ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು ಪಾರ್ಕ್‌; ಅವಘಡಗಳಿಗೆ ಆಹ್ವಾನ

ರೋಗಕಾರಕ ಕೀಟಗಳ ಆವಾಸ, ಬಲಿಗೆ ಕಾದಿರುವ ತೆರೆದ ಬಾವಿ, ಬೆಂಕಿ ಭೀತಿಯಲ್ಲಿ ಒಣಎಲೆ ರಾಶಿ
ಎಂ. ಪಿ. ಹರೀಶ್
Published 28 ಏಪ್ರಿಲ್ 2024, 5:39 IST
Last Updated 28 ಏಪ್ರಿಲ್ 2024, 5:39 IST
ಅಕ್ಷರ ಗಾತ್ರ

ಆಲೂರು: ನೀರಿಲ್ಲದೆ ಒಣಗಿದ ಗಿಡಮರಗಳು, ನೆರಳಿಲ್ಲದೆ ಬಿಸಿಲಿಗೆ ಕಾದ ಹೆಂಚಿನಂತಿರುವ ಸಿಮೆಂಟ್ ಬೆಂಚ್‍ಗಳು, ಹಸಿರು ಕಾಣದ ನೆಲ, ಕುಡಿಯುವ ನೀರಿಲ್ಲದೆ, ಬೆಳಕಿಲ್ಲದೆ, ನಿಷ್ಪ್ರಯೋಜಕವಾಗಿರುವ ಪಾರ್ಕ್‍ಗೆ ಮುಖಮಾಡದ ಜನಸಾಮಾನ್ಯರು.

ಆಲೂರು ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ 300 ಮೀಟರ್ ದೂರದಲ್ಲಿ (ಹಳೆ ಕೋರ್ಟ್ ಸರ್ಕಲ್ ಬಳಿ) ಇರುವ ಸಾರ್ವಜನಿಕ ಪಾರ್ಕ್ ಸಾರ್ವಜನಿಕರ ಉಪಯೋಗಕ್ಕೆ ಬಾರದೆ, ಅನೈರ್ಮಲ್ಯದಿಂದ, ರೋಗ ರುಜಿನಗಳ ಆಶ್ರಯ ತಾಣವಾಗಿದೆ. ಪಾರ್ಕಿಗೆ ಬರುವ ಜನರಿಗೆ ರೋಗ ಹರಡುವ ಆವಾಸ ಸ್ಥಾನವಾಗಿದೆ.

ಪಟ್ಟಣದ ತಗ್ಗು ಪ್ರದೇಶದಲ್ಲಿ ಜಾಗದಲ್ಲಿ ಮಿಷನ್ ಕಟ್ಟೆ ಎಂಬುವ ಕಟ್ಟೆ ಇತ್ತು. ಇಲ್ಲಿ  ಗಣಪತಿ ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿಯನ್ನು ಬಿಡಲಾಗುತ್ತಿತ್ತು. ಕೆಲ ವರ್ಷಗಳ ಹಿಂದೆ ಎಚ್.ಡಿ ರೇವಣ್ಣ ಉಸ್ತುವಾರಿ ಸಚಿವರಾಗಿದ್ದಾಗ, ಎಚ್. ಕೆ ಕುಮಾರಸ್ವಾಮಿ ಶಾಸಕರಾಗಿದ್ದ ಕಾಲದಲ್ಲಿ ಕೊಳಚೆ ಕಟ್ಟೆಯಾಗಿದ್ದ ಈ ಪ್ರದೇಶದಲ್ಲಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಪಾರ್ಕ್ ನಿರ್ಮಾಣ ಮಾಡಲಾಯಿತು.

ಬಹುಜನರ ಬೇಡಿಕೆಯಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪಾರ್ಕ್ ಆವರಣದಲ್ಲಿ ಸ್ಥಾಪಿಸಲಾಯಿತು. ಪಾರ್ಕ್‍ನಲ್ಲಿ ಓಡಾಡುವವರ ಅನುಕೂಲಕ್ಕಾಗಿ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ  ಶೌಚಲಯವನ್ನು ನಿರ್ಮಿಸಲಾಯಿತು. ಇಷ್ಟೆಲ್ಲಾ ಜಾಗ ಕಳೆದರೆ ಪಾರ್ಕ್‍ಗೆ ಉಳಿಯುವುದು ಕೇವಲ 20 ಗುಂಟೆ ಜಾಗ. ಅದಕ್ಕೆ 10 ಬೆಂಚ್, 2 ಅಡಿ ರಸ್ತೆ, 20 ಗಿಡಗಳನ್ನು ನೆಟ್ಟು ಲೋಕಾರ್ಪಣೆ ಮಾಡಿದರು.

ಈ ಪಾರ್ಕಿಗೆ ಶುದ್ಧ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಲು ಪ್ರತಿನಿತ್ಯ ಬರುವ ಜನರನ್ನು ಬಿಟ್ಟರೆ ಮತ್ಯಾರು ಇಲ್ಲಿ ಸುಳಿಯುವುದಿಲ್ಲ. ಪಾರ್ಕ್‌ ಸಂಜೆ ವೇಳೆಗೆ ಕುಡುಕರು ಬೀಡು ಬೀಡುವ ಪಾಳು ಜಾಗವಾಗಿದೆ. ಉದ್ಘಾಟನೆ ಬಳಿಕ ಶೌಚಾಲಯಕ್ಕೆ ಹಾಕಲಾದ ಬೀಗವನ್ನು ಇಲ್ಲಿಯವರೆಗೂ ತೆಗೆದಿಲ್ಲ.

ಕಲ್ಲು ಬೆಂಚ್, ಪಾರ್ಕ್ ತಂತಿ ಜಾಲರಿಗೆ ಹೊಡೆದಿದ್ದ ಬಣ್ಣ ಮಾಸಿ ಹೋಗಿ, ತುಕ್ಕು ಹಿಡಿಯುವ ಹಂತ ತಲುಪಿವೆ. ಗಿಡಮರಗಳಿಗೆ ನೀರು ಪೂರೈಕೆ ಮಾಡುತ್ತಿದ್ದ ಕೊಳವೆ ಬಾವಿ ಮೋಟಾರ್‌ ಕೆಟ್ಟು ನಿಂತು ಹೋಗಿದೆ. ಪಾರ್ಕ್ ಮಧ್ಯದಲ್ಲೇ ಒಂದು ಕಲ್ಲು ಬಾವಿಯಿದೆ. ಈ ಬಾವಿಯಲ್ಲಿ ಎಳನೀರು ಬುರುಡೆಗಳು, ಖಾಲಿ ಪ್ಲಾಸ್ಟಿಕ್ ಬಾಟಲ್‌ಗಳು, ಮದ್ಯದ ಬಾಟಲು ತೇಲುತ್ತಿರುತ್ತವೆ. ಕೊಳೆತು ನಾರುತ್ತಿರುವ ನೀರಿನಲ್ಲಿ ಸೊಳ್ಳೆಗಳುಬೆಳೆದು ಪಾರ್ಕ್‌ಗೆ ಸಾರ್ವಜನಿಕು ಬಂದರೆ ರಕ್ತ ಹೀರಿ, ಮಾರಕ ರೋಗ ಹರಡುತ್ತಿವೆ.

ಕಲ್ಲು ಬಾವಿಗೆ ಹಾಕಿದ್ದ ಕಬ್ಬಿಣದ ಪಂಜರ ತೆರೆದುಕೊಂಡಿದ್ದು, ಮಕ್ಕಳೇನಾದರೂ ಬಿದ್ದರೆಜವಾಬ್ದಾರಿಯನ್ನು ಪಟ್ಟಣ ಪಂಚಾಯಿತಿ ಹೊರಬೇಕಾಗುತ್ತದೆ. ಪಟ್ಟಣ ನಿವಾಸಿಗಳ ಮನೆಗೆ ಬೇಸಿಗೆ ರಜೆ ಕಳೆಯಲು ಬರುವ ನೆಂಟರಿಷ್ಟರ ಮಕ್ಕಳು  ಆಟ ಆಡಲು ಪಾರ್ಕ್ ಹುಡುಕಿಕೊಂಡು ಬಂದರೆ ಯಾವುದೇ ರೀತಿಯ ಜಾರು ಬಂಡಿ, ಜೋಕಾಲಿ, ಏರಿಳಿತ ತಕ್ಕಡಿ, ಪಂಜರ ಮುಂತಾದವುಗಳಲ್ಲಿ ಯಾವುದೆ ಒಂದು ಆಟಿಕೆಗಳು ಇಲ್ಲದಿರುವುದು ಪುಟಾಣಿಗಳಿಗೆ ಬೇಸರವನ್ನು ತಂದಿದೆ.

ಆಲೂರು ಉದ್ಯಾನವನ ಆವರಣ ತರಗೆಲೆಗಳ, ಕೊಳೆತ ಕಾಯಿಗಳ, ಪ್ಲಾಸ್ಟಿಕ್ ಪ್ಯಾಕ್ , ಕಾಗದಕೊಳೆತು ನಿಂತ ದುರ್ಗಂಧ ಹರಡುವ ಪಾರ್ಕಾಗಿದೆ. ಗಿಡಮರ ಹಾಗೂ ನೆಲ ಹಾಸುಗೆ ಹುಲ್ಲುಗಳಿಗೆ ನೀರಿ ಹಾಯಿಸಲು ಅಳವಡಿಸಿರುವ ಸ್ಪ್ರಿಂಕ್ಲರ್ ಹಾಗೂ ಜೆಟ್, ಕೊಳವೆ ಬಾವಿ ಕೆಟ್ಟು ನಿಂತಿವೆ. ಒಣಗಿ ನಿಂತ ಗಿಡ ಮರ, ಉದುರಿದ ಎಲೆಗಳ ರಾಶಿಗೆ ಆಕಸ್ಮಿಕ ಬೆಂಕಿ ಸೋಕಿದರೆ ಪಾರ್ಕ್ ಸುಟ್ಟು ಕರಕಲಾಗುತ್ತದೆ.

ಪಾರ್ಕಿನಲ್ಲಿ ನೆಟ್ಟಿದ್ದ ಗಿಡಗಳು ಒಣಗಿರುವುದು.
ಪಾರ್ಕಿನಲ್ಲಿ ನೆಟ್ಟಿದ್ದ ಗಿಡಗಳು ಒಣಗಿರುವುದು.
ಪಾರ್ಕಿನೊಳಗೆ ಸಂಗ್ರಹವಾಗಿರುವ ಮರದ ಎಲೆಗಳ ತರಗು. 
ಪಾರ್ಕಿನೊಳಗೆ ಸಂಗ್ರಹವಾಗಿರುವ ಮರದ ಎಲೆಗಳ ತರಗು. 

‘ಅಭಿವೃದ್ಧಿಗೆ ಗಮನಹರಿಸಿ’

ಪಾರ್ಕ್‍ನಲ್ಲಿ ವೃದ್ಧರು ಯುವಜನರು ಮಕ್ಕಳಿಗೆ ಅವಶ್ಯಕವಾಗಿ ಬೇಕಾಗಿರುವ ಸವಲತ್ತುಗಳು ಸುರಕ್ಷಿತವಾಗಿ ಓಡಾಡಲು ವ್ಯವಸ್ಥೆಯನ್ನು ಪಟ್ಟಣ ಪಂಚಾಯಿತಿ ಕೂಡಲೇ ಒದಗಿಸಬೇಕು. ನಿರ್ವಹಣೆ ಆಯಾ ಇಲಾಖೆ ಕರ್ತವ್ಯ. ಕೋಟ್ಯಂತರ ರೂಪಾಯಿ ಇಲ್ಲಿ  ನಿಷ್ಪ್ರಯೋಜಕವಾಗುತ್ತದೆ. ಇಲ್ಲಿ ನೆಟ್ಟಿದ್ದ ಮರಗಳನ್ನು ಸರಿಯಾಗಿ ನಿರ್ವಹಣೆ ಆಗಿದ್ದರೆ ಅವುಗಳು ಇಂದು ನೆರಳು ನೀಡುತ್ತಿದ್ದವು. ಪಟ್ಟಣ  ಪಟ್ಟಣ ಪಂಚಾಯಿತಿ ಕೂಡಲೇ ಪಾರ್ಕ್ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಕಟ್ಟಡ ಕಾರ್ಮಿಕರ ಸಂಘದ ತಾಲ್ಲೂಕು  ಘಟಕದ ಅಧ್ಯಕ್ಷ  ಟಿ. ಆರ್. ಆನಂದ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT