ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಅವ್ಯವಸ್ಥೆಯ ಆಗರ ಜಾನುವಾರು ಮಾರುಕಟ್ಟೆ

ಸಾವಿರಾರು ಜಾನುವಾರುಗಳಿಗೆ ಒಂದೇ ನೀರಿನ ತೊಟ್ಟಿ
Published 2 ಏಪ್ರಿಲ್ 2024, 4:39 IST
Last Updated 2 ಏಪ್ರಿಲ್ 2024, 4:39 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿನ ಜಾನುವಾರು ಮಾರುಕಟ್ಟೆಯಲ್ಲಿ ಒಂದೇ ನೀರಿನ ತೊಟ್ಟಿಯಿದ್ದು, ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಎಲ್ಲೆಡೆ ಅಸ್ವಚ್ಛತೆ ತಾಂಡವಾಡುತ್ತಿದೆ.

ಹಿಂದಿನ ಒಂದು ಅವಧಿಯಿಂದ ಎಪಿಎಂಸಿ ಸದಸ್ಯರಿಗೆ ಅಧಿಕಾರವೇ ದೊರೆತಿಲ್ಲ. ಅಧಿಕಾರಿಗಳೇ ಎಲ್ಲವನ್ನೂ ನಿರ್ವಹಿಸುತ್ತಿದ್ದು ಈ ಕಡೆ ನಿರ್ಲಕ್ಷ ತೋರಲಾಗಿದೆ ಎಂದು ಜನರಿಂದ ಆರೋಪ ಕೇಳಿಬಂದಿದೆ.

ಮುಖ್ಯಬಸ್ ನಿಲ್ದಾಣದ ದಕ್ಷಿಣದಿಂದ ಮಾರುಕಟ್ಟೆಗೆ ಹೋಗಲು ದಾರಿ ಇದೆ. ಆದರೆ, ರಸ್ತೆ ಹದಗೆಟ್ಟಿದ್ದರಿಂದ ಧೂಳು ಏಳುತ್ತದೆ. ಮಳೆಯಾದಾಗ ಕೆಸರು ಆಗುತ್ತದೆ. ಅಲ್ಲದೆ ಪ್ರವೇಶ ದ್ವಾರದ ಎರಡೂ ಕಡೆಗಳಲ್ಲಿ ಆವರಣ ಗೋಡೆಗೆ ಹತ್ತಿಕೊಂಡು ಮುಳ್ಳಿನ ಪೊದೆಗಳಿವೆ. ಇಲ್ಲಿನ ಚರಂಡಿಯ ಸ್ವಚ್ಛತಾ ಕಾರ್ಯವೂ ನಡೆಯದೆ ಯಾವಾಗಲೂ ಹೊಲಸು ನೀರು ಸಂಗ್ರಹಗೊಂಡಿರುತ್ತದೆ.

ಆವರಣದೊಳಗೆ ಒಂದಕ್ಕೊಂದು ಹತ್ತಿಕೊಂಡೇ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿನ ಎರಡು ತೊಟ್ಟಿಗಳಿವೆ. ಇವುಗಳ ಸ್ವಚ್ಛತೆ ನಿಯಮಿತವಾಗಿ ನಡೆಯದ ಕಾರಣ ಪಾಚಿಗಟ್ಟಿದಂತಾಗಿ ದುರ್ನಾತ ಸೂಸುತ್ತದೆ. ಜಾನುವಾರುಗಳ ಆಶ್ರಯಕ್ಕಾಗಿರುವ ಶೆಡ್‌ಗಳು ಸಹ ದುಸ್ಥಿತಿಯಲ್ಲಿದ್ದು ಅದರೊಳಗೆ ಮುಳ್ಳಿನ ಹಾಗೂ ಇತರೆ ಗಿಡಗಳು ಬೆಳೆದಿವೆ.

‘ಭಾನುವಾರ ತಾಲ್ಲೂಕು ಹಾಗೂ ಸಮೀಪದ ಮಹಾರಾಷ್ಟ್ರದ ಜಾನುವಾರುಗಳನ್ನು ಮಾರಾಟಕ್ಕಾಗಿ ತರಲಾಗಿತ್ತು. ವಿಶಾಲವಾದ ಜಾಗದಲ್ಲಿ ಸಾವಿರಾರು ಜಾನುವಾರುಗಳು ಇದ್ದರೂ ಒಂದೇ ಒಂದು ಗಿಡ ಇಲ್ಲದ್ದರಿಂದ ಬಿಸಿಲಿನಿಂದ ತೊಂದರೆಯಾಯಿತು. ಜಾನುವಾರುಗಳ ನೀರಿನ ತೊಟ್ಟಿಯ ಸ್ವಚ್ಛತೆಯೂ ಕೈಗೊಂಡಿರಲಿಲ್ಲ’ ಎಂದು ರೈತರಾದ ನಜೀರಸಾಬ್ ಮತ್ತು ಬಂಡೆಪ್ಪ ಮಾಲೆ ಹೇಳುತ್ತಾರೆ.

‘ಆವರಣದಲ್ಲಿ ಅಲ್ಲಲ್ಲಿ ತಗ್ಗುಗಳಿವೆ. ಎಲ್ಲೆಡೆ ಮಣ್ಣು ಹರಡಿರುವುದರಿಂದ ಮಳೆ ಬಂದಾಗ ಎಲ್ಲೆಡೆ ಕೆಸರು ಆಗಿ ಜಾನುವಾರುಗಳಿಗೆ ನಿಲ್ಲಲು ಜಾಗ ಇರುವುದಿಲ್ಲ. ಆದ್ದರಿಂದ ನೀರು ಸಂಗ್ರಹಗೊಳ್ಳದಂತೆ ನೋಡಿಕೊಳ್ಳಬೇಕು’ ಎಂದು ಮುಖಂಡ ಮಾಣಿಕರೆಡ್ಡಿ ಕಲ್ಯಾಣಿ ಆಗ್ರಹ.

‘ಒಂದೇ ಸ್ಥಳದಲ್ಲಿ ನೀರಿನ ತೊಟ್ಟಿ ಇದ್ದು, ಇನ್ನೂ ಮೂರು ಕಡೆ ಇಂಥ ಸೌಲಭ್ಯ ಒದಗಿಸಲು ಆಗ್ರಹಿಸಿದರೆ ಅನುದಾನದ ಕೊರತೆಯಿದೆ ಎಂದು ಎಪಿಎಂಸಿಯವರು ಸಬೂಬು ಹೇಳುತ್ತಿದ್ದಾರೆ’ ಎಂದು ರೈತ ಲಕ್ಷ್ಮಣ ಶಿವಪುರೆ ದೂರಿದ್ದಾರೆ.

‘ಪೈಪ್‌ಲೈನ್ ಒಡೆದಿದ್ದರಿಂದ ನೀರಿನ ಸಮಸ್ಯೆ ಉಂಟಾಗಿತ್ತು. ಮುಂದೆ ಹಾಗಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಮಾರುಕಟ್ಟೆಯಲ್ಲಿ ಸುಧಾರಣಾ ಕಾರ್ಯವೂ ಕೈಗೊಳ್ಳಲಾಗುವುದು’ ಎಂದು ಎಪಿಎಂಸಿ ಕಾರ್ಯದರ್ಶಿ ಸಂತೋಷ ಮದಗೊಂಡ ತಿಳಿಸಿದ್ದಾರೆ.

ಬಸವಕಲ್ಯಾಣದ ಜಾನುವಾರು ಮಾರುಕಟ್ಟೆಯ ನೀರಿನ ತೊಟ್ಟಿಯಲ್ಲಿ ಕಲ್ಮಷಯುಕ್ತ ನೀರು ಇದೆ
ಬಸವಕಲ್ಯಾಣದ ಜಾನುವಾರು ಮಾರುಕಟ್ಟೆಯ ನೀರಿನ ತೊಟ್ಟಿಯಲ್ಲಿ ಕಲ್ಮಷಯುಕ್ತ ನೀರು ಇದೆ
ಬಸವಕಲ್ಯಾಣದ ಜಾನುವಾರು ಮಾರುಕಟ್ಟೆಯ ಶೆಡ್ ನಲ್ಲಿ ಮುಳ್ಳುಕಂಟೆಗಳು ಬೆಳೆದಿವೆ
ಬಸವಕಲ್ಯಾಣದ ಜಾನುವಾರು ಮಾರುಕಟ್ಟೆಯ ಶೆಡ್ ನಲ್ಲಿ ಮುಳ್ಳುಕಂಟೆಗಳು ಬೆಳೆದಿವೆ

ಭಾನುವಾರದ ಮಾರುಕಟ್ಟೆಗೆ ಅನೇಕ ಜಾನುವಾರುಗಳು ಬರುವುದರಿಂದ ಜಾನುವಾರು ಆಸ್ಪತ್ರೆಯನ್ನು ಮಧ್ಯಾಹ್ನದವರೆಗೆ ತೆರೆದಿಟ್ಟು ಚಿಕಿತ್ಸೆ ನೀಡಲಾಗುತ್ತದೆ.

-ಡಾ. ರವೀಂದ್ರ ಸಹಾಯಕ ನಿರ್ದೇಶಕ ಪಶುಪಾಲನಾ ಇಲಾಖೆ

ಈ ಭಾಗದಲ್ಲಿಯೇ ದೊಡ್ಡ ಜಾನುವಾರು ಮಾರುಕಟ್ಟೆ ಇದಾಗಿದ್ದು ಆವರಣದಲ್ಲಿ ಗಿಡ ನೆಡಬೇಕು. ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ.

-ಮಾಣಿಕರೆಡ್ಡಿ ಕಲ್ಯಾಣಿ ಮುಖಂಡ

Quote - ಮಾರುಕಟ್ಟೆ ಆವರಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅನೇಕ ದಿನಗಳಿಂದ ಹಾಕಿರುವ ಬೀಗ ತೆಗೆದು ನೀರಿನ ವ್ಯವಸ್ಥೆಗೈಯಬೇಕು. ವಿಜಯಕುಮಾರ ಪಾಟೀಲ ಸ್ಥಳೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT