಯಾಗುತ್ತಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ಕಟ್ಟಿದ್ದರ ಪರಿಣಾಮ ಕೆಳಅಂತಸ್ತುಗಳು ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತಿವೆ. 2022 ಮಳೆಗಾಲದಲ್ಲಿ ಉಂಟಾದ ಜಲಕಂಟಕವು ನಗರದ ಹಲವು ಹುಳುಕುಗಳನ್ನು ಎತ್ತಿತೋರಿಸಿ ‘ಪೂರ್ವ’ ಭಾಗವೇ ಮುಳುಗಿಹೋಗುವಂತೆ ಮಾಡಿತ್ತು. ನಿವಾಸಿಗಳು ರಾತ್ರೋರಾತ್ರಿ ಫ್ಲ್ಯಾಟ್ ತೊರೆದಿದ್ದರು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಜನಪ್ರತಿನಿಧಿಗಳು ಶಾಶ್ವತ ಕ್ರಮದ ಭರವಸೆ ನೀಡಿದ್ದರು. ಆದರೆ ಈಗಲೂ ಶಾಶ್ವತ ಪರಿಹಾರ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT