ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ವಿವಾದದಲ್ಲಿ ಸಚಿವ ಶರಣಪ್ರಕಾಶ!

Last Updated 5 ಮೇ 2017, 4:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಬೇರೊಬ್ಬರಿಗೆ ಹಂಚಿಕೆ ಮಾಡಲಾದ 4,000 ಚದರ ಅಡಿ ನಿವೇಶನದ ಮೇಲೆ ಹಕ್ಕು ಸಾಧಿಸಲು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಪ್ರಯತ್ನಿಸಿ, ವಿವಾದಕ್ಕೆ ಸಿಲುಕಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಶರಣಪ್ರಕಾಶ ಪಾಟೀಲ ಅವರಿಗೆ 2005ರಲ್ಲಿ ಎಚ್‌ಬಿಆರ್ ಬಡಾವಣೆಯಲ್ಲಿ 2,400 ಚದರ ಅಡಿ ಜಾಗವನ್ನು ‘ಜಿ–ಕೆಟಗೆರಿ’ಯಡಿ ಮಂಜೂರು ಮಾಡಿತ್ತು. ಅದನ್ನು 2007ರಲ್ಲಿ ಪಾಟೀಲ ಅವರ ಹೆಸರಿಗೆ ನೋಂದಣಿ ಮಾಡಿಸಲಾಗಿತ್ತು.

ಆದರೆ, ಶರಣಪ್ರಕಾಶ ಅವರು ಎಚ್‌ಬಿಆರ್‌ ಲೇಔಟ್‌ನಲ್ಲಿ ತಮಗೆ ಮಂಜೂರು ಮಾಡಿರುವ ನಿವೇಶನಕ್ಕೆ ಬದಲಾಗಿ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ನಿವೇಶನ ಕೊಡುವಂತೆ ಬಿಡಿಎಗೆ ಮನವಿ ಸಲ್ಲಿಸಿದರು.  ಸಚಿವರ ಅರ್ಜಿಯನ್ನು ಮಾನ್ಯ ಮಾಡಿದ ಬಿಡಿಎ  ಎಚ್‌ಎಸ್‌ಆರ್‌ ಲೇಔಟ್‌ ಸೆಕ್ಟರ್‌–3ರಲ್ಲಿ ನಿವೇಶನ ಸಂಖ್ಯೆ 1089 ಅನ್ನು  2012ರ ಏಪ್ರಿಲ್ 18ರಂದು ಹಂಚಿಕೆ ಮಾಡಿತು.

ಈ ನಿವೇಶನವನ್ನು 2011 ಡಿಸೆಂಬರ್‌ 1ರಂದು  ಬಿಡಿಎ ಆರ್. ಗುಣಶೇಖರ್ ಎಂಬುವರಿಗೆ ಹಂಚಿಕೆ ಮಾಡಿತ್ತು. ಹಿಂದಿನ ದಾಖಲೆಗಳನ್ನು ಪರಿಶೀಲಿಸದೆ ಸಚಿವರಿಗೆ ಮರು ಹಂಚಿಕೆ ಮಾಡಲಾಗಿದೆ.

2014ರ ಅಕ್ಟೋಬರ್‌ 10ರಂದು ಈ ನಿವೇಶನವನ್ನು ಗುಣಶೇಖರ್‌ ಅವರ ಹೆಸರಿಗೆ ನೋಂದಣಿ ಮಾಡಿದೆ. ಮೂರು ದಿನಗಳ ಬಳಿಕ ಸ್ವಾಧೀನ ಪತ್ರವನ್ನೂ ನೀಡಿದೆ. ಇದಾದ 16 ದಿನಗಳ ಬಳಿಕ ಗುಣಶೇಖರ್ ಈ ನಿವೇಶನವನ್ನು ಓ.ಜೆ. ಸಂಜಯ್‌ ಎಂಬುವರಿಗೆ ಮಾರಾಟ ಮಾಡಿದ್ದಾರೆ. ಸಂಜಯ್‌ ಅದನ್ನು ಎಂ. ಕುಮಾರ್ ಎಂಬುವರಿಗೆ 2015ರ ಸೆಪ್ಟೆಂಬರ್ 30ರಂದು ₹ 3.5 ಕೋಟಿಗೆ ಮಾರಾಟ ಮಾಡಿದ್ದು, ಈಗ ಅದು ಕುಮಾರ್‌ ಸ್ವಾಧೀನದಲ್ಲಿದೆ.

ಆದರೀಗ ಕುಮಾರ್‌ ಅವರಿಗೆ ತಮ್ಮ ನಿವೇಶನದ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.‘ನನಗೆ ಹಲವಾರು ಬೆದರಿಕೆ ಕರೆಗಳು ಬರುತ್ತಿವೆ. ನಿವೇಶನದ ಬಳಿ ಹೋಗದಂತೆ ಸ್ಥಳೀಯ ಪೊಲೀಸರು ಸಲಹೆ ನೀಡುತ್ತಿದ್ದಾರೆ. ₹ 3.5 ಕೋಟಿ ಕೊಟ್ಟು ಈ ನಿವೇಶನ ಖರೀದಿಸಿದ್ದು,  ಅದಕ್ಕಾಗಿ ಪಡೆದ ಸಾಲದ ಬಾಬ್ತು ತಿಂಗಳ ಕಂತು ಪಾವತಿಸುತ್ತಿದ್ದೇನೆ’ ಎಂದಿದ್ದಾರೆ.

‘ನಿವೇಶನ ಖರೀದಿಗೂ ಮುನ್ನ ನಾಲ್ಕು ಪ್ರಮುಖ ಪತ್ರಿಕೆಗಳಲ್ಲಿ  ಜಾಹೀರಾತು ಪ್ರಕಟಿಸಿದ್ದೇನೆ. ಆಗ ಯಾವುದೇ ಆಕ್ಷೇಪಣೆಗಳು ಬಂದಿರಲಿಲ್ಲ. ಈಗ ನನ್ನ ಆಸ್ತಿ ನಾನು ಅನುಭವಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಕಡಿಮೆ ನಿವೇಶನ ಹಂಚಿಕೆ: ‘ಬಿಡಿಎ 2005ರಲ್ಲಿ 4000 ಚ.ಅಡಿ ನಿವೇಶನ ನೀಡುವುದಾಗಿ ಒಪ್ಪಿಕೊಂಡಿತ್ತು. ಆದರೆ, 2007ರಲ್ಲಿ 2400 ಚ.ಅಡಿ ನಿವೇಶನ ಹಂಚಿಕೆ ಮಾಡಿತು. 

ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಕುಮಾರ್ ಎಂಬುವರ ಸ್ವಾಧೀನದಲ್ಲಿರುವ ನಿವೇಶನವನ್ನು ಪ್ರಿಯಾಂಕ್‌ ಖರ್ಗೆ (ಮಾಹಿತಿ ತಂತ್ರಜ್ಞಾನ ಸಚಿವ) ಅವರಿಗೆ ಹಿಂದೆ ಹಂಚಿಕೆ ಮಾಡಲಾಗಿತ್ತು. ಅವರು 2012ರಲ್ಲಿ ಸರ್ಕಾರಕ್ಕೆ ವಾಪಸ್‌ ಮಾಡಿದ್ದರು, ಅವರು ಮರಳಿಸಿದ ನಿವೇಶನವನ್ನು ನನಗೆ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದೆ. ಅದನ್ನು ಬಿಡಿಎ ಅಧಿಕಾರಿಗಳು ಮಾನ್ಯ ಮಾಡಿದ್ದಾರೆ’ ಎಂದು ಸಚಿವ ಶರಣಪ್ರಕಾಶ ಪಾಟೀಲ ವಿವರಿಸಿದರು.

ಈ ಬಗ್ಗೆ ವಿವರಣೆ ಕೇಳಲು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ಅವರನ್ನು ದೂರವಾಣಿ ಮೂಲಕ ಪ್ರಯತ್ನಿಸಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT