ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರ ಸಹನೆಯ ಕಟ್ಟೆ ಒಡೆಯಿತೇ?

ಇಂಡಿಗನತ್ತ: ಪ್ರತಿ ಬಾರಿಯೂ ಶಾಂತಿಯುತವಾಗಿ ಹಕ್ಕು ಚಲಾಯಿಸುತ್ತಿದ್ದ ನಿವಾಸಿಗಳು
Published 27 ಏಪ್ರಿಲ್ 2024, 6:51 IST
Last Updated 27 ಏಪ್ರಿಲ್ 2024, 6:51 IST
ಅಕ್ಷರ ಗಾತ್ರ

ಹನೂರು: ಗ್ರಾಮಕ್ಕೆ ರಸ್ತೆ, ವಿದ್ಯುತ್‌ ಸೇರಿದಂತೆ ಇತರೆ ಮೂಲಸೌಕರ್ಯಗಳು ಇಲ್ಲ ಎಂಬ ಕಾರಣಕ್ಕೆ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಪ್ರತಿ ಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ಮಾಡುತ್ತಿದ್ದ ಇಂಡಿಗನತ್ತ ಗ್ರಾಮಸ್ಥರು ಈ ಬಾರಿ ಘರ್ಷಣೆಗೆ ಇಳಿದು ಮತಗಟ್ಟೆ, ಇವಿಎಂ ಧ್ವಂಸ ಮಾಡಿರುವ ಘಟನೆ ಅಚ್ಚರಿ ಉಂಟು ಮಾಡಿದೆ. 

ಇಂಡಿಗನತ್ತ, ಮೆಂದಾರೆ ಸೇರಿದಂತೆ ಐದು ಗ್ರಾಮಗಳ ಗ್ರಾಮಸ್ಥರು ತಿಂಗಳ ಹಿಂದಿನಿಂದಲೇ ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳುತ್ತಾ ಬಂದಿದ್ದರು. ತಾಲ್ಲೂಕು ಆಡಳಿತದ ಅಧಿಕಾರಿಗಳು ಮಾತ್ರವಲ್ಲದೇ, ಸ್ವತಃ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಗ್ರಾಮಕ್ಕೆ ಭೇಟಿ ನೀಡಿ ಮನವೊಲಿಸುವ ಕೆಲಸ ಮಾಡಿದ್ದರು. 

ಪ‍್ರತಿ ಚುನಾವಣೆ ಸಂರ್ಭದಲ್ಲೂ ‘ಮತದಾನ ಮಾಡುವುದಿಲ್ಲ’ ಎಂಬ ಎಚ್ಚರಿಕೆ ನೀಡುತ್ತಿದ್ದ ಗ್ರಾಮಸ್ಥರು, ಅಧಿಕಾರಿಗಳು ಮನವೊಲಿಸಿದ ನಂತರ ತಮ್ಮ ಹಕ್ಕು ಚಲಾಯಿಸುತ್ತಿದ್ದರು. ಈ ಬಾರಿಯೂ ಮತದಾನ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾಡಳಿತ ಇತ್ತು. ಆದರೆ,  ಅನಿರೀಕ್ಷಿತವಾಗಿ ನಡೆದ ಘಟನೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯನ್ನೂ ಅಚ್ಚರಿಗೆ ಕೆಡವಿದೆ. 

ಅಸಹನೀಯ ಬದುಕು:

ಸ್ವಾತಂತ್ರ್ಯ ಬಂದಾಗಿನಿಂದಲೂ ಕನಿಷ್ಠ ಸೌಲಭ್ಯಗಳಿಲ್ಲದೆ ಈ ಭಾಗದ ಜನರ ಬದುಕು ಅಸಹನೀಯವಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇರುವುದೇ ಇವರಿಗೆ ಶಾಪವಾಗಿದೆ. ರಸ್ತೆ, ಕುಡಿಯುವ ನೀರು, ವಿದ್ಯುತ್‌ನಂತಹ ಸೌಲಭ್ಯಗಳನ್ನು ಕೊಡಿ ಎಂದು ಮುಖ್ಯಮಂತ್ರಿ, ಸಚಿವರು, ಜಿಲ್ಲಾಡಳಿತದ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ, ಪ್ರಯೋಜನವಾಗಿಲ್ಲ. 

ಈ ಬಾರಿ ₹38 ಕೋಟಿ ವೆಚ್ಚದಲ್ಲಿ ಬೆಟ್ಟ ವ್ಯಾಪ್ತಿಯ ಗ್ರಾಮಗಳಿಗೆ ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿತ್ತು. ಜಿಲ್ಲಾಧಿಕಾರಿ ಅವರು ಕಳೆದ ತಿಂಗಳು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಸೌಕರ್ಯ ಕಲ್ಪಿಸುವ ಭರವಸೆ ನೀಡಿದ್ದರು. 

‘ಹಲವು ವರ್ಷಗಳಿಂದ ಭರವಸೆಗಳನ್ನು ಕೇಳಿ ಕೇಳಿ ಬೇಸತ್ತಿದ್ದ ಗ್ರಾಮಸ್ಥರ ಸಹನೆಯ ಕಟ್ಟೆ ಶುಕ್ರವಾರ ಒಡೆದಂತೆ ಕಾಣುತ್ತಿದೆ. ಮತದಾನ ಬಹಿಷ್ಕಾರ ನಿರ್ಧಾರ ಮಾಡಿದ ನಂತರವೂ ಮೆಂದಾರೆ ಗ್ರಾಮದವರನ್ನು ಅಧಿಕಾರಿಗಳು ಮನವೊಲಿಸಿ ಮತದಾನ ಮಾಡುವಂತೆ ಮಾಡಿದ್ದು, ಗ್ರಾಮಸ್ಥರಲ್ಲಿ ಅಸಮಾಧಾನ ಉಂಟು ಮಾಡಿತು’ ಎಂದು ಅವರ ಪರ ಹೋರಾಟದಲ್ಲಿ ಭಾಗಿಯಾದ ರೈತ ಮುಖಂಡರು.  

ಶುಕ್ರವಾರ ಇಂಡಿಗನತ್ತ, ಮೆಂದಾರೆ, ಪಡಸಲನತ್ತ, ತುಳಸಿಕೆರೆ ಮತ್ತು ತೇಕಾಣೆ (ನಾಗಮಲೆ) ಗ್ರಾಮಸ್ಥರು ಮತದಾನದಿಂದ ಹೊರಗುಳಿದಿದ್ದರು. ಬೆಳಿಗ್ಗೆ ಒಂಬತ್ತು ಗಂಟೆಯಾದರೂ ಮತಗಟ್ಟೆ ಬಳಿ ಜನರು ಬರದಿದ್ದನ್ನು ಮನಗಂಡ ತಹಶೀಲ್ದಾರ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದೆ. ಎಷ್ಟೇ ಪ್ರಯತ್ನ ಮಾಡಿದರೂ ಮತದಾನಕ್ಕೆ ಒಪ್ಪದಿದ್ದನ್ನು ಕಂಡ ಅಧಿಕಾರಿಗಳು ಮೆಂದಾರೆ ಗ್ರಾಮದಲ್ಲಿರುವ ಗಿರಿಜನರನ್ನು ಮನವೊಲಿಸಿ ಮತದಾನ ಮಾಡಿಸಲು ಮುಂದಾಗಿದ್ದಾರೆ.

ಈ ವೇಳೆ ಇಂಡಿಗನತ್ತ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಮಹಿಳೆಯರು ಸೇರಿದಂತೆ ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದಾಗ ಜನ ಕೋಪೋದ್ರಿಕ್ತರಾಗಿ ಮತಗಟ್ಟೆಯನ್ನೇ ದ್ವಂಸ ಮಾಡಿದರು. 

‘ಗ್ರಾಮ ಅರಣ್ಯದೊಳಗಿದೆ ಎಂಬ ಒಂದೇ ಕಾರಣದಿಂದ ನಾವು ಪ್ರಾಣಿಗಳಿಂತಲೂ ಕಡೆಯಾಗಿ ಬದುಕುತ್ತಿದ್ದೇವೆ. ನಮ್ಮ ಬದುಕು ಯಾರಿಗೂ ಮುಖ್ಯವಲ್ಲ, ನಮ್ಮ ಮತ ಮಾತ್ರ ಅವರಿಗೆ ಮುಖ್ಯ. ಇದನ್ನು ಮನಗಂಡು ನಾವು ಈ ಬಾರಿ ಮತದಾನವನ್ನು ಬಹಿಷ್ಕರಿಸಿದ್ದೆವು. ಆದರೆ ಅಧಿಕಾರಿಗಳು ಜನರನ್ನು ಹೆದರಿಸಿ ಮತ ಹಾಕಿಸಲು ಯತ್ನಿಸಿದರು. ಇದರಿಂದ ಜನರು ಕೋಪಗೊಂಡಿದ್ದಾರೆ. ಅಷ್ಟು ವರ್ಷಗಳಿಂದಲೂ ನಾವು ತಡೆದುಕೊಂಡಿದ್ದ ನೋವು, ಆಕ್ರೋಶ ಇಂದು ಹೊರಬಂದಿದೆ’ ಎಂದು ಗ್ರಾಮಸ್ಥರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಗಿರಿಜನರ ಖಂಡನೆ ಮೆಂದಾರೆ ಗ್ರಾಮದಲ್ಲಿ ಗಿರಿಜನರು ವಾಸವಿದ್ದಾರೆ. ಅಧಿಕಾರಿಗಳ ಮಾತು ಕೇಳಿ ಅವರು ಮತದಾನ ಮಾಡಲು ಇಂಡಿಗನತ್ತಕ್ಕೆ ಹೋಗಿದ್ದರು.  ‘ಘರ್ಷಣೆಯ ವೇಳೆ ಗ್ರಾಮಸ್ಥರು ನಡೆಸಿದ ಕಲ್ಲು ತೂರಾಟದಿಂದ 20ಕ್ಕೂ ಹೆಚ್ಚು ಮಂದಿಯ ತಲೆ ಕಾಲು ಬೆನ್ನು ಹಾಗೂ ಇನ್ನಿತರ ಕಡೆಗಳಲ್ಲಿ ಗಾಯಗಳಾಗಿವೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸೋಲಿಗರ ಮುಖಂಡರು ಒತ್ತಾಯಿಸಿದರು. ಘಟನೆಗೆ ಸಂಬಂಧಿಸಿದಂತೆ ಮಹದೇಶ್ವರ ಬೆಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಎಎಸ್‌ಪಿ ಉದೇಶ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗ್ರಾಮದ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT