ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೀಚಿಕೆಯಾದ ಆರೋಗ್ಯ ಸೇವೆ

ಬೆಳಗೆರೆ ಗ್ರಾಮದ ಹೆರಿಗೆ ಆಸ್ಪತ್ರೆ, ಆರೋಗ್ಯ ಉಪ ಕೇಂದ್ರಕ್ಕೆ ‘ಅನಾರೋಗ್ಯ’
Last Updated 21 ಜೂನ್ 2017, 5:23 IST
ಅಕ್ಷರ ಗಾತ್ರ

ಚಳ್ಳಕೆರೆ: ಆಸ್ಪತ್ರೆ ಬಾಗಿಲಿಗೆ ಜಡಿದ ಬೀಗ. ಆವರಣದ ತುಂಬಾ ಹರಡಿರುವ ತ್ಯಾಜ್ಯ. ದನ, ಕರುಗಳ ಆಶ್ರಯ ತಾಣವಾದ ಆವರಣ. ಕಟ್ಟಡ, ತಡೆಗೋಡೆ ಸುತ್ತಲೂ ಬೆಳೆದು ನಿಂತ ಮುಳ್ಳಿನ ಗಿಡಗಳು...

ತಾಲ್ಲೂಕಿನ ಬೆಳಗೆರೆ ಗ್ರಾಮದ ಹೆರಿಗೆ ಆಸ್ಪತ್ರೆ ಮತ್ತುಆರೋಗ್ಯ ಉಪಕೇಂದ್ರ ಹಲವು ವರ್ಷಗಳಿಂದ ಬಾಗಿಲು ಮುಚ್ಚಿದೆ. ಸಮರ್ಪಕ ನಿರ್ವಹಣೆ ಇಲ್ಲದೆ ಸಾರ್ವಜನಿಕರಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ.

ಬೆಳಗೆರೆ ಗ್ರಾಮ ಪಂಚಾಯ್ತಿ ಸುತ್ತಮುತ್ತಲಿನ ನಾರಾಯಣಪುರ ಹುಲಿಕುಂಟೆ, ಭೋವಿ ಕಾಲೊನಿ, ಮಟ್ಟಲಗೆರೆ ಹಟ್ಟಿ, ಗೊರ್ಲತ್ತು ಸೇರಿದಂತೆ ಹಲವು ಗ್ರಾಮಗಳಿಗೆ ಅನುಕೂಲ ಕಲ್ಪಿಸಬೇಕಾಗಿದ್ದ ಆಸ್ಪತ್ರೆ ಕಾರ್ಯನಿರ್ವಹಿಸದೇ ಇರುವುದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಈ ಗ್ರಾಮದಿಂದ ತಾಲ್ಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆ 30 ಕಿ.ಮೀ ದೂರದಲ್ಲಿದೆ. ದೇವರಮರಿಕುಂಟೆ, ಕಲಮರಹಳ್ಳಿ, ಬೆಳಗೆರೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 20 ಗ್ರಾಮಗಳಿವೆ. ಈ ಗ್ರಾಮಗಳ ಜನರಿಗೆ ತ್ವರಿತ ಚಿಕಿತ್ಸೆ ಅಗತ್ಯವಿದ್ದರೆ ಪರಶುರಾಂಪುರ, ಚಳ್ಳಕೆರೆ ಮತ್ತು ಸಾಣಿಕೆರೆ ಆರೋಗ್ಯ ಕೇಂದ್ರಗಳಿಗೆ ತೆರಳುವುದು ಅನಿವಾರ್ಯ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಕಡೆ ಗಮನ ನೀಡಿ ಸಮಸ್ಯೆ ಪರಿಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೆಳಗೆರೆಯ ಆಸ್ಪತ್ರೆಯನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಆಸ್ಪತ್ರೆಯ ಸಿಬ್ಬಂದಿಗಾಗಿ ಕುಡಿಯುವ ನೀರು, ವಿದ್ಯುತ್‌ ಸೇರಿದಂತೆ ಅಗತ್ಯ ಮೂಲಸೌಕರ್ಯ ಇರುವ ವಸತಿನಿಲಯ ವಿದೆ. ಆದರೆ, ಆಸ್ಪತ್ರೆಯನ್ನು ಆರಂಭಿಸಿ ಜನರಿಗೆ ಆರೋಗ್ಯ ಸೇವೆ ಒದಗಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ ಎಂದು ಗ್ರಾಮದ ಗೌತಮ್‌ ಪ್ರತಿಕ್ರಿಯಿಸಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆ ನೀಡುವಲ್ಲಿ ಆರೋಗ್ಯಾಧಿಕಾರಿ ಗಳು ಸಂಪೂರ್ಣ ವಿಫಲರಾಗಿದ್ದಾರೆ. ಅಪಘಾತ, ವಿಷ ಜಂತುಗಳ ಕಡಿತ, ಜ್ವರ, ಡೆಂಗಿ, ಮಲೇರಿಯಾ, ಚಿಕೂನ್‌ಗುನ್ಯಾದಂತಹ ರೋಗಗಳು ಕಂಡು ಬಂದರೆ ಉತ್ತಮ ಚಿಕಿತ್ಸೆಗೆ ಪರದಾಡುವಂತಾಗಿದೆ. ಹೆರಿಗೆ ನೋವು ಕಾಣಿಸಿಕೊಂಡರೆ ತುರ್ತು ಚಿಕಿತ್ಸೆ ದೊರೆಯದೇ ಜೀವ ಕೈಯಲ್ಲಿ ಹಿಡಿದು ಬೇರೆ ಕಡೆಗೆ ಹೋಗಬೇಕಾಗಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಕೆ.ಟಿ.ನಿಜಲಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT