ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ| ಸಮಸ್ಯೆಗಳಿಗೆ ನಲುಗಿದ ‘ಭಗವಾನ ವಾಡಿ’

ರಸ್ತೆಗಳ ಸ್ವರೂಪ ಬದಲಿಸಿದ ಜಲ ಜೀವನ್‌ ಮಿಷನ್ ಕಾಮಗಾರಿ
Last Updated 22 ನವೆಂಬರ್ 2022, 7:02 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕು ಕೇಂದ್ರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಭಗವಾನ ವಾಡಿಯ ಕೆಲವೆಡೆ ಕಿರಿದಾದ ಚರಂಡಿ ನಿರ್ಮಿಸಲಾಗಿದೆ. ಇದನ್ನು ಹೊರತುಪಡಿಸಿ ಉಳಿದೆಡೆ ಚರಂಡಿ ನಿರ್ಮಾಣವಾಗಿಲ್ಲ. ಹೊಲಸು ನೀರು ರಸ್ತೆ ಮಧ್ಯೆ, ತಿಪ್ಪೆಗುಂಡಿ ಸುತ್ತ, ಮನೆಗಳ ಅಕ್ಕಪಕ್ಕ ಸಂಗ್ರಹಗೊಂಡಿದ್ದು, ಗ್ರಾಮದಲ್ಲಿ ಅನೈರ್ಮಲ್ಯ ಉಂಟಾಗಿದೆ.

ಈ ಗ್ರಾಮ ಅಂಬೇಸಾಂಗವಿ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಸುಮಾರು 3000 ಜನಸಂಖ್ಯೆ ಹೊಂದಿದೆ.

ಗ್ರಾಮದಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆ ಜಲ ಜೀವನ್ ಮಿಷನ್‌ ಯೋಜನೆ ಅಡಿಯಲ್ಲಿ ಮನೆ-ಮನೆಗೆ ನಳಗಳ ಸಂಪರ್ಕ ಕಲ್ಪಿಸಲು ಸಿಸಿ ರಸ್ತೆಯನ್ನು ಅಗೆಯಲಾಗಿದೆ. ಆದರೆ, ಇಲ್ಲಿಯವರೆಗೆ ನೀರು ಹರಿದಿಲ್ಲ. ಅಗೆದ ರಸ್ತೆ ಮರು ನಿರ್ಮಾಣವೂ ಆಗಿಲ್ಲ. ಇದರಿಂದ ಕೆಲ ಮನೆಗಳ ಮುಂಭಾಗ, ಹನುಮಾನ ದೇವಸ್ಥಾನದ ಅಕ್ಕಪಕ್ಕ ಚರಂಡಿ, ಮಳೆ ನೀರು ಸಂಗ್ರಹವಾಗುತ್ತಿದೆ.

‘ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ. ಹನುಮಾನ ದೇವರ ದರ್ಶನಕ್ಕೆ ತೆರಳುವ ಮುನ್ನ ಹೊಲಸು ದಾಟಿ ಹೋಗಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಗ್ರಾಮಸ್ಥರಾದ ವಿಮಲಾಬಾಯಿ, ಪಾರ್ವತಾಬಾಯಿ ಅಳಲು ತೋಡಿಕೊಂಡರು.

ರಸ್ತೆ ಅಗೆದ ಕಾರಣ ಕೃಷಿ ಉತ್ಪನ್ನವನ್ನು ವಾಹನದಲ್ಲಿ ಇಲ್ಲವೇ ಬಂಡಿಯಲ್ಲಿ ಮನೆವರೆಗೆ ತರಲಾರದಂಥ ಸ್ಥಿತಿ ಉಂಟಾಗಿದೆ. ಇನ್ನು ನಮ್ಮ ಗ್ರಾಮದ 5ನೇ ತರಗತಿವರೆಗಿನ ಮರಾಠಿ ಶಾಲೆ ಹೊಲದಲ್ಲಿ ಇದೆ. ಆದರೆ, ಅಲ್ಲಿಯವರೆಗೆ ತೆರಳಲು ಪಕ್ಕಾ ರಸ್ತೆ ಇಲ್ಲ. ಹಾಗಾಗಿ, ಮಳೆಗಾಲದಲ್ಲಂತು ವಿದ್ಯಾರ್ಥಿಗಳು ಕೆಸರಿನಲ್ಲಿ ನಡೆದುಕೊಂಡು ಹೋಗಬೇಕು. ಇಲ್ಲ ಮನೆಯಲ್ಲಿಯೇ ಇರಬೇಕಾದಂತಹ ದುಃಸ್ಥಿತಿ ಇದೆ.

ಶಾಲೆಗೆ ಕಾಂಪೌಂಡ್‌ ಇಲ್ಲ. ಕೊಳವೆ ಬಾವಿಗೆ ನೀರಿಲ್ಲ. ಕಿಟಕಿಗಳು ಹಾಳಾಗಿವೆ. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಡೆಸ್ಕ್‌ ಇಲ್ಲ. ಕೆಲ ಶೌಚಾಲಯ ಹಾಳಾಗಿವೆ. ಇರುವ ಶೌಚಾಲಯವೂ ನೀರಿನ ಸಮಸ್ಯೆಯಿಂದ ಬಳಕೆಗೆ ಬಾರದಂತಾಗಿದೆ. ಆಟದ ಮೈದಾನದ ಕೊರತೆ ಇದೆ ಎಂದು ಗ್ರಾಮ ವಾಸಿಗಳು ದೂರಿದರು.

ಗ್ರಾಮಕ್ಕೆ ಬಸ್‌ ಸೇವೆ ಸೇರಿದಂತೆ ಎಲ್ಲೆಡೆ ಗುಣಮಟ್ಟದ ಸಿಸಿ ರಸ್ತೆ, ಚರಂಡಿ ಸೌಕರ್ಯ ಕಲ್ಪಿಸಿ ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಅಧಿಕಾರಿ, ಜನಪ್ರತಿನಿಧಿಗಳು ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT