ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಫಲಿತಾಂಶ | ಬೀದರ್‌: ಸ್ಥಾನ ಕುಸಿದರೂ ಫಲಿತಾಂಶ ಹೆಚ್ಚಳ

Published 11 ಏಪ್ರಿಲ್ 2024, 6:34 IST
Last Updated 11 ಏಪ್ರಿಲ್ 2024, 6:34 IST
ಅಕ್ಷರ ಗಾತ್ರ

ಬೀದರ್‌: 2023–24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ ಬೀದರ್‌ ಜಿಲ್ಲೆಯ ಸ್ಥಾನ ಕುಸಿದರೂ ಒಟ್ಟಾರೆ ಫಲಿತಾಂಶ ಹೆಚ್ಚಳವಾಗಿರುವುದು ವಿಶೇಷ.

ಬೀದರ್‌ ಜಿಲ್ಲೆಗೆ ಒಟ್ಟಾರೆ ಶೇ 81.69ರಷ್ಟು ಫಲಿತಾಂಶ ಬಂದಿದೆ. ಹೋದ ವರ್ಷಕ್ಕೆ ಹೋಲಿಸಿದಲ್ಲಿ ಶೇ 3.69ರಷ್ಟು ಹೆಚ್ಚಿಗೆ ಫಲಿತಾಂಶ ಬಂದಿದೆ. ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್‌ ಜಿಲ್ಲೆ 19ನೇ ಸ್ಥಾನ ಪಡೆದಿದೆ. ಹೋದ ವರ್ಷಕ್ಕಿಂತ ಒಂದು ಸ್ಥಾನ ಕೆಳಗೆ ಕುಸಿದಿದೆ.

2023ನೇ ಸಾಲಿನಲ್ಲಿ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ 78ರಷ್ಟು ಬಂದಿತ್ತು. ಆಗ 18ನೇ ಸ್ಥಾನ ಪಡೆದಿತ್ತು. ಈ ವರ್ಷ ಶೇ 3.69ರಷ್ಟು ಫಲಿತಾಂಶ ಹೆಚ್ಚಿಗೆ ಬಂದಿದೆ.

ಪರೀಕ್ಷೆಗೆ ಒಟ್ಟು 19,227 ಫ್ರೆಶರ್‌ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 15,707 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇನ್ನು, ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಗ್ರಾಮೀಣರು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶೇ 87.76ರಷ್ಟು ಗ್ರಾಮೀಣ ಪ್ರದೇಶದವರು ಉತ್ತೀರ್ಣರಾಗಿದ್ದಾರೆ. ಶೇ 80.17ರಷ್ಟು ನಗರ ಪ್ರದೇಶದ ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಇನ್ನು, ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ 89.76ರಷ್ಟು ವಿಜ್ಞಾನ ವಿಭಾಗಕ್ಕೆ ಫಲಿತಾಂಶ ಬಂದಿದೆ. ಒಟ್ಟು 12,680 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 11,382 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ವಾಣಿಜ್ಯ ವಿಭಾಗ ನಂತರದ ಸ್ಥಾನದಲ್ಲಿದೆ. ಪರೀಕ್ಷೆ ಬರೆದ 2,278 ವಿದ್ಯಾರ್ಥಿಗಳ ಪೈಕಿ 1,655 ಜನ ಪಾಸಾಗಿದ್ದಾರೆ. ಇನ್ನು, ಕಲಾ ವಿಭಾಗಕ್ಕೆ ಶೇ 62.54 ಫಲಿತಾಂಶ ಬಂದಿದೆ. ಒಟ್ಟು 4,269 ವಿದ್ಯಾರ್ಥಿಗಳಲ್ಲಿ 2,670 ಮಂದಿ ಉತ್ತೀರ್ಣರಾಗಿದ್ದಾರೆ.

ಫಲಿತಾಂಶ ಸುಧಾರಣೆಗೇನು ಕಾರಣ?:

ಪ್ರತಿ ವರ್ಷ ಪಿಯು ಫಲಿತಾಂಶ ಬಂದಾಗ ಬೀದರ್‌ ಸೇರಿದಂತೆ ಕಲ್ಯಾಣ ಕರ್ನಾಟಕದ ಯಾವುದಾದರೂ ಒಂದು ಜಿಲ್ಲೆ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿ ಇರುತ್ತಿತ್ತು. ಈ ಸಲ ಹಾಗೆ ಆಗಿಲ್ಲ. ಬೀದರ್‌ ಸೇರಿದಂತೆ ಕಲ್ಯಾಣ ಕರ್ನಾಟಕದ ಇತರೆ ಜಿಲ್ಲೆಗಳು ಉತ್ತಮ ಸಾಧನೆ ತೋರಿವೆ.

ಹೋದ ವರ್ಷ ಬೀದರ್‌ ಜಿಲ್ಲೆ 18ನೇ ಸ್ಥಾನದಲ್ಲಿತ್ತು. ಈ ವರ್ಷ 19ನೇ ಸ್ಥಾನಕ್ಕೆ ಕುಸಿದಿದೆ. ಆದರೆ, ಫಲಿತಾಂಶ ಮಾತ್ರ ಏರಿಕೆ ಕಂಡಿದೆ. ಫಲಿತಾಂಶ ಸುಧಾರಣೆಗೆ ಡಿಡಿಪಿಯು ಕಚೇರಿ ವಾರ್ಷಿಕ ಪರೀಕ್ಷೆಯ ಆರು ತಿಂಗಳ ಮುಂಚಿನಿಂದಲೇ ಸಿದ್ಧತೆ ನಡೆಸಿದ್ದು ಪ್ರಮುಖ ಕಾರಣ.

ಜಿಲ್ಲೆಯ ಪ್ರಾಂಶುಪಾಲರು, ಉಪನ್ಯಾಸಕರ ಸಂಘಗಳ ಸಭೆ ಕರೆದು, ಓದಿನಲ್ಲಿ ಯಾವ ವಿದ್ಯಾರ್ಥಿಗಳು ಹಿಂದಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಅವರಿಗೆ ವಿಶೇಷ ತರಗತಿಗಳನ್ನು ನಡೆಸಿದ ಪರಿಣಾಮ ಒಟ್ಟಾರೆ ಫಲಿತಾಂಶ ಸುಧಾರಣೆ ಕಂಡಿದೆ.

ಜಿಲ್ಲಾ ಪ್ರಾಂಶುಪಾಲರ ಸಂಘ ಉಪನ್ಯಾಸಕರ ಸಂಘಗಳ 2–3 ಸಭೆ ನಡೆಸಿ ಓದಿನಲ್ಲಿ ಹಿಂದೆಯಿದ್ದ ಮಕ್ಕಳಿಗೆ ಜಿಲ್ಲಾಮಟ್ಟದಲ್ಲಿ ವಿಶೇಷ ಕಾರ್ಯಾಗಾರ ತರಗತಿಗಳನ್ನು ನಡೆಸಿದ್ದರಿಂದ ಜಿಲ್ಲೆಯ ಒಟ್ಟಾರೆ ಫಲಿತಾಂಶ ಸುಧಾರಣೆ ಕಂಡಿದೆ. ಇದರಲ್ಲಿ ಎಲ್ಲರ ಶ್ರಮ ಇದೆ.
ಚಂದ್ರಕಾಂತ ಶಹಾಬಾದಕರ್‌ ಡಿಡಿಪಿಯು ಬೀದರ್‌
ಜಿಲ್ಲೆಯಲ್ಲಿ ಗರಿಷ್ಠ ಅಂಕ ಗಳಿಸಿದವರು
ಬೀದರ್‌ ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ಕರ್ನಾಟಕ ಪಿಯು ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ಗರಿಷ್ಠ ಅಂಕಗಳ ಸಾಧನೆ ಮಾಡಿದ್ದಾರೆ. 589 ಅಂಕ ಗಳಿಸಿ ಮೊದಲ ಸ್ಥಾನ ಗಳಿಸಿದ್ದಾರೆ. ಇನ್ನು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಕರಡ್ಯಾಳ ಕಾಲೇಜಿನ ಪ್ರೇಮ್‌ 587 ರಕ್ಷಿತಾ 592 ಅಂಕ ಗಳಿಸಿ ಕ್ರಮವಾಗಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಅಂಕಗಳ ಸಾಧನೆ ಮಾಡಿದ್ದಾರೆ. ಬೀದರ್‌ ಕರ್ನಾಟಕ ಕಾಲೇಜಿನ ಭಾಗ್ಯಲಕ್ಷ್ಮಿ ಮತ್ತು ನಿರ್ಣಾ ಸರ್ಕಾರಿ ಪಿಯು ಕಾಲೇಜಿನ ಸೈಫುನ್ನಿಸಾ ಕ್ರಮವಾಗಿ 587 584 ಅಂಕ ಗಳಿಸಿ ಕಲಾ ವಿಭಾಗದಲ್ಲಿ ದ್ವಿತೀಯ ತೃತೀಯ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಬಸವಕಲ್ಯಾಣದ ಲಿಲಿಯನ್‌ ಪಿಯು ಕಾಲೇಜಿನ ಜೀನತ್‌ ಅಮನ್‌ 581 ಅಂಕ ಬಸವಕಲ್ಯಾಣದ ಎಕ್ಸಿಲೆಂಟ್‌ ಪಿಯು ಕಾಲೇಜಿನ ಫೈಸಲ್‌ ಮುಬಿನ್‌ 579 ಅಂಕ ಗಳಿಸಿ ಜಿಲ್ಲೆಗೆ ಕ್ರಮವಾಗಿ ದ್ವಿತೀಯ ತೃತೀಯ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕರಡ್ಯಾಳ ಗುರುಕುಲದ ರಕ್ಷಿತಾ ಬಸವಕಲ್ಯಾಣದ ಬಸವೇಶ್ವರ ಕಾಲೇಜಿನ ಸುಷ್ಮಾ 591 ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬಸವಕಲ್ಯಾಣದ ಲಿಲಿಯನ್‌ ಪಿಯು ಕಾಲೇಜಿನ ಸುರಯ್ಯಾ ಬೀ ನೌಬಾದ್‌ ಶಾಹು ಮಹಾರಾಜ ಕಾಲೇಜಿನ ರುಚಿತಾ ಎಸ್‌. ಅಳ್ಳೆ ಕರಡ್ಯಾಳ ಗುರುಕುಲದ ರಕ್ಷಿತಾ 589 ಅಂಕ ಗಳಿಸಿ ಮೂವರು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಅಂಕಿ ಅಂಶ
19227 ಪರೀಕ್ಷೆಗೆ ಹಾಜರಾದವರು 15707 ಪಾಸಾದವರು 81.69% ಫಲಿತಾಂಶ ಕಲಾ ವಿಭಾಗ 4269 ಪರೀಕ್ಷೆ ಬರೆದವರು 2670 ಪಾಸಾದವರು 62.54% ಫಲಿತಾಂಶ ವಾಣಿಜ್ಯ ವಿಭಾಗ 2278 ಪರೀಕ್ಷೆ ಬರೆದವರು 1655 ಪಾಸಾದವರು 72.65% ಫಲಿತಾಂಶ ವಿಜ್ಞಾನ ವಿಭಾಗ 12680 ಪರೀಕ್ಷೆ ಬರೆದವರು 11382 ಪಾಸಾದವರು 89.76% ಫಲಿತಾಂಶ ನಗರ ಪ್ರದೇಶದವರು 15372 ಪರೀಕ್ಷೆ ಬರೆದವರು 12324 ಪಾಸಾದವರು 80.17% ಫಲಿತಾಂಶ ಗ್ರಾಮೀಣ ಪ್ರದೇಶದವರು 3855 ಪರೀಕ್ಷೆ ಬರೆದವರು 3383 ಪಾಸಾದವರು 87.76% ಫಲಿತಾಂಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT