ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ್ಯುಸ್ವರೂಪಿಯಾದ ಕಾಮಗಾರಿ:ಹೆಚ್ಚಿದ ಆತಂಕ

ಯಲಹಂಕ ಉಪನಗರದ ಡೈರಿ ಸರ್ಕಲ್ ಬಳಿ ಗ್ರೇಡ್‌ ಸಪರೇಟರ್‌ ಫ್ಲೈಓವರ್‌ l ರಸ್ತೆ ತುಂಬೆಲ್ಲಾ ಗುಂಡಿ lವಾಹನ ಸವಾರರ ಪರದಾಟ
Last Updated 19 ಅಕ್ಟೋಬರ್ 2018, 19:37 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ಉಪನಗರ ಡೈರಿ ಸರ್ಕಲ್ ಬಳಿ ನಿರ್ಮಾಣ ಹಂತದಲ್ಲಿರುವ ಗ್ರೇಡ್ ಸಪರೇಟರ್ ಫ್ಲೈಓವರ್ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಸ್ಥಳೀಯರಲ್ಲಿ ಪ್ರಾಣಭೀತಿ ಹೆಚ್ಚಿಸಿದೆ.

ಮೊದಲು, ಈ ರಸ್ತೆಯಲ್ಲಿ ದಟ್ಟಣೆ ಸಮಯದಲ್ಲಿ ಮಾತ್ರ ಟ್ರಾಫಿಕ್ ಕಿರಿಕಿರಿ ಇರುತಿತ್ತು. ಕಾಮಗಾರಿ ಆರಂಭಗೊಂಡ ಬಳಿಕ ದಿನಪೂರ್ತಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ.

ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ ಟೆಂಡರ್ ಕರೆದು ವರ್ಷಗಳೇ ಕಳೆದಿವೆ.ಕಾಮಗಾರಿ ಇನ್ನೂ ಆರಂಭಿಕ ಹಂತದಲ್ಲಿ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಯಶವಂತಪುರ ಮಾರ್ಗವಾಗಿ ಯಲಹಂಕ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಈ ರಸ್ತೆ ಮೂಲಕ ಹಾದುಹೋಗಬೇಕು. ಹೀಗಾಗಿ ವಾಹನ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಅಧಿಕಾರಿಗಳು ಹೈರಾಣಗುತ್ತಿದ್ದಾರೆ.

‘ಕಾಮಗಾರಿ ಪ್ರಾರಂಭಕ್ಕೂ ಮುನ್ನ ಉತ್ತಮ ಟಾರ್ ರಸ್ತೆಯಿದ್ದ ಜಾಗದಲ್ಲಿ ಇಂದು, ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿದ್ದು, ಪ್ರತಿ ಗಂಟೆಗೆ 10 ಕಿ.ಮೀ ವೇಗದಲ್ಲಿಯೂ ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ’ ಎಂದು ಸ್ಥಳೀಯರಾದ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.

‘ಯಲಹಂಕದಲ್ಲಿಯೇ ಈ ಸರ್ಕಲ್ ಅತ್ಯಂತ ದೊಡ್ಡ ವ್ಯಾಪಾರ ವಹಿವಾಟಿನ ಕೇಂದ್ರವಾಗಿದೆ. ಇಲ್ಲಿ ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟಿ, ವ್ಯಾಪಾರ ಮಾಡುತ್ತಿದ್ದೇವೆ. ಕಾಮಗಾರಿ ಪ್ರಾರಂಭವಾದ ನಂತರ ದೂಳಿನ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಗ್ರಾಹಕರ ಸಂಖ್ಯೆ ಇಳಿಮುಖವಾಗಿದ್ದು, ಅಂಗಡಿಗಳನ್ನು ಮುಚ್ಚಬೇಕಾದ ಸ್ಥಿತಿಗೆ ತಲುಪಿದ್ದೇವೆ’ ಎನ್ನುತ್ತಾರೆ ಇಲ್ಲಿನ ಬೇಕರಿಯೊಂದರ ಮ್ಯಾನೇಜರ್.

‘ಇಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳ ಸಂಖ್ಯೆ ಏನೂ ಕಡಿಮೆ ಇಲ್ಲ. ಕಾಮಗಾರಿಗಾಗಿ ಇಲ್ಲಿದ್ದ ಎಲ್ಲ ಬೀದಿ ದೀಪಗಳನ್ನು ತೆಗೆಯಲಾಗಿದೆ. ಕುಡಿದು ಬರುವವರು ದಾರಿ ಕಾಣದೆ ಹಳ್ಳಕ್ಕೆ ಬಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವುದು ನಿತ್ಯವೂ ನಡೆಯುತ್ತಿರುವ ಸಂಗತಿ’ ಎನ್ನುತ್ತಾರೆ ಆಟೊ ಚಾಲಕ ಅರವಿಂದ್.

‘ಮಳೆ ಬಂದಾಗ ಈ ರಸ್ತೆ ಪರಿಸ್ಥಿತಿ ವಿವರಿಸಲು ಸಾಧ್ಯವೇ ಇಲ್ಲ. ಸಂಪೂರ್ಣ ಕೆಸರು ಗದ್ದೆ ಆಗಿಬಿಡುತ್ತದೆ. ದೇವನಹಳ್ಳಿಯ ಮಾರ್ಗವಾಗಿ ಕಲ್ಲು ಜಲ್ಲಿ ಸಾಗಿಸುತ್ತಿದ್ದ ಲಾರಿಯೊಂದು ರಾತ್ರಿ ಮಗುಚಿ ಬಿದ್ದಿತ್ತು. ಅಹೋರಾತ್ರಿ ಕಾರ್ಯಾಚರಣೆ ನಡೆಸಿ ಅದನ್ನು ತೆರವುಗೊಳಿಸಲಾಯಿತು’ ಎಂದರು ಆರ್‌ಡಬ್ಲೂಎಫ್ ನಿವಾಸಿ ರಾಜಣ್ಣ.

ಕಾಮಗಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಮಾತನಾಡಿಸಿದಾಗ, ‘ಸರ್... ವರ್ಷ ಆಯ್ತು ಟೆಂಡರ್ ಆಗಿ, ಆರು ತಿಂಗಳಿನಿಂದ ಕಾಮಗಾರಿ ಪ್ರಗತಿಯಲ್ಲಿದೆ. ಇದೊಂದು ಮುಖ್ಯರಸ್ತೆ ಆಗಿರುವುದರಿಂದ ವಾಹನ ದಟ್ಟಣೆ ಬೇರೆ ಹೆಚ್ಚು. ಮೊದಲು ಸರ್ವೀಸ್ ರಸ್ತೆ ನಿರ್ಮಿಸಬೇಕು. ಆನಂತರ ಪಿಲ್ಲರ್ ಹಾಕಿ ಫ್ಲೈಒವರ್ ನಿರ್ಮಾಣ ಮಾಡಬೇಕು. ಇದೆಲ್ಲಾ ಆಗಲು ಇನ್ನೂ ಕನಿಷ್ಠ ಮೂರು ವರ್ಷ ಬೇಕು' ಎಂದು ವಿವರಿಸುತ್ತಾರೆ.

‘ಈಗಾಗಲೇ ಕಾಮಗಾರಿಗಾಗಿ ಮರಗಳ ಆಹುತಿ ಆಗಿದೆ. ಇವುಗಳನ್ನು ಸ್ಥಳಾಂತರ ಮಾಡುವುದಾಗಿ ಮರಗಳನ್ನು ಕತ್ತರಿಸಿದ್ದಾರೆ. ಇನ್ನೂ ಎರಡು ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದರಿಂದ 5–6 ದಶಕಗಳಿಂದಿರುವ ಮರಗಳು ಕಣ್ಮರೆಯಾಗಿವೆ. ಪರಿಸರದೊಂದಿಗೆ ಸಮನ್ವಯ ಕಾಯ್ದುಕೊಂಡು ಅಭಿವೃದ್ಧಿ ಮಾಡಬೇಕು’ ಎನ್ನುತ್ತಾರೆ ಸ್ಥಳೀಯರಾದ ಪ್ರತಾಪ್‌.

ಯಾವ ಮುನ್ನೆಚ್ಚರಿಕೆ ವಹಿಸಬೇಕು?

ನ್ಯಾಷನಲ್ ಬಿಲ್ಡಿಂಗ್ ಕೋಡ್ ಅಫ್ ಇಂಡಿಯಾ ಪ್ರಕಾರ ಕಾಮಗಾರಿ ಸ್ಥಳದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು:


* ಕಾಮಗಾರಿ ಸ್ಥಳದ ನಾಲ್ಕೂ ಕಡೆಗೆ ನಿಗದಿತ ಅಂತರದಲ್ಲಿ ಬ್ಯಾರಿಕೇಡ್‌ ಅಳವಡಿಸಬೇಕು

* ಎಲ್ಲರಿಗೂ ಎಲ್ಲೆಡೆಯಿಂದ ಕಾಣುವ ರೀತಿಯಲ್ಲಿ ಬ್ಯಾರಿಕೇಡ್‌ಗೆ ಬಣ್ಣ ಹಚ್ಚಿರಬೇಕು

* ಬ್ಯಾರಿಕೇಡ್‌ ಹಿಂದೆ ’ಕಾಮಗಾರಿ ಪ್ರಗತಿಯಲ್ಲಿದೆ. ನಿಧಾನವಾಗಿ ಚಲಿಸಿ’ ಎಂಬ ಫಲಕವಿರಬೇಕು

* ಕಾಮಗಾರಿ ಸ್ಥಳದಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದರೆ ಮಿಣುಕು ದೀಪ ಬೆಳಗಿಸಬೇಕು

* ಪ್ರತಿಫಲಕಗಳ (ರಿಫ್ಲೆಕ್ಟರ್‌), ಪ್ರತಿಫಲಕ ಪಟ್ಟಿಗಳನ್ನು ಕಾಮಗಾರಿ ಸ್ಥಳದಲ್ಲಿ ಅಳವಡಿಸಬೇಕು.

* ಪರ್ಯಾಯ ಸಂಚಾರದ ರಸ್ತೆಗಳ ಬಗ್ಗೆ ಸೂಕ್ತ ಮಾಹಿತಿ ನೀಡುವ ಫಲಕವಿರಬೇಕು

* ಗುತ್ತಿಗೆದಾರರು ನಿಯಮಾನುಸಾರ ಸುರಕ್ಷತಾ ಕ್ರಮ ಕೈಗೊಳ್ಳಬೇಕು

* ಕಾಮಗಾರಿ ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸಿ, ಸಾರ್ವಜನಿಕರಿಗೆ ಮಾಹಿತಿ, ಸಲಹೆ ನೀಡಲು ಕ್ರಮವಹಿಸಬೇಕು

ಈಗಾಗಲೇ ಒಂದು ಪ್ರಾಣ ಬಲಿ

ಆಗಸ್ಟ್‌ 17ರಂದು ಫ್ಲೈಓವರ್ ನಿರ್ಮಾಣಕ್ಕಾಗಿ ತೆಗೆದಿದ್ದ ಗುಂಡಿಯಲ್ಲಿ ಬಿಬಿಎಂಪಿ ವಾರ್ಡ್ ನಂ.3 ರ ನಿವಾಸಿ ಗಂಗಾಧರ್‌ ಎಂಬುವರು ದ್ವಿಚಕ್ರ ವಾಹನ ಸಮೇತ ಬಿದ್ದು, ಸಾವನಪ್ಪಿದ್ದರು. ಈ ಸಂಬಂಧ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಾಗಿದೆ.

‘ನನ್ನ ಗಂಡ ಮೃತಪಟ್ಟಾಗ ಎಂಎಲ್‌ಎ ವಿಶ್ವನಾಥ್‌ ಅವರು ಬಳಿ ಹೋಗಿದ್ವಿ ಅವರು ಸಿಗಲಿಲ್ಲ. ಬಿಬಿಎಂಪಿ ಸದಸ್ಯರು ಸೌಜನ್ಯಕ್ಕಾದರೂ ಬಂದು ನನ್ನನ್ನು ಭೇಟಿ ಮಾಡಲಿಲ್ಲ. ಸರ್ಕಾರದಿಂದ ಪರಿಹಾರದ ಹಣ ಬಂದರೆ ಕುಟುಂಬಕ್ಕೆ ಆರ್ಥಿಕ ಬಲ ಬರುತ್ತದೆ’ ಎಂದು ಮೃತರ ಪತ್ನಿ ಪದ್ಮ ದುಃಖ ತೋಡಿಕೊಂಡರು.

*****

ಫ್ಲೈಓವರ್‌ ಕಾಮಗಾರಿ ಮುಗಿಯುವವರೆಗೂ ಸಂದೀಪ್‌ ಉನ್ನಿಕೃಷ್ಣನ್‌ ರಸ್ತೆಯನ್ನು ಸಾರ್ವಜನಿಕರು ಕಡಿಮೆ ಬಳಸಬೇಕು. ಇತರೆ ಪರ್ಯಾಯ ರಸ್ತೆಗಳನ್ನು ಬಳಸಲು ಮನವಿ ಮಾಡುತ್ತೇನೆ. ಅದಷ್ಟು ಇಲಾಖೆ ವತಿಯಿಂದ ಟ್ರಾಫಿಕ್‌ ಸಮಸ್ಯೆ ಬಗೆಹರಿಸುತ್ತಿದ್ದೇವೆ. ಮಳೆ ಬಂದಾಗ ಆ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಹೂತುಕೊಳ್ಳುತ್ತವೆ. ಯಾವ ಇಲಾಖೆ ರಸ್ತೆ ಅಗೆದಿದ್ದಾರೆ ಎನ್ನುವುದನ್ನು ಕಂಡು ಹಿಡಿಯಲು ಸಾಧ್ಯವಾಗದಷ್ಟು ರಸ್ತೆ ಹಾಳಾಗಿದೆ.

ಸಬ್‌ ಇನ್‌ಸ್ಪೆಕ್ಟರ್‌, ಯಲಹಂಕ ಸಂಚಾರ ಪೊಲೀಸ್‌ ಠಾಣೆ

ಯಲಹಂಕ ಕೆಎಚ್‌ಬಿ ಕಾಲೊನಿಯಲ್ಲಿ ಈ ರಸ್ತೆ ಮುಚ್ಚಿ ಕಾಮಗಾರಿ ಮಾಡಲು ಸಾಧ್ಯವಿಲ್ಲ. ಈಗಾಗಲೇ ಅವಶ್ಯವಿರುವ ಬ್ಯಾರಿಕೇಡ್‌ ಹಾಕಿ ಟ್ರಾಫಿಕ್‌ ನಿರ್ವಹಣೆ ಮಾಡಲಾಗುತ್ತಿದೆ. ವಿದ್ಯುತ್‌ ತಂತಿಗಳನ್ನು ಭೂಮಿಯೊಳಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲ ರೀತಿ ಕ್ರಮ ಕೈಗೊಳ್ಳಲಾಗುತ್ತದೆ

ಸತೀಶ್‌, ವಾರ್ಡ್‌ ನಂ.4 ಬಿಬಿಎಂಪಿ ಸದಸ್ಯ

ಫ್ಲೈಓವರ್‌ ನಿರ್ಮಾಣ ಕಾಮಗಾರಿ ಪೂರ್ಣವಾದರೆ ಜನರಿಗೆ ಅನುಕೂಲವಾಗುತ್ತದೆ. ಮುಂದಿನ ಜನವರಿ ಒಳಗೆ ಕಾಮಗಾರಿ ಪೂರೈಸಲು ಗುತ್ತಿಗೆದಾರರಿಗೆ ತಿಳಿಸಿದ್ದೇವೆ. ಈ ಕಾಮಗಾರಿಗೆ ಅನುದಾನ ತರಲು ಸಾಕಷ್ಟು ಶ್ರಮಿಸಿದ್ದೇವೆ.

ನೇತ್ರಾ ಪಲ್ಲವಿ, ವಾರ್ಡ್‌ ನಂ.3 ಬಿಬಿಎಂಪಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT