ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ: ಚೆನ್ನೈ ಹೋಟೆಲ್‌ನಲ್ಲಿ ಮಹಜರು

Published 28 ಏಪ್ರಿಲ್ 2024, 15:58 IST
Last Updated 28 ಏಪ್ರಿಲ್ 2024, 15:58 IST
ಅಕ್ಷರ ಗಾತ್ರ

ಬೆಂಗಳೂರು: ದಿ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿರುವ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು, ಬಂಧಿತ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾನನ್ನು ಚೆನ್ನೈಗೆ ಕರೆದೊಯ್ದು ಮಹಜರು ಪೂರ್ಣಗೊಳಿಸಿ ನಗರಕ್ಕೆ ವಾಪಸು ಕರೆತಂದಿದ್ದಾರೆ.

ಮಾರ್ಚ್ 1ರಂದು ನಡೆದಿದ್ದ ಬಾಂಬ್ ಸ್ಫೋಟದ ನಂತರ ತಲೆಮರೆಸಿಕೊಂಡಿದ್ದ ಇಬ್ಬರನ್ನೂ ಕೊಲ್ಕತ್ತಾ ಬಳಿ ಏಪ್ರಿಲ್ 12ರಂದು ಬಂಧಿಸಲಾಗಿತ್ತು. ಅವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಅಧಿಕಾರಿಗಳು, ಹೆಚ್ಚಿನ ವಿಚಾರಣೆ ಹಾಗೂ ಮಹಜರು ಪ್ರಕ್ರಿಯೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದರು.

‘ಮುಸಾವೀರ್ ಹಾಗೂ ಅಬ್ದುಲ್ ತಾಹಾ, ಜನವರಿಯಲ್ಲಿ ಚೆನ್ನೈನ ಹೋಟೆಲ್‌ವೊಂದರಲ್ಲಿ ಕೆಲವು ದಿನ ಉಳಿದುಕೊಂಡಿದ್ದರು. ಜೊತೆಗೆ, ಚೆನ್ನೈನ ಹಲವರನ್ನು ಭೇಟಿಯಾಗಿದ್ದರು. ಈ ಬಗ್ಗೆ ಪುರಾವೆಗಳು ಸಿಕ್ಕಿದ್ದವು. ಹೀಗಾಗಿ, ಇಬ್ಬರನ್ನೂ ಚೆನ್ನೈನ ಹೋಟೆಲ್‌ಗೆ ಕರೆದೊಯ್ದು ಮಹಜರು ನಡೆಸಲಾಯಿತು’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

‘ಹೋಟೆಲ್‌ನಲ್ಲಿ ಕೊಠಡಿ ಪಡೆಯಲು ಶಂಕಿತರು, ಹಿಂದೂ ವ್ಯಕ್ತಿಗಳ ಗುರುತಿನ ಚೀಟಿಗಳನ್ನು ನೀಡಿದ್ದರು. ಹೋಟೆಲ್‌ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ, ಮುಸಾವೀರ್ ಹಾಗೂ ಅಬ್ದುಲ್ ತಾಹಾ ದೃಶ್ಯ ಸೆರೆಯಾಗಿತ್ತು. ಇದೇ ಪುರಾವೆಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಿದಾಗ, ಹೋಟೆಲ್‌ನಲ್ಲಿ ತಂಗಿದ್ದ ಬಗ್ಗೆ ಶಂಕಿತರು ತಪ್ಪಿಪ್ಪಿಕೊಂಡಿದ್ದಾರೆ’ ಎಂದು ತಿಳಿಸಿವೆ.

‘ಇಬ್ಬರೂ ಶಂಕಿತರನ್ನು ಚೆನ್ನೈಗೆ ಶನಿವಾರ ಕರೆದೊಯ್ಯಲಾಗಿತ್ತು. ಹೋಟೆಲ್ ಹಾಗೂ ಇತರೆ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಲಾಯಿತು. ಪ್ರತಿಯೊಂದು ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗಿದೆ’ ಎಂದು ಹೇಳಿವೆ.

ಐಇಡಿ ತಯಾರಿಸಿದ್ದ ಜಾಗ: ‘ಕೆಫೆಯಲ್ಲಿ ಸ್ಫೋಟಿಸಲಾಗಿದ್ದ ಕಚ್ಚಾ ಬಾಂಬ್ (ಐಇಡಿ) ತಯಾರಿಸಿದ್ದ ಜಾಗವನ್ನೂ ಪತ್ತೆ ಮಾಡಲಾಗಿದೆ. ಅಲ್ಲಿಗೂ ಶಂಕಿತರನ್ನು ಕರೆದೊಯ್ದು ಮಾಹಿತಿ ಕಲೆಹಾಕಲಾಗಿದೆ. ಮಹತ್ವದ ಸಂಗತಿಗಳು ಗೊತ್ತಾಗಿದ್ದು, ಅವುಗಳನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಕಸ್ಟಡಿ ಅಂತ್ಯ: ‘ಮುಸಾವೀರ್ ಹಾಗೂ ಅಬ್ದುಲ್ ತಾಹಾ ಕಸ್ಟಡಿ ಅವಧಿ ಏಪ್ರಿಲ್ 29ರಂದು ಮುಕ್ತಾಯವಾಗಲಿದೆ. ನಿಗದಿತ ಸಮಯದಂದು ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT