ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಕೊರತೆಯಿಂದ ನಲುಗುತ್ತಿದೆ ಕಪ್ಪರಗಾಂವ್

ಹೆದ್ದಾರಿ ಬದಿಯಲ್ಲಿ ಚರಂಡಿ ನಿರ್ಮಿಸದ ಎಲ್‌ಎನ್‌ಟಿ ಕಂಪನಿ ವಿರುದ್ಧ ಗ್ರಾಮಸ್ಥರ ಆಕ್ರೋಶ
Last Updated 25 ಜೂನ್ 2018, 16:07 IST
ಅಕ್ಷರ ಗಾತ್ರ

ಹುಮನಾಬಾದ್: ರಾಷ್ಟ್ರೀಯ ಹೆದ್ದಾರಿ 65ಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಕಪ್ಪರಗಾಂವ್‌ ಗ್ರಾಮ ಮೂಲಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ.

ನಂದಗಾಂವ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಹಳೆ ಮತ್ತು ಹೊಸ ಬಡಾವಣೆ ಸೇರಿ 7 ಜನ ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಗೊಂಡಿದ್ದಾರೆ. 3 ಸಾವಿರ ಜನಸಂಖ್ಯೆ ಹೊಂದಿರುವ ಇಲ್ಲಿ 600ಕ್ಕೂ ಅಧಿಕ ಮನೆಗಳಿವೆ.

ಗ್ರಾಮದಲ್ಲಿ ದಶಕದ ಹಿಂದೆ ನಿರ್ಮಿಸಲಾಗಿರುವ ಚರಂಡಿಗಳಿದ್ದು, ಹೂಳು ತುಂಬಿವೆ. ಕೆಲವು ಚರಂಡಿಗಳು ನಿರ್ವಹಣೆ ಕೊರತೆಯಿಂದ ಮುಚ್ಚಿಹೋಗಿವೆ. ಗ್ರಾಮ ಪ್ರವೇಶಿಸಿದರೆ ರಸ್ತೆ ಮತ್ತು ಚರಂಡಿ ಮಧ್ಯೆ ವ್ಯತ್ಯಾಸ ಗೊತ್ತಾಗದಷ್ಟು ಪರಿಸ್ಥಿತಿ ಹದಗೆಟ್ಟಿದೆ.

ವರ್ಷಕ್ಕೆ ಎರಡು ಬಾರಿ ಸ್ವಚ್ಛಗೊಳಿಸಿದರೂ ಬಹುತೇಕ ಸಮಸ್ಯೆ ಪರಿಹಾರವಾಗುತ್ತದೆ ಎನ್ನುತ್ತಾರೆ ಗ್ರಾಮದ ಇಸ್ಮಾಯಿಲ್‌.

ವಾರ್ಡ್‌ ಸಂಖ್ಯೆ 1ಮತ್ತು 2ರಲ್ಲಿ ಕಳಪೆ ಪೈಪ್‌ಲೈನ್‌ ಕಾರಣ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಮಳೆಗಾಲ ಬಂದರೆ ತ್ಯಾಜ್ಯದಿಂದ ರೋಗಭೀತಿ ಕಾಡುತ್ತದೆ. ಸೊಳ್ಳೆ ಕಡಿದು ವಿವಿಧ ರೀತಿ ಕಾಯಿಲೆ ಬರುತ್ತವೆ. ಗ್ರಾಮದಲ್ಲಿ 7 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದರೂ ಸಮಸ್ಯೆಗೆ ಸ್ಪಂದಿಸುವವರು ಯಾರೂ ಇಲ್ಲ ಎಂದು ನಿವಾಸಿ ಕಮಲಾಬಾರಿ ಅಕ್ಕರೆಡ್ಡಿ ದೂರಿದರು.

ರಾಷ್ಟ್ರೀಯ ಹೆದ್ದಾರಿ ನಮ್ಮೂರ ಸಮೀಪ ಹಾದು ಹೋಗಿದೆ. ಕಾಮಗಾರಿ ಕೈಗೊಂಡ ಎಲ್‌.ಎನ್‌.ಟಿ ಕಂಪೆನಿ 2 ವರ್ಷದಿಂದ ರಸ್ತೆ ಬದಿ ಚರಂಡಿ ನಿರ್ಮಿಸುವುದಾಗಿ ಹೇಳಿದರೂ ಕಾಲಹರಣ ಮಾಡುತ್ತಿದೆ. ಹೆದ್ದಾರಿಗೆ ಹೊಂದಿಕೊಂಡು ಸರ್ಕಾರಿ ಶಾಲೆ ಇದೆ. ಮಕ್ಕಳು ರಸ್ತೆ ದಾಟುವುದು ಕಷ್ಟ. ಶಾಲೆ ಎದುರಿಗೆ ಸ್ಪೀಡ್‌ಬ್ರೆಕರ್‌ ಅಳವಡಿಸಬೇಕು ಎಂದು ನಜೀರ್‌ಸಾಬ್‌ ಆಗ್ರಹಿಸಿದರು.

ಗ್ರಾಮದ ಶೇ 50ರಷ್ಟು ಮನೆಗಳಲ್ಲಿ ಈಗಲೂ ಶೌಚಾಲಯಗಳಿಲ್ಲ. ಗ್ರಾಮದಲ್ಲಿ ಸಮರ್ಪಕ ವಿದ್ಯುತ್‌ ದೀಪ ಅಳವಡಿಸಿಲ್ಲ. ಸ್ವಚ್ಛತೆ ಕೊರತೆ ಕಾರಣ ಓಣಿಗಳಲ್ಲಿ ವಿಷ ಜಂತುಗಳ ಕಾಟವಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ.
ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಗ್ರಾಮಸ್ಥರ ಆರೋಪ ತಳ್ಳಿ ಹಾಕುವಂತಿಲ್ಲ.

ಗ್ರಾಮ ಪಂಚಾಯಿತಿಗೆಿ 13ನೇ ಹಣಕಾಸು ಯೋಜನೆ ಬಿಟ್ಟರೆ ಬೇರೆ ಅನುದಾನವಿಲ್ಲ. ಈ ಅನುದಾನವನ್ನು ಕುಡಿಯುವ ನೀರಿಗಾಗಿ ಬಳಸುತ್ತೇವೆ. ಸಮಸ್ಯೆ ಇರುವುದು ನಿಜ. ಆದರೆ ಪರಿಹಾರ ನಮ್ಮ ವ್ಯಾಪ್ತಿ ಮೀರಿದೆ. ರಸ್ತೆ, ಚರಂಡಿ ನಿರ್ಮಾಣಕ್ಕೆ ಕೋಟ್ಯಂತರ ಅನುದಾನ ಅಗತ್ಯ. ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಶಾಸಕರ ಅನುದಾನ ಅಗತ್ಯ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಭೀಮಶಾ.

13ನೇ ಹಣಕಾಸು ಅನುದಾನ ಹೊರತುಪಡಿಸಿ ಬೇರೆ ಆದಾಯ ಲಭ್ಯವಿಲ್ಲದ ಕಾರಣ ರಸ್ತೆ, ಚರಂಡಿ ನಿರ್ಮಿಸಲಾಗಿಲ್ಲ.
– ಭೀಮಶಾ, ಪಿಡಿಒ, ನಂದಗಾಂವ್ ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT