ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಂಬಳ | ಬಾಳೆಹಣ್ಣು ದರ ಕುಸಿತ: ಕಂಗಾಲಾದ ರೈತರು

ಏಕಾಏಕಿ ಸಗಟು ದರ ಪ್ರತಿ ಕೆಜಿಗೆ ₹30 ರಿಂದ ₹15ಕ್ಕೆ ಕುಸಿತ
Published 2 ಏಪ್ರಿಲ್ 2024, 4:24 IST
Last Updated 2 ಏಪ್ರಿಲ್ 2024, 4:24 IST
ಅಕ್ಷರ ಗಾತ್ರ

ಡಂಬಳ: ಭೀಕರ ಬರಗಾಲದ ಮಧ್ಯೆಯೂ ಬಾಳೆ ಬೆಳೆದಿರುವ ರೈತರು ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ. ಮಾರುಕಟ್ಟೆಯಲ್ಲಿ ಕೆಲವು ದಿನಗಳಿಂದ ಬಾಳೆಗೆ ಯೋಗ್ಯ ದರ ದೊರೆಯುತ್ತಿಲ್ಲ. ಇದರಿಂದ ಬೆಳೆಗಾಗಿ ಮಾಡಿರುವ ಖರ್ಚು ವಾಪಸ್ ಬಾರದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾಲದ ದವಡೆಗೆ ಸಿಲುಕಿರುವ ರೈತರು ಸಂಕಷ್ಟ ಅಳಲು ತೋಡಿಕೊಳ್ಳುತ್ತಿದ್ದಾರೆ.

ನೀರಾವರಿ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆ ಮತ್ತು ಹಣಕಾಸಿನ ಬೆಳೆ ಎಂದು ಗುರುತಿಸುವ ಬಾಳೆಗೆ ಇತ್ತೀಚೆಗೆ ಬೇಡಿಕೆ ಕುಸಿತವಾಗಿದೆ.

ಬಾಳೆ ಹಣ್ಣು ಫಲಕ್ಕೆ ಬಂದ ನಂತರ ಶೇಖರಣೆ ಮಾಡಲು ಸಾಧ್ಯವಾಗುವುದಿಲ್ಲ. ಮಾರಾಟ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಸ್ಥಳೀಯ ಸಗಟು ಮಾರಾಟಗಾರರು ಮತ್ತು ಚಿಲ್ಲರೆ ಮಾರಾಟಗಾರರು ಸದ್ಯ ಅಗತ್ಯಕ್ಕೆ ತಕ್ಕಂತೆ ಮಾತ್ರ ಖರೀದಿ ಮಾಡುತ್ತಿದ್ದಾರೆ. ರೈತರು ನಾಲ್ಕು ತಿಂಗಳುಗಳ ಹಿಂದೆ ಯಾಲಕ್ಕಿ ಬಾಳೆಹಣ್ಣನ್ನು ಪ್ರತಿ ಕೆಜಿಗೆ ₹28ರಿಂದ ₹35 ರವರಿಗೆ ಮಾರಾಟವಾಗಿತ್ತು.

‘ಎರಡು ಟನ್ ಬಾಳೆಹಣ್ಣು ಮಾರಾಟ ಮಾಡಿದ್ದು ಅದರಿಂದ ಅಂದಾಜು ₹2 ಲಕ್ಷ ಆದಾಯ ಈ ಹಿಂದೆ ಬಂದಿತ್ತು. ಈಗ ಮತ್ತೆ ಗಿಡದಲ್ಲಿ ಬೆಳೆ ಹಣ್ಣು ಫಸಲಿಗೆ ಬಂದಿವೆ. ಆದರೆ ಪ್ರತಿ ಕೆಜಿ ಬಾಳೆ ಹಣ್ಣಿಗೆ ₹12ರಿಂದ ₹15 ಮಾರಾಟವಾಗುತ್ತಿದೆ. ಮೂರು ಎಕರೆ ಬಾಳೆಗೆ ಗೊಬ್ಬರ, ಬೀಜ, ಗಳೆವು, ಹರಗುವುದು, ಕಸ ತಗೆಯುವುದು ಸೇರಿ ಪ್ರತಿ ಎಕರೆಗೆ ₹40ರಿಂದ ₹50 ಸಾವಿರ ಖರ್ಚಾಗುತ್ತದೆ. ದರ ಕುಸಿತದಿಂದ ಬದುಕು ಸಂಕಷ್ಟಕ್ಕೆ ಸಿಲುಕಿದೆ. ರೈತರ ಪರಿಸ್ಥಿತಿ ಹೇಳ ತೀರದು. ಬಾಳೆ ಬೆಳೆದ ರೈತ ಸಂಕಷ್ಠಕ್ಕೆ ಸಿಲುಕಿದ್ದು ಸರ್ಕಾರ ನಾವು ಅನುಭವಿಸುತ್ತಿರುವ ಸಂಕಷ್ಠಕ್ಕೆ ಧ್ವನಿಯಾಗಬೇಕು. ಹಗಲು ರಾತ್ರಿ ಶ್ರಮವಹಿಸಿ ದುಡಿದರು ರೈತನ ಬುದಕು ನೆಮ್ಮದಿ ಇಲ್ಲದಂತೆ ಆಗಿದೆ‘ ಎಂದು ಬಾಳೆ ಬೆಳೆದಿರುವ ರೈತ ಮಳ್ಳಪ್ಪ ಗವಿಯಪ್ಪ ಮಠದ ಅಳಲು ತೋಡಿಕೊಂಡರು.

‘ಪ್ರತಿ ಕೆಜಿ ಬಾಳೆಹಣ್ಣು ಕನಿಷ್ಠ ₹35 ರಿಂದ ₹40 ಮಾರಾಟವಾದರೆ ಮಾತ್ರ ರೈತರಿಗೆ ಸ್ವಲ್ಪ ಲಾಭವಾಗುತ್ತದೆ. ಹಗಲು ಮತ್ತು ರಾತ್ರಿ ನಿರಂತವಾಗಿ ಬೆಳೆ ರಕ್ಷಣೆಗೆ ಒಬ್ಬರು ಕಾಯಂ ಇರಬೇಕು. ಎಂಟು ದಿನಕ್ಕೊಮ್ಮೆ ನೀರು ಹಾಯಿಸಬೇಕು. ನಾವು ಸಾಮಾನ್ಯ ವರ್ಗದ ರೈತರಾಗಿದ್ದು ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆಯಡಿ ಬಾಳೆ  ನಾಟಿಮಾಡಿದ್ದು ಒಮ್ಮೆ ₹15 ಸಾವಿರ ಮತ್ತೊಮ್ಮೆ ₹8 ಸಾವಿರ ಸಹಾಯಧನ ಬಂದಿದೆ. ಉಳಿದ ಸಹಾಯಧನ ಇನ್ನೂ ಬಂದಿಲ್ಲ. ಬಾಳೆ ದರಕುಸಿತ ಪರಿಣಾಮ ಬೆಳೆ ನಾಶ ಮಾಡುವ ಸ್ಥಿತಿ ಬಂದಿದೆ‘ ಎನ್ನುತ್ತಾರೆ ಮಳ್ಫಪ್ಪ ಗವಿಯಪ್ಪ ಮಠದ.

‘ಬಾಳೆ ಬೆಳೆಯಿಂದ ಬರುವ ಆದಾಯದಿಂದ ಬದುಕಿಗೆ ಆಸರೆಯಾಗುತ್ತದೆ. ಸಾಲ ಮುಟ್ಟುತ್ತದೆ ಎನ್ನುವ ವಿಶ್ವಾಸವಿತ್ತು. ಆದರೆ ಹಲವು ಕಾರಣಾಂತರದಿಂದ ದರ ಕುಸಿದ ಪರಿಣಾಮ ಬಾಳೆ ಬೆಳೆದ ರೈತ ಸಾಲದ ದವಡೆಯಲ್ಲಿ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ರೈತರ ನೆರವಿಗೆ ಬರಬೇಕು‘ ಎನ್ನುತ್ತಾರೆ ಇನ್ನೂರ್ವ ರೈತ ಮುತ್ತಣ್ಣ ಕೊಂತಿಕಲ್.

ಡಂಬಳ, ಡೋಣಿ, ಡೋಣಿತಾಂಡ, ಅತ್ತಿಕಟ್ಟಿ, ಜಂತಲಿಶಿರೂರ, ಹಿರೇವಡ್ಡಟ್ಟಿ, ಚಿಕ್ಕವಡ್ಡಟ್ಟಿ, ಕೊರ್ಲಹಳ್ಳಿ, ಶಿಂಗಟಾಲೂರ, ಹಮ್ಮಿಗಿ, ಕಕ್ಕೂರ, ಮುಂಡವಾಡ, ಮುರಡಿ ಮುಂತಾದ ಗ್ರಾಮದ ನೂರಾರು ಹೆಕ್ಟೇರ್‌ ನೀರಾವರಿ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ನರೇಗಾ ಯೋಜನೆಯಡಿ ಎಲ್ಲಾ ವರ್ಗದ ಜನರಿಗೂ ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ಬೆಳೆಯಲು ₹1.98 ಲಕ್ಷ ಕೂಲಿ ಸಹಾಯಧನ ಬರುತ್ತದೆ. ಬಾಳೆ ಸಸಿ, ಗೊಬ್ಬರ, ನಾಮಫಲಕಕ್ಕೆ ಸಾಮಗ್ರಿ ಮೊತ್ತು ₹78 ಸಾವಿರ ಬರುತ್ತದೆ. ಬಾಳೆ ದರ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾರೆ.

ಬಾಳೆ ಗೋಣಿ ಕೈಯಲ್ಲಿ ಹಿಡಿದುಕೊಂಡು ತೊರಿಸುತ್ತಿರುವ ರೈತ ಮಳ್ಳಪ್ಪ ಗವಿಯಪ್ಪ ಮಠದ.
ಬಾಳೆ ಗೋಣಿ ಕೈಯಲ್ಲಿ ಹಿಡಿದುಕೊಂಡು ತೊರಿಸುತ್ತಿರುವ ರೈತ ಮಳ್ಳಪ್ಪ ಗವಿಯಪ್ಪ ಮಠದ.

ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಅಗತ್ಯ ಕ್ರಮ ತಗೆದುಕೊಳ್ಳುತ್ತೇನೆ. 2023-24ನೇ ಸಾಲಿನಲ್ಲಿ ಮುಂಡರಗಿ ತಾಲ್ಲೂಕಿನಲ್ಲಿ ಮುಂಗಾರಿ ಹಂಗಾಮ 257.11 ಹೆಕ್ಟೇರ್‌ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ

–ಮಹ್ಮದ್‌ ರಫೀ ಎಂ.ತಾಂಬೋಟಿ ತಾಲ್ಲೂಕು ತೋಟಗಾರಿಕೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT