ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಕನ್ನಡ ಭಾಷೆ ನಿರ್ಲಕ್ಷ್ಯ

Last Updated 1 ನವೆಂಬರ್ 2013, 8:26 IST
ಅಕ್ಷರ ಗಾತ್ರ

ಕಮಲನಗರ: ಔರಾದ್‌ ತಾಲ್ಲೂಕಿನ ಅನೇಕ ಬಸ್‌ ನಿಲ್ದಾಣಗಳ ಮೇಲೆ ಕನ್ನಡವನ್ನು ಸಂಪೂರ್ಣ ನಿರ್ಲಕ್ಷಿಸಿ, ಅನ್ಯ ಭಾಷೆಗೆ ಆದ್ಯತೆ ನೀಡಿರುವುದಾಗಿ ವಿವಿಧ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು ಆರೋಪಿಸಿದ್ದಾರೆ.

ತಾಲ್ಲೂಕಿನ ಏಕಂಬಾ, ದುಡಕನಾಳ್‌ ಹಾಗೂ ಸಾವಳಿ ಗ್ರಾಮದ ಬಸ್‌ ನಿಲ್ದಾಣಗಳ ನಾಮ­ಫಲಕಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಲಾಗಿದೆ.
ರಾಜ್ಯದಲ್ಲಿ ತ್ರಿಭಾಷಾ ಸೂತ್ರದನ್ವಯ ಎಲ್ಲ ಸರ್ಕಾರಿ ಕಚೇರಿಗಳು, ಕಟ್ಟಡಗಳ ನಾಮಫಲಕ­ಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡ­ಬೇಕೆಂಬ ನಿಯಮವಿದೆ. ಆದರೆ ಸಾವಳಿ ಗ್ರಾಮದ ಬಸ್‌ ನಿಲ್ದಾಣದ ಮೇಲೆ ಅಳವಡಿಸಿರುವ ನಾಮ­ಫಲಕದಲ್ಲಿ ಮರಾಠಿ ಭಾಷೆಗೆ ಆದ್ಯತೆ ಕೊಟ್ಟು, ಕನ್ನಡವನ್ನು ಕೆಳಗೆ ಬರೆದು ಅವಮಾನಿಸಲಾಗಿದೆ ಎಂದು ಸಾಹಿತಿ ಎಸ್‌.ಬಿ.ಜಾಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನಲ್ಲಿರುವ ಎಲ್ಲ ಎಲ್ಲ ಅಂಗಡಿ ಮುಂಗ­ಟ್ಟುಗಳು, ಶಾಲಾ ಕಾಲೇಜುಗಳ, ಸರ್ಕಾರಿ ಕಚೇರಿ­ಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರ ಗಮನಕ್ಕೆ ಅನೇಕ ಸಲ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕನ್ನಡ ಪರ ಹೋರಾ­ಟಗಾರರಾದ ಸಂತೋಷ ಸುಲಾಕೆ, ಧನರಾಜ ಭವರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಸ್ವಾಗತ ಕಮಾನು ನಿರ್ಮಿಸಿ: ಬೀದರ್‌–­ನಾಂದೇಡ್‌ ಅಂತರರಾಜ್ಯ ಹೆದ್ದಾರಿಯ ಕಮಲನಗರದ ಗಡಿಯಲ್ಲಿ ಕರ್ನಾಟಕ ಸರ್ಕಾರದ ಸ್ವಾಗತ ಕಮಾನು ನಿರ್ಮಿಸಲು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಅಭಿಮಾನಿ­ಗಳು ಆಗ್ರಹಿಸಿದ್ದಾರೆ.
ಗಡಿಯಲ್ಲಿ ಮಹಾರಾಷ್ಟ್ರ ಸರ್ಕಾರ ದೊಡ್ಡ ಸ್ವಾಗತ ಕಮಾನನ್ನು ಅಳವಡಿಸಿದೆ. ಆದರೆ ನಮ್ಮ ಸರ್ಕಾರದಿಂದ ಕರ್ನಾಟಕಕ್ಕೆ ಸ್ವಾಗತ ಎಂದು ಕೋರುವ ಕಮಾನು ನಿರ್ಮಿಸುವುದು ಅವಶ್ಯಕ­ವಾಗಿದೆ ಎಂದು ಸಾಹಿತಿ ಬಾ.ನಾ. ಸೋಲ್ಲಾಪುರೆ ಆಗ್ರಹಿಸಿದ್ದಾರೆ.

ಕರ್ನಾಟಕದ ಗಡಿಭಾಗವಾದ ಔರಾದ್‌ ತಾಲ್ಲೂ­ಕಿನಲ್ಲಿ ಕನ್ನಡಮಯ ವಾತಾವರಣ ಸೃಷ್ಟಿಸಲು, ಕನ್ನಡವನ್ನು ಆಡಳಿತದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನ­ಕ್ಕೆ ತರಲು ತಾಲ್ಲೂಕು ಆಡಳಿತ ಮುಂದಾಗ­ಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ರಾಜ್ಯೋತ್ಸವದ ಶುಭ ಸಂದರ್ಭದಲ್ಲಾದರೂ ತಾಲ್ಲೂಕು ಆಡಳಿತ ಬಸ್‌ ನಿಲ್ದಾಣಗಳ ನಾಮ­ಫಲಕಗಳ ಮೇಲೆ  ಕನ್ನಡ ಬರೆಸಲು ಮುಂದಾ­ಗುವುದೇ ಎಂದು ಜನರು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT