ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 3ರಷ್ಟು ಮತದಾನ ಏರಿಕೆ

‘ಸ್ವೀಪ್‌’ ಸಮಿತಿ ನಿರೀಕ್ಷೆಯಷ್ಟು ಹೆಚ್ಚಾಗದ ಮತದಾನ ಪ್ರಮಾಣ
Published 27 ಏಪ್ರಿಲ್ 2024, 15:47 IST
Last Updated 27 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭಾ ಕ್ಷೇತ್ರದ ಮತದಾನದ ಪ್ರಮಾಣ 2019ರ ಚುನಾವಣೆಗಿಂತ ಶೇ 3ರಷ್ಟು ಹೆಚ್ಚಾಗಿದೆ. 17ನೇ ಲೋಕಸಭೆಗೆ ಐದು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಶೇ 70.5 ಮತದಾನವಾಗಿತ್ತು. ಪ್ರಸಕ್ತ ಚುನಾವಣೆಯಲ್ಲಿ ಶೇ 73.3ರಷ್ಟು ಮತದಾನ ದಾಖಲಾಗಿದೆ.

ಕ್ಷೇತ್ರ ವ್ಯಾಪ್ತಿಯ 18,56,876 ಮತದಾರರಲ್ಲಿ 13,61,031 ಮತದಾರರು ಹಕ್ಕು ಚಲಾಯಿಸಿದ್ದಾರೆ. ಶೇ 72.22 ಮಹಿಳೆಯರು ಹಾಗೂ ಶೇ 74.39 ‍‍ಪುರುಷರು ಮತದಾನ ಮಾಡಿದ್ದಾರೆ. ಮೊಳಕಾಲ್ಮುರು ಹಾಗೂ ಶಿರಾದಲ್ಲಿ ಅತಿ ಹೆಚ್ಚು ಮತದಾನ ನಡೆದಿದ್ದು, ಪಾವಗಡದಲ್ಲಿ ಅತಿ ಕಡಿಮೆ ಮತದಾನವಾಗಿದೆ.

ಕ್ಷೇತ್ರಕ್ಕೆ ನಡೆದ 18 ಚುನಾವಣೆಗಳಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಮತದಾನವಾಗಿದೆ. 1999ರಲ್ಲಿ ಶೇ 73ರಷ್ಟು ಮತದಾನವಾಗಿತ್ತು. ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಅತಿ ಹೆಚ್ಚು ಮತದಾನವಾಗಿ ಇದು ದಾಖಲಾಗಿತ್ತು. ಆ ಬಳಿಕ ಮತದಾನದ ಪ್ರಮಾಣ ಇಳಿಕೆ ಕಂಡಿತ್ತು. 2019ರ ಚುನಾವಣೆಯಲ್ಲಿ ಮತ ಪ್ರಮಾಣ ಶೇ 4.5ರಷ್ಟು ಏರಿಕೆ ಕಂಡಿತ್ತು.

1952ರಲ್ಲಿ ಶೇ 60, 1957ಶೇ 59, 1962 ಶೇ 65, 1967ರಲ್ಲಿ ಶೇ 68, 1971ರಲ್ಲಿ ಶೇ 60, 1977ರಲ್ಲಿ ಶೇ 61 1980ಶೇ 59, 1984 ಶೇ 70, 1989ರಲ್ಲಿ ಶೇ 67, 1991 ಶೇ 57, 1996 ಶೇ 64, 1998 ಶೇ 66, 1999ರಲ್ಲಿ ಶೇ 73, 2004ರಲ್ಲಿ ಶೇ 69, 2009ರಲ್ಲಿ ಶೇ 54 ಹಾಗೂ 2014 ಶೇ 66, 2019ರಲ್ಲಿ ಶೇ 70.5ರಷ್ಟು ಮತದಾನವಾಗಿದೆ.

ಏರಿಕೆಯ ಗುರಿ ಶೇ 5: ಮತದಾರರ ಜಾಗೃತಿ ಹಾಗೂ ಪಾಲ್ಗೊಳ್ಳುವಿಕೆ (ಸ್ವೀಪ್‌) ಸಮಿತಿಯ ನಿರೀಕ್ಷೆಗೆ ತಕ್ಕಂತೆ ಮತದಾನದ ಪ್ರಮಾಣ ಏರಿಕೆ ಕಂಡಿಲ್ಲ. ಮತದಾನದ ಪ್ರಮಾಣವನ್ನು ಶೇ 5ರಷ್ಟು ಹೆಚ್ಚಿಸಬೇಕು ಎಂಬ ಗುರಿಯೊಂದಿಗೆ ಸಮಿತಿ ಮಾಡಿದ ಕೆಲಸಕ್ಕೆ ಫಲ ಸಿಕ್ಕಿದ್ದು ಕಡಿಮೆ.

ಚುನಾವಣೆ ಘೋಷಣೆಯಾಗುವ ಮುನ್ನವೇ ಅಸ್ತಿತ್ವಕ್ಕೆ ಬಂದಿದ್ದ ಸ್ವೀಪ್‌ ಸಮಿತಿ, ಮತದಾರರ ಜಾಗೃತಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿತ್ತು. ಸ್ವೀಪ್‌ ಸಮಿತಿ ಅಧ್ಯಕ್ಷರೂ ಆಗಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌.ಜೆ.ಸೋಮಶೇಖರ್‌ ನೇತೃತ್ವದಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗಿತ್ತು. 2019ರಲ್ಲಿ ಕಡಿಮೆ ಮತದಾನವಾಗಿದ್ದ 533 ಮತಗಟ್ಟೆಗಳನ್ನು ಗುರುತಿಸಿ ಜಾಗೃತಿಗೆ ಶ್ರಮಿಸಲಾಗಿತ್ತು.

ಮತದಾರರ ಆಕರ್ಷಣೆಗೆ 54 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮ್ಯಾರಥಾನ್‌, ಓಟ, ದ್ವಿಚಕ್ರ ವಾಹನ ಜಾಥಾ, ಪಂಜಿನ ಮೆರವಣಿಗೆ, ರಂಗೋಲಿ ಸ್ಪರ್ಧೆ ಸೇರಿ ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. 17ನೇ ಲೋಕಸಭಾ ಚುನಾವಣೆಯಲ್ಲಿ ಶೇ 4.5ರಷ್ಟು ಏರಿಕೆ ಕಂಡಿದ್ದ ಮತದಾನದ ಪ್ರಮಾಣ, ಪ್ರಸಕ್ತ ಚುನಾವಣೆಯಲ್ಲಿ ಶೇ 3ರಷ್ಟು ಮಾತ್ರ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT