ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ ಮೆಹಕರ: ಕನಿಷ್ಠ ಸೌಕರ್ಯ ಮರೀಚಿಕೆ

ಸಮಸ್ಯೆ ಪರಿಹಾರಕ್ಕೆ ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ; ಗ್ರಾಮಸ್ಥರ ಆರೋಪ
Last Updated 22 ಆಗಸ್ಟ್ 2022, 13:07 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಗಡಿಯಲ್ಲಿರುವ ಮೆಹಕರ ಗ್ರಾಮದ ಚರಂಡಿಗಳಲ್ಲಿ ಕಸ, ಕಡ್ಡಿ ತುಂಬಿದೆ. ಮನೆ ಬಳಕೆ ಹಾಗೂ ಮಳೆ ನೀರು ರಸ್ತೆ ಮಧ್ಯೆ, ಮನೆ ಅಕ್ಕಪಕ್ಕ ಹಾಗೂ ಹಿಂಭಾಗ ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ.

ಗ್ರಾಮದ ಬಹುತೇಕ ಕಡೆಗಳಲ್ಲಿ ಅಸ್ವಚ್ಛ ವಾತಾವರಣ ನಿರ್ಮಾಣವಾಗಿದೆ. ಗ್ರಾಮಸ್ಥರ ನೆಮ್ಮದಿಯ ಜೀವನಕ್ಕೆ ಭಂಗ ಉಂಟಾಗಿದೆ.

ಈ ಗ್ರಾಮ ಪಂಚಾಯಿತಿ ಕೇಂದ್ರವೂ ಹೌದು. ಗ್ರಾಮದ ಪ್ರಸಿದ್ಧ ದೇವಾಲಯ ವಿರೂಪಾಕ್ಷೇಶ್ವರ ಮಠಕ್ಕೆ ಹೋಗುವ ದಾರಿ, ಹೃದಯ ಭಾಗವಾದ ಬಜಾರ್ ಗಲ್ಲಿಯ ರಸ್ತೆ, ಬಸವೇಶ್ವರ ದೇವಸ್ಥಾನ, ಲಕ್ಷ್ಮಿ ದೇವಸ್ಥಾನ, ಜೀಜಾಮಾತಾ ವೃತ್ತದ ಬಳಿಯ ಬಹುತೇಕ ಓಣಿಗಳ ರಸ್ತೆಯ ಎರಡೂ ಬದಿ, ಕೆಲವೆಡೆ ಒಂದು ಬದಿಯಲ್ಲಿರುವ ಚರಂಡಿಗಳು ಕಸ, ಕಡ್ಡಿಗಳಿಂದ ತುಂಬಿ ಹೋಗಿವೆ.

ಎಲ್ಲ ರಸ್ತೆಗಳ ಮಧ್ಯೆ ಗಲೀಜು ನೀರು ಹರಿಯುತ್ತಿದೆ. ಕೆಲವೆಡೆ ಹೊಂಡ ನಿರ್ಮಾಣವಾಗಿವೆ. ಸಾರ್ವಜನಿಕರು ಇದರಲ್ಲಿಯೇ ನಡೆದುಕೊಂಡು ಹೋಗುವಂತಾಗಿದೆ. ಹಂದಿಗಳ ಉಪಟಳವೂ ಹೆಚ್ಚಾಗಿದ್ದು, ಸಂಜೆಯಾಗುತ್ತಲೇ ಸೊಳ್ಳೆಗಳ ಕಾಟ ಜಾಸ್ತಿಯಾಗುತ್ತಿದೆ.

‘ಸಾಂಕ್ರಾಮಿಕ ರೋಗಗಳಾದ ಕಾಲರಾ, ಮಲೇರಿಯಾ ಸೇರಿದಂತೆ ಇತರ ರೋಗಗಳ ಭಯ ಬಹುವಾಗಿ ಕಾಡುತ್ತಿದೆ’ ಎಂದು ನಿವಾಸಿಗಳಾದ ಗುಂಡಪ್ಪ, ಸಂಗಮೇಶ ಮಂಗನೆ, ಸಂಗಮೇಶ ಖಪಲೆ ತಿಳಿಸಿದರು.

ಇನ್ನು ಗ್ರಾಮಕ್ಕೆ ವರವಾಗಬೇಕಿದ್ದ ಕೆರೆ ಜನಪ್ರತಿನಿಧಿ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಉಪಯೋಗಕ್ಕೆ ಬಾರದಂತಾಗಿದೆ. ಕೆರೆ ಮಧ್ಯೆ, ಅಕ್ಕಪಕ್ಕ ಗಿಡ, ಗಂಟಿ ಬೆಳೆದಿವೆ. ಸ್ಥಳ ಹೊಲಸಿನಿಂದ ಕೂಡಿರುವುದರಿಂದ ಹಂದಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಕೆರೆ ಪಕ್ಕದಲ್ಲಿರುವ ಹನುಮಾನ ದೇವಸ್ಥಾನಕ್ಕೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿ ಸೇರಿದಂತೆ ಇತರ ಪ್ರಗತಿಯ ಕಾರ್ಯಗಳನ್ನು ಕೈಗೆತ್ತಿಕೊಂಡಲ್ಲಿ ಊರಿನ ಅಭ್ಯುದಯಕ್ಕೆ ಅನುಕೂಲ ಆಗುತ್ತದೆ. ಆದರೆ, ಸದಸ್ಯರಿಗೆ, ಅಧಿಕಾರಿಗಳಿಗೆ ದೂರದೃಷ್ಟಿ, ಕೆಲಸದ ಬಗ್ಗೆ ಆಸಕ್ತಿ ಇಲ್ಲದ್ದರಿಂದ ಕಾಗದದಲ್ಲಿಯೇ ಪ್ರಗತಿ ಕಾರ್ಯಗಳು ಉಳಿಯುವಂತಾಗಿವೆ ಎಂದು ಯುವಕರು ದೂರಿದರು.

ಈಗಾಗಲೇ ಗ್ರಾಮದ ವಿವಿಧೆಡೆ ಬೆಳೆದಿದ್ದ ಹುಲ್ಲಿನ ನಾಶಕ್ಕಾಗಿ ಔಷಧಿ ಸಿಂಪಡಿಸಲಾಗಿದೆ. ಕೆರೆಯ ಸುತ್ತಲೂ ಔಷಧಿ ಸಿಂಪಡಿಸಲಾಗುವುದು. ಚರಂಡಿಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ಗಣೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT