ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಜಿಲ್ಲೆಯ 304 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ

Published 8 ಏಪ್ರಿಲ್ 2024, 5:55 IST
Last Updated 8 ಏಪ್ರಿಲ್ 2024, 5:55 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲೇರುತ್ತಿದ್ದಂತೆ ಕುಡಿಯುವ ನೀರಿಗೂ ಸಮಸ್ಯೆ ಹೆಚ್ಚಾಗುತ್ತಿದೆ.

ಜಿಲ್ಲಾಡಳಿತದ ಪ್ರಕಾರ, ಜಿಲ್ಲೆಯ 304 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಈ ಪೈಕಿ 42 ಕಡೆ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಇನ್ನು, 65 ಗ್ರಾಮಗಳಲ್ಲಿ ಬಾಡಿಗೆಗೆ ಪಡೆಯಲು ಉದ್ದೇಶಿಸಲಾಗಿದೆ.

77 ಕಡೆಗಳಲ್ಲಿ ಇನ್ನಷ್ಟು ಆಳಕ್ಕೆ ಕೊಳವೆಬಾವಿ ಕೊರೆಸಲಾಗಿದೆ. ಬರುವ ದಿನಗಳಲ್ಲಿ 161 ಕಡೆ ಕೊರೆಸಲು ಉದ್ದೇಶಿಸಲಾಗಿದೆ. 17 ಕಡೆಗಳಲ್ಲಿ ಕೆಟ್ಟು ಹೋಗಿದ್ದ ಮೋಟಾರ್‌ಗಳನ್ನು ಈಗಾಗಲೇ ದುರಸ್ತಿಪಡಿಸಲಾಗಿದೆ. ಇನ್ನು, 58 ದುರಸ್ತಿಗೊಳಿಸಬೇಕಿದೆ. ಈಗಾಗಲೇ ಎಂಟು ಕಡೆಗಳಲ್ಲಿ ಪೈಪ್‌ಲೈನ್‌ ದುರಸ್ತಿಗೊಳಿಸಲಾಗಿದ್ದು, ಇನ್ನೂ 66 ದುರಸ್ತಿಗೊಳಿಸುವ ಕೆಲಸ ಆಗಬೇಕಿದೆ.

ಮಾರ್ಚ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಪ್ರಮಾಣದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿತ್ತು. ಆದರೆ, ಮಾರ್ಚ್‌ ಕೊನೆಯ ವಾರದಿಂದ ಕೆಂಡದಂತಹ ಬಿಸಿಲಿನಿಂದ ಇರುವ ಜಲಮೂಲಗಳೆಲ್ಲ ಬತ್ತಲು ಆರಂಭಿಸಿವೆ. ಅಂತರ್ಜಲ ಕುಸಿದಿದೆ.

ಇನ್ನು, ಬಾವಿ ಹಾಗೂ ಕೊಳವೆಬಾವಿಗಳಲ್ಲಿ ನೀರು ನೆಲ ಕಂಡಿದೆ. ಚುನಾವಣೆಯ ಜವಾಬ್ದಾರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ವರ್ಗ ತೊಡಗಿಕೊಂಡಿದ್ದರೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಹೀಗಿದ್ದರೂ ಪರಿಸ್ಥಿತಿ ದಿನೇ ದಿನೇ ವಿಕೋಪಕ್ಕೆ ಹೋಗುತ್ತಿದೆ. ಇದೇ ರೀತಿ ಕೆಂಡದಂತಹ ಬಿಸಿಲು ಮುಂದುವರಿದರೆ ಗಂಭೀರ ಪರಿಸ್ಥಿತಿ ಉದ್ಭವವಾಗುವ ಸಾಧ್ಯತೆ ಇದೆ.

ಜಿಲ್ಲೆಯ ಬಸವಕಲ್ಯಾಣ, ಔರಾದ್‌, ಭಾಲ್ಕಿ ಹಾಗೂ ಕಮಲನಗರದಲ್ಲಿ ಪರಿಸ್ಥಿತಿ ಇತರೆಡೆಗಳಿಗಿಂತ ಗಂಭೀರವಾಗಿದೆ. ಈ ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯ ಹೆಚ್ಚಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.

ಇದು, ಜಿಲ್ಲಾ ಕೇಂದ್ರದಿಂದ ದೂರದ ಗ್ರಾಮಗಳ ಪರಿಸ್ಥಿತಿಯಾದರೆ, ಸಮೀಪದಲ್ಲೇ ಇರುವ ಬೀದರ್‌ ತಾಲ್ಲೂಕಿನ ಗ್ರಾಮಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಬೀದರ್‌ ನಗರಕ್ಕೆ ಹೊಂದಿಕೊಂಡಿರುವ ಮೀರಾಗಂಜ್‌ನಲ್ಲಿ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ಬೈಸಿಕಲ್‌, ಬೈಕ್‌ಗಳಲ್ಲಿ ಕೊಡಗಳಲ್ಲಿ ಬೇರೆ ಕಡೆಗಳಿಂದ ಗ್ರಾಮಸ್ಥರು ನೀರು ಕೊಂಡೊಯ್ಯುತ್ತಿದ್ದಾರೆ. ಇನ್ನು, ಬೀದರ್‌ ತಾಲ್ಲೂಕಿನ ಹಮೀಲಾಪುರ ಗ್ರಾಮದಲ್ಲಿ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಬಿಸಿಲು ಹೆಚ್ಚಾಗಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಗ್ರಾಮದ ಕೊಳವೆಬಾವಿ, ಟ್ಯಾಂಕರ್‌ ಹಾಳಾಗಿದ್ದು, ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಲ್ಲಿ ಹಾಳಾಗಿ ನೀರು ಪೋಲಾಗುತ್ತಿದೆ
ನಲ್ಲಿ ಹಾಳಾಗಿ ನೀರು ಪೋಲಾಗುತ್ತಿದೆ
ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಬಿಡ್ತಾರ. ನೆತ್ತಿ ಸುಡುವ ಬಿಸಿಲಲ್ಲಿ ನೀರಿಗಾಗಿ ಹೆಣಗಾಟ ಮಾಡುವಾಂಗ ಆಗ್ಯಾದ.
–ಚಂದ್ರಮ್ಮ ಹಮೀಲಾಪುರ ಗ್ರಾಮಸ್ಥೆ
ಗ್ರಾಮದಲ್ಲಿ ಸರಿಯಾಗಿ ನೀರು ಬಿಡುವುದಿಲ್ಲ. ಬೇರೆ ಕಡೆ ಹೋಗಿ ನೀರು ತರುವ ಪರಿಸ್ಥಿತಿ ಇದೆ. ಅನೇಕ ಸಲ ಹೇಳಿದರೂ ಸಮಸ್ಯೆ ಬಗೆಹರಿದಿಲ್ಲ.
–ಪ್ರವೀಣ್‌ ಹಮೀಲಾಪುರ ಗ್ರಾಮದ ಯುವಕ
ಬ್ಯಾಸಗಿ ಶುರುವಾದ ನಂತ್ರ ನೀರಿಗ ಭಾಳ್‌ ಸಮಸ್ಯಾ ಆಗ್ಯಾದ. ಬೈಕಿಗ ಕೊಡ ಕಟ್ಟಕೊಂಡು ನೀರು ತರ್ತಾ ಇದ್ದೀವಿ.
–ರಾಜಶೇಖರ ಹಮೀಲಾಪುರ ಗ್ರಾಮದ ಯುವಕ
‘ವಿಪರೀತ ಬಿಸಿಲಿಗೆ ಅಂತರ್ಜಲ ಕುಸಿತ’
‘ಫೆಬ್ರುವರಿ ಕೊನೆಯ ವಾರದಲ್ಲಿ ಸಮೀಕ್ಷೆ ನಡೆಸಿದಾಗ ಇನ್ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇತ್ತು. ಆದರೆ ಬಿಸಿಲು ಹೆಚ್ಚಾಗಿರುವುದರಿಂದ ಅಂತರ್ಜಲ ಕುಸಿಯುತ್ತಿದೆ. ಅದರಲ್ಲೂ ಕಲಬುರಗಿ ಜಿಲ್ಲೆಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಈ ಸಮಸ್ಯೆ ಸ್ವಲ್ಪ ಹೆಚ್ಚೇ ಇದೆ. ಹಿಂದಿನ ವರ್ಷಗಳಲ್ಲಿ ಸಮಸ್ಯೆ ಆಗದ ಕಡೆಯೂ ಈಗ ಸಮಸ್ಯೆ ಉಲ್ಬಣಿಸಿದೆ. ಖಾಸಗಿ ಬೋರ್‌ವೆಲ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಎಂಟು ಗ್ರಾಮಗಳಿಗೆ ಟ್ಯಾಂಕರ್‌ ನೀರು ಕೊಡಲಾಗುತ್ತಿದೆ. ಎಲ್ಲಾದರೂ ಗಂಭೀರ ಸಮಸ್ಯೆ ಕಂಡು ಬಂದರೆ ತಾಲ್ಲೂಕುಮಟ್ಟದ ಅಧಿಕಾರಿಗಳು ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.
ನಲ್ಲಿಗಳಿಗೆ ಮೋಟಾರ್‌!
ಹೆಚ್ಚಿನ ನೀರು ಸಂಗ್ರಹ ಮಾಡಿಟ್ಟುಕೊಳ್ಳಲು ಹಲವು ಮನೆಗಳಲ್ಲಿ ನಲ್ಲಿಗಳಿಗೆ ಮೋಟಾರ್‌ ಅಳವಡಿಸಲಾಗುತ್ತಿದೆ. ಕೆಲವರು ಮನೆ ಮೇಲಿನ ಟ್ಯಾಂಕ್‌ ತೊಟ್ಟಿಗಳಲ್ಲಿ ನೀರು ಸಂಗ್ರಹಿಸಿ ಬಳಸುತ್ತಿದ್ದಾರೆ. ಇದು ಪೈಪ್‌ಲೈನಿನ ಅಂಚಿನವರಿಗೆ ಸಮಸ್ಯೆಯಾಗುತ್ತಿದೆ. ಕಡಿಮೆ ನೀರಿನ ಜೊತೆಗೆ ನಿಧಾನವಾಗಿ ಬರುತ್ತಿರುವುದರಿಂದ ಸಾಕಷ್ಟು ಸಮಯ ನೀರಿಗಾಗಿ ವ್ಯಯಿಸಬೇಕಾಗಿದೆ. ಹಿಂದಿನಂತೆ ನೀರು ಸರಿಯಾಗಿ ಬರುತ್ತಿಲ್ಲ ಎನ್ನುವುದು ಜನರ ದೂರಾಗಿದೆ. ‘ನಲ್ಲಿಗಳಿಗೆ ಮೋಟಾರ್‌ ಹಚ್ಚದಂತೆ ಕ್ರಮ ಜರುಗಿಸಬೇಕು. ಯಾರೂ ಮೋಟಾರ್‌ ಹಚ್ಚದಿದ್ದರೆ ಎಲ್ಲರ ಮನೆಗಳಿಗೂ ಒಂದೇ ಸಮನಾದ ನೀರು ಬರುತ್ತದೆ’ ಎಂದು ವಿವೇಕಾನಂದ ಕಾಲೊನಿಯ ಬಸವರಾಜ ತಿಳಿಸಿದರು.
ಕಾರಂಜಾ ಅವಲಂಬಿಸಿದವರಿಗಿಲ್ಲ ಸಮಸ್ಯೆ
ಕಾರಂಜಾ ಜಲಾಶಯದಿಂದ ಜಿಲ್ಲೆಯ ಯಾವ್ಯಾವ ಭಾಗಗಳಿಗೆ ನೀರು ಪೂರೈಕೆಯಾಗುತ್ತಿದೆಯೇ ಅವರಿಗೆ ಬೇಸಿಗೆ ಮುಗಿಯುವವರೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹ ಇರುವುದರಿಂದ ಕುಡಿಯುವ ನೀರು ಪೂರೈಕೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ
ತಾಲ್ಲೂಕುವಾರು ವಿವರ ತಾಲ್ಲೂಕು;ಸಮಸ್ಯೆ ಇರುವ ಗ್ರಾಮಗಳ ಸಂಖ್ಯೆ ಕಮಲನಗರ;37 ಔರಾದ್‌ (ಬಿ);57 ಬೀದರ್‌;14 ಭಾಲ್ಕಿ;56 ಬಸವಕಲ್ಯಾಣ;78 ಹುಲಸೂರ;19 ಹುಮನಾಬಾದ್‌;24 ಚಿಟಗುಪ್ಪ;19 ಒಟ್ಟು;304 ಮಾಹಿತಿ: ಬೀದರ್‌ ಜಿಲ್ಲಾಡಳಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT