ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯನನ್ನು ಅಸಾಮಾನ್ಯಗೊಳಿಸುವ ವಿವೇಕಾನಂದರ ಚಿಂತನೆ: ನಿರ್ಭಯಾನಂದ ಸ್ವಾಮೀಜಿ

Published 12 ಫೆಬ್ರುವರಿ 2024, 7:32 IST
Last Updated 12 ಫೆಬ್ರುವರಿ 2024, 7:32 IST
ಅಕ್ಷರ ಗಾತ್ರ

ಬೀದರ್‌: ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ತಿನಿಂದ ನವೆಂಬರ್‌ನಲ್ಲಿ ಆಯೋಜಿಸಿದ್ದ ವಿವೇಕ ವಿದ್ಯಾರ್ಥಿ ಲಿಖಿತ ಪರೀಕ್ಷೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆಯಲ್ಲಿ ಶನಿವಾರ ಸಂಜೆ ನಡೆದ ಕಾರ‍್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಹಾಗೂ ಶೈಕ್ಷಣಿಕ ಮಟ್ಟ ಸುಧಾರಣೆಗೆೆ 8ನೇ, 9ನೇ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ವಾಮಿ ಪುರುಷೋತ್ತಮಾನಂದ ಅವರು ಬರೆದ ‘ವಿದ್ಯಾರ್ಥಿಗಳಿಗಾಗಿ’ ಮತ್ತು ‘ವಿವೇಕಾನಂದರ ವಿದ್ಯಾರ್ಥಿ ಜೀವನ’ ಕಿರು ಪುಸ್ತಕಗಳನ್ನು ಆಧರಿಸಿ ವಿವೇಕ ವಿದ್ಯಾರ್ಥಿ ಪರೀಕ್ಷೆ ನಡೆಸಲಾಗಿತ್ತು. ಬೀದರ್ ಜಿಲ್ಲೆಯಲ್ಲಿ 8 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಒಟ್ಟು ₹40 ಸಾವಿರ ನಗದು ಬಹುಮಾನ, ಪ್ರಮಾಣ ಪತ್ರಗಳನ್ನು ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಪ್ರದಾನ ಮಾಡಿದರು.

ಸ್ವಾಮಿ ವಿವೇಕಾನಂದರ ಸಾಹಿತ್ಯ ಓದುವ ಮತ್ತು ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿ ಶ್ರೇಷ್ಠ ಸಾಧನೆ ಮಾಡಬಲ್ಲ. ವಿವೇಕಾನಂದರ ಚಿಂತನೆಗಳು ಸಾಮಾನ್ಯ ವ್ಯಕ್ತಿಯನ್ನು ಸಹ ಅಸಾಮಾನ್ಯನನ್ನಾಗಿ ಬದಲಿಸುವ ತಾಕತ್ತು ಹೊಂದಿವೆ ಎಂದರು.

ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ, ಹಿರಿಯ ಪತ್ರಕರ್ತ ಸದಾನಂದ ಜೋಶಿ, ಚನ್ನಬಸವ ಹೇಡೆ, ಹಾವಗಿರಾವ ಕಳಸೆ, ಬಾಲಾಜಿ ಪವಾರ್, ಜಯಪ್ರಕಾಶ ಪೊದ್ದಾರ್, ಸಂತೋಷಕುಮಾರ ಪೂಜಾರಿ, ದತ್ತು ತುಪ್ಪದ, ಶರದ್ ನಾರಾಯಣಪೇಟಕರ್, ಶಾಂತಲಿಂಗ ಮಠಪತಿ, ಬಸವರಾಜ ಸೀರೆ, ಅಶೋಕ ಶೆಂಬೆಳ್ಳಿ, ಮಹಾಲಿಂಗ ಖಂಡ್ರೆ, ಮಾರುತಿ ಸಗರ್, ಸಂತೋಷ ಚಿಲ್ಲಾ ಹಾಜರಿದ್ದರು.

ರ‍್ಯಾಂಕ್ ಗಳಿಸಿದವರು... ವಿವೇಕ ವಿದ್ಯಾರ್ಥಿ ಪರೀಕ್ಷೆಯಲ್ಲಿ ಜಿಲ್ಲಾಮಟ್ಟದಲ್ಲಿ ರ‍್ಯಾಂಕ್ ಗಳಿಸಿದ 8 9 10ನೇ ತರಗತಿ ಮಕ್ಕಳಿಗೆ ಮೂರೂ ವಿಭಾಗದಲ್ಲಿ ಕ್ರಮವಾಗಿ ₹2500 ₹2000 ಮತ್ತು ₹1500 ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

10ನೇ ತರಗತಿಯಲ್ಲಿ ಬೀದರ್ ವಿದ್ಯಾಶ್ರೀ ಪ್ರೌಢಶಾಲೆಯ ವಿನಾಯಕ(ಪ್ರಥಮ) ಮಂಠಾಳ ಕೆಪಿಎಸ್ ಶಾಲೆಯ ಪ್ರೀತಿ ಶಿವಯ್ಯ(ದ್ವಿತೀಯ) ಹಾಗೂ ದುಬಲಗುಂಡಿ ಬಸವತೀರ್ಥ ವಿದ್ಯಾಪೀಠದ ಪ್ರಜ್ವಲ್ ಲಕ್ಷ್ಮಣ ತೃತೀಯ ಸ್ಥಾನ ಪಡೆದರು. 9ನೇ ತರಗತಿಯಲ್ಲಿ ಭಾಲ್ಕಿ ಕರಡ್ಯಾಳ ಗುರುಕುಲದ ಸ್ವಪ್ನಾ ರಾಜಕುಮಾರ(ಪ್ರಥಮ) ಸಂತಪುರ ಅನುಭವ ಮಂಟಪ ಗುರುಕುಲದ ಗಿರೀಶ್ ಬಸವರಾಜ(ದ್ವಿತೀಯ) ಮತ್ತು ಬೀದರ್ ಜನಸೇವಾ ಶಾಲೆಯ ಶ್ರೇಯಾ ತೃತೀಯ ಸ್ಥಾನಗಳಿಸಿದರು. 8ನೇ ತರಗತಿಯಲ್ಲಿ ಔರಾದ್ ಮೊರಾರ್ಜಿ ದೇಸಾಯಿ ಶಾಲೆಯ ದಿವ್ಯಾ ಬಸವರಾಜ(ಪ್ರಥಮ) ನಿಟ್ಟೂರ್ ವೀರಭದ್ರೇಶ್ವರ ಶಾಲೆಯ ರೇವಣಸಿದ್ದಯ್ಯ(ದ್ವಿತೀಯ) ಮತ್ತು ಹಳ್ಳಿಖೇಡ್ ಬಸವತೀರ್ಥ ಶಾಲೆಯ ವೆಂಕಟರೆಡ್ಡಿ ತೃತೀಯ ಸ್ಥಾನ ಪಡೆದರು. ತಾಲೂಕು ಮಟ್ಟದಲ್ಲಿ ಸಹ ಮೂರೂ ವಿಭಾಗದಲ್ಲಿನ ಮಕ್ಕಳಿಗೆ ಬಹುಮಾನ ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT