ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ: ಮಣ್ಣಿನ ದೀಪಕ್ಕಿಲ್ಲ ಬೇಡಿಕೆ

ಜಗಮಗಿಸುವ ಬಣ್ಣ ಬಣ್ಣದ ವಿದ್ಯುತ್‌ ದೀಪಗಳ ನಡುವೆ ಸಾಲು ಸಾಲು ಮೇಣದ ದೀಪದ ಬೆಳಕು
Last Updated 31 ಅಕ್ಟೋಬರ್ 2016, 9:36 IST
ಅಕ್ಷರ ಗಾತ್ರ

ಚಳ್ಳಕೆರೆ: ದಿನದಿಂದ ದಿನಕ್ಕೆ ಆಧುನಿಕತೆ ಬೆಳೆಯುತ್ತಿದ್ದು, ದೀಪಾವಳಿ ಹಬ್ಬದಲ್ಲಿ ಮೇಣದ ದೀಪ, ಕ್ಯಾಂಡಲ್‌ಗಳ ಬಳಕೆಯಿಂದ ಸಾಂಪ್ರದಾಯಿಕ ದೀಪಗಳ ಬಳಕೆ ಕಡಿಮೆಯಾಗಿ  ಮಣ್ಣಿನ ದೀಪದ ವ್ಯಾಪಾರಿಗಳು ಸಮಸ್ಯೆ ಎದುರಿಸುವಂತಾಗಿದೆ.

ಬೆಳಕಿನ ಹಬ್ಬ ದೀಪಾವಳಿ ಎಂದರೆ ಜಗಮಗಿಸುವ ಬಣ್ಣ ಬಣ್ಣದ ವಿದ್ಯುತ್‌ ದೀಪಗಳು, ಪಟಾಕಿಗಳ ಸದ್ದು ಮತ್ತು ಪ್ರಮುಖವಾಗಿ ಮನೆಯ ಬಾಗಿಲು, ಕಿಟಕಿಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಲಾಗುವ ದೀಪಗಳ ಬಳಕೆ ಎಲ್ಲೆಡೆ ಕಂಡು ಬರುತ್ತದೆ. ಆದರೆ, ಮಣ್ಣಿನ ದೀಪಗಳ ಸ್ಥಳವನ್ನು ಆಧುನಿಕ ಮೇಣದ ದೀಪಗಳು ಆಕ್ರಮಿಸುತ್ತಿವೆ.

ದೀಪಾವಳಿ ಹಬ್ಬದಲ್ಲಿ ಹೆಚ್ಚು ಬಳಕೆಯಾಗುವ ದೀಪಗಳಿಗೆ ಇಂದು ಆಧುನಿಕ ಸ್ಪರ್ಶ ನೀಡಲಾಗಿದೆ. ಹಿಂದೆ ಮಣ್ಣಿನಲ್ಲಿ ತಯಾರಿಸಲಾಗುತ್ತಿದ್ದ ದೀಪಗಳು ಕಡಿಮೆಯಾಗಿವೆ.ಮಣ್ಣಿನ ದೀಪಗಳ ಸ್ಥಾನದಲ್ಲಿ ಮೇಣದ ದೀಪಗಳು ಮತ್ತು ಪ್ಲಾಸ್ಟಿಕ್‌ ದೀಪಗಳು ಬಂದು ಸಾಂಪ್ರಾದಾಯಿಕ ಮಣ್ಣಿನ ದೀಪದ ಬಳಕೆ ಕಡಿಮೆಯಾಗಿದೆ. ಜತೆಗೆ ಮಣ್ಣಿನ ದೀಪಗಳ ವ್ಯಾಪಾರಸ್ಥರೂ ಸಮಸ್ಯೆ ಎದುರಿಸುವಂತಾಗಿದೆ.

‘ಚಳ್ಳಕೆರೆ ನಗರದ ಬೆಂಗಳೂರು ರಸ್ತೆ, ಬಳ್ಳಾರಿ ರಸ್ತೆ, ಪಾವಗಡ ರಸ್ತೆ, ನೆಹರೂ ವೃತ್ತದಲ್ಲಿ ಸಾವಿರಾರು ಸಂಖ್ಯೆಯ ಮಣ್ಣಿನ ದೀಪಗಳನ್ನು ವ್ಯಾಪಾರಕ್ಕಾಗಿ ಇಡುವ ಮೂಲಕ ಗ್ರಾಹಕರಿಗಾಗಿ ಕಾಯುವಂತಾಗಿದೆ. ಆದರೆ, ಬಹುತೇಕ ಸಾರ್ವಜನಿಕರು ಆಧುನಿಕ ಮೇಣದ ದೀಪಗಳ ಖರೀದಿಯಲ್ಲಿ ತೊಡಗಿರುವುದರಿಂದ ಮಣ್ಣಿನ ದೀಪಗಳಿಗೆ ಬೇಡಿಕೆ ಕುಸಿದಿದೆ’ ಎನ್ನುತ್ತಾರೆ ರಸ್ತೆ ಬದಿಯ ಮಣ್ಣಿನ ದೀಪದ ವ್ಯಾಪಾರಿ ಭಾಗ್ಯಮ್ಮ.

‘ತಾಲ್ಲೂಕಿನಲ್ಲಿ ಮಳೆ ಅಭಾವದಿಂದ ಬೆಳೆಗಳೆಲ್ಲಾ ಒಣಗಿ ರೈತ ನಷ್ಟ ಅನುಭವಿಸುವಂತಾಗಿದೆ. ಇದರಿಂದ ವ್ಯಾಪಾರವೂ ಕುಸಿದು ದೀಪಾವಳಿ ಹಬ್ಬಕ್ಕೆ ಕಳೆ ಇಲ್ಲದಂತಾಗಿದೆ.

ಇಂತಹ ಸಂದರ್ಭದಲ್ಲಿಯೂ ಸಾವಿರಾರೂ ಹಣ ವೆಚ್ಚ ಮಾಡಿ ಮಣ್ಣಿನ ದೀಪಗಳ ವ್ಯಾಪಾರ ನಡೆಸಲು ಸ್ಥಳೀಯರು ಮುಂದಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ತಯಾರಾಗುವ ಮಣ್ಣಿನ ದೀಪಗಳನ್ನು ಖರೀದಿಸಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಒಂದು ಸಾವಿರದಷ್ಟು ಚಿಕ್ಕ ಮಣ್ಣಿನ ದೀಪಗಳಿಗೆ ₹ 1,750ರಷ್ಟು ಹಣ ನೀಡಿ ಸಗಟು ದರದಲ್ಲಿ ಖರೀದಿ ಮಾಡಲಾಗಿದೆ.

ಈ ದೀಪಗಳನ್ನು ಬೀದಿ ಬದಿಯಲ್ಲಿ   ಡಜನ್‌ಗೆ ₹ 30ರಂತೆ ಮಾರಾಟ ಮಾಡಲಾಗುತ್ತಿದೆ. ಆದರೆ, ಈ ದೀಪಗಳಿಗೆ ಗ್ರಾಹಕರಿಲ್ಲದೆ ವ್ಯಾಪಾರ ಕುಸಿದು ಹಾಕಿದ ಬಂಡವಾಳ ಸಹ ಕೈಗೆಟುಕದಂತಾಗಿದೆ’ ಎನ್ನುತ್ತಾರೆ ವ್ಯಾಪಾರಿ ಶ್ರೀನಿವಾಸ್‌.

ಮಣ್ಣಿನ ದೀಪಗಳನ್ನು ಖರೀದಿಸಿ ತರುವ ಸಮಯ 100 ರಿಂದ 120ಕಿಲೋ ಮೀಟರ್ ಪ್ರಯಾಣ ಬೆಳೆಸಬೇಕಾಗುತ್ತದೆ. ಇಂತಹ ಸಂದರ್ಭ ಬಾಕ್ಸ್‌ಗಳಲ್ಲಿ ಸಂಗ್ರಹಿಸಲಾದ ದೀಪಗಳು ಕೆಲವು ಒಡೆದು ಚೂರಾಗುತ್ತವೆ. ಜತೆಗೆ, ಪ್ರಯಾಣದ ವೆಚ್ಚ, ಖರ್ಚು, ಬಂಡವಾಳ ಎಲ್ಲಾ ಸೇರಿ ₹ 15 ಸಾವಿರಕ್ಕೂ ಹೆಚ್ಚು ಹಣ ನೀಡಿ ದೀಪಗಳನ್ನು ಖರೀದಿಸಿ ವ್ಯಾಪಾರದಲ್ಲಿ ತೊಡಗುತ್ತೇವೆ. ಆದರೆ, ಆಧುನಿಕ ದೀಪಗಳ ಬಳಕೆ ಮತ್ತು ಬರಗಾಲದಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿ ವ್ಯಾಪಾರಕ್ಕೆ ಹಾಕಿರುವ ಬಂಡವಾಳ  ಕೈಗೆಟುಕದಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಮಣ್ಣಿನ ದೀಪದ ವ್ಯಾಪಾರಿ ಮಂಜುನಾಥ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT