ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿಗೆ ₹35 ಲಕ್ಷ, ನಿರ್ವಹಣೆಗೆ ₹38 ಲಕ್ಷ!

ಬಿಬಿಎಂಪಿಗೆ ದುಬಾರಿಯಾದ 25 ಹೊಸ ಕಾಂಪ್ಯಾಕ್ಟರ್‌ಗಳು
Last Updated 24 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಆರ್ಥಿಕ ಸಂಕಷ್ಟದ ನಡುವೆಯೂ ₹ 8.88 ಕೋಟಿ ವೆಚ್ಚದಲ್ಲಿ 25 ಹೊಸ ಕಾಂಪ್ಯಾಕ್ಟರ್‌ಗಳನ್ನು ಖರೀದಿಸಿರುವ ಬಿಬಿಎಂಪಿಯು ಅವುಗಳ ನಿರ್ವಹಣೆಗಾಗಿ ವಾರ್ಷಿಕ ₹1.93 ಕೋಟಿ ಖರ್ಚು ಮಾಡಲು ಹೊರಟಿರುವುದು ಇದೀಗ ಅನೇಕರ ಹುಬ್ಬೇರಿಸುವಂತೆ ಮಾಡಿದೆ.

ಹದಗೆಟ್ಟ ಆರ್ಥಿಕ ಸ್ಥಿತಿಯಲ್ಲಿ ಪಾಲಿಕೆಯು ಹೊಸ ಕಾಂಪ್ಯಾಕ್ಟರ್‌ಗಳ ಐದು ವರ್ಷಗಳ ನಿರ್ವಹಣೆಗಾಗಿ ಕಾಂಪ್ಯಾಕ್ಟರ್‌ ಮಾರಾಟ ಮಾಡಿರುವ ಕಂಪೆನಿಗೆ ₹9.65 ಕೋಟಿ ಪಾವತಿಸಲು ಒಪ್ಪಿಕೊಂಡಿರುವುದು ಅನುಮಾನಕ್ಕೆ ಎಡೆಮಾಡಿದೆ.

‘ಒಂದು ಕಾಂಪ್ಯಾಕ್ಟರ್‌ ಬೆಲೆ ₹35.5 ಲಕ್ಷ. ಆದರೆ ಅದರ ಐದು ವರ್ಷದ ನಿರ್ವಹಣೆಗಾಗಿ ನೀಡುವ ಮೊತ್ತವೇ ₹38.6 ಲಕ್ಷ! ವಿಶೇಷವೆಂದರೆ ಈ ನಿರ್ವಹಣೆ ಮೊತ್ತದಲ್ಲಿ ಇಂಧನ ವೆಚ್ಚ, ರಿಪೇರಿ ಮತ್ತು  ಚಾಲಕರ ಸಂಬಳ ಸಹ ಸೇರಿಲ್ಲ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪಾಲಿಕೆಯ ಅಧಿಕಾರಿಯೊಬ್ಬರು.

ಈ ಕುರಿತಂತೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಜಿ.ಕುಮಾರ್‌ ನಾಯಕ್‌ ‘ನಿರ್ವಹಣಾ ವೆಚ್ಚ ಕೆಲವರ ಗಮನ ಸೆಳೆದಿರಬಹುದು. ಆದರೆ ತಾಜ್ಯ ವಿಲೇವಾರಿ ವ್ಯವಸ್ಥಿತವಾಗಿ ನಡೆಯಬೇಕಾದರೆ ನಿರ್ವಹಣೆಗೆ ಅಷ್ಟು ವೆಚ್ಚ ಮಾಡಲೇಬೇಕಾಗುತ್ತದೆ’ ಎಂದು ಹೇಳಿದರು.

‘ಕಾಂಪ್ಯಾಕ್ಟರ್‌ ಪೂರೈಕೆಗಾಗಿ ಇ–ಪ್ರೊಕ್ಯೂರ್‌ಮೆಂಟ್‌ ಮೂಲಕ ಕರೆದ ಟೆಂಡರ್‌ನಲ್ಲಿ ಮೂರ್ನಾಲ್ಕು ಕಂಪೆನಿಗಳು ಮಾತ್ರ ಭಾಗವಹಿಸಿದ್ದವು. ಆ ಪೈಕಿ ನಮಗೆ ಸೂಕ್ತವಾದ ಬೆಲೆಯಲ್ಲಿ ಕಾಂಪ್ಯಾಕ್ಟರ್‌ ಪೂರೈಸಲು ಒಪ್ಪಿದ ಕಂಪೆನಿಯಿಂದ ಖರೀದಿಸಿದ್ದೇವೆ’ ಎಂದು ತಿಳಿಸಿದರು.

‘ಬಿಬಿಎಂಪಿಗೆ ಇನ್ನು 225 ಕಾಂಪ್ಯಾಕ್ಟರ್‌ಗಳ ಅಗತ್ಯವಿದೆ. ಸದ್ಯ 25 ಖರೀದಿಸಿದ್ದೇವೆ. ಉಳಿದವುಗಳನ್ನು ಮುಂದಿನ ವರ್ಷದಲ್ಲಿ ಖರೀದಿಸಲಾಗುತ್ತದೆ’ ಎಂದರು.

ಕಾಂಪ್ಯಾಕ್ಟರ್‌ ಹಗರಣ: ‘ಬುದ್ದಿ ಇರುವ ಯಾವ ವ್ಯಕ್ತಿ ತಾನೇ ವಾಹನವನ್ನು ಖರೀದಿಸಿದ ಮೊತ್ತಕ್ಕಿಂತ ಅಧಿಕ ಹಣವನ್ನು ನಿರ್ವಹಣೆಗೆ ನೀಡುತ್ತಾನೆ? ಅನೇಕ ಐಎಎಸ್‌ ಅಧಿಕಾರಿಗಳು ಸೇರಿ ನಡೆಸುತ್ತಿರುವ ಸಂಸ್ಥೆಯಿಂದ ಇಂತಹ ಒಪ್ಪಂದ ನಿರೀಕ್ಷಿಸಲು ಸಾಧ್ಯವೇ? ಇದು ಉದ್ದೇಶಪೂರ್ವಕವಾಗಿಯೇ ಸಾರ್ವಜನಿಕ ಹಣವನ್ನು ಕಬಳಿಸುವ ತಂತ್ರ’ ಎನ್ನುತ್ತಾರೆ ಮಾಜಿ ಉಪ ಮೇಯರ್‌ ಎಸ್‌.ಹರೀಶ್‌.

‘ಇತ್ತೀಚೆಗಷ್ಟೇ ಸ್ವಚ್ಛ ಭಾರತ ಅಭಿಯಾನದಡಿ ಬಿಬಿಎಂಪಿಗೆ ಬಂದಿರುವ ₹73 ಕೋಟಿ ಕೇಂದ್ರ ಸರ್ಕಾರದ ಅನುದಾನವನ್ನು ಈ ರೀತಿಯ ಖರೀದಿ ಹೆಸರಿನಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ’ ಎಂದು ಹರೀಶ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT