ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: 26 ಹಾಸ್ಟೆಲ್‌ಗಳಿಗೆ 14 ವಾರ್ಡನ್!

ಹೆಚ್ಚಿದ ಜವಾಬ್ದಾರಿ; ಗುಣಮಟ್ಟದ ಆಹಾರ ವಿತರಣೆಯಲ್ಲೂ ಸಮಸ್ಯೆ
Published 6 ಆಗಸ್ಟ್ 2023, 5:58 IST
Last Updated 6 ಆಗಸ್ಟ್ 2023, 5:58 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ 26 ವಸತಿ ನಿಲಯಗಳಿದ್ದು, ಕೇವಲ 14 ವಾರ್ಡನ್‌ಗಳು ಕೆಲಸ ನಿರ್ವಹಿಸುತ್ತಿದ್ದಾರೆ.

ತಾಲ್ಲೂಕಿನ ವಿವಿಧೆಡೆ ಒಬ್ಬೊಬ್ಬ ವಾರ್ಡನ್‌ಗೆ ಒಂದಕ್ಕಿಂತ ಹೆಚ್ಚು ವಸತಿ ನಿಲಯಗಳ ಜವಾಬ್ದಾರಿ ನೀಡಿರುವುದರಿಂದ ವಸತಿ ನಿಲಯಗಳ ಜವಾಬ್ದಾರಿಯನ್ನು ನಿಲಯ ಪಾಲಕರಿಗೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿಯೇ ಹೆಚ್ಚು ಸಮಸ್ಯೆಗಳಿರುವುದು ‘ಪ್ರಜಾವಾಣಿ’ ಭೇಟಿ ನೀಡಿದಾಗ ಗಮನಕ್ಕೆ ಬಂದಿದೆ. ಕೆಲವೆಡೆ ವಾರ್ಡನ್‌ಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಇದರ ಜೊತೆಗೆ ಕಳೆದೆರಡು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳನ್ನು ವಸತಿ ನಿಲಯಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವುದರಿಂದ ತೊಂದರೆಯುಂಟಾಗಿತ್ತು. ಹೀಗಾಗಿ ಬಾಡಿಗೆ ಕಟ್ಟಡ ಪಡೆದು, ವಸತಿ ನಿಲಯ ನಡೆಸಲಾಗಿದೆ’ ಎಂದು ವಾರ್ಡನ್‌ ಒಬ್ಬರು ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ 11 ವಸತಿ ನಿಲಯಗಳಿದ್ದು, ಅದರಲ್ಲಿ 9 ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳಿವೆ. 2 ಮೆಟ್ರಿಕ್ ನಂತರದ ವಸತಿ ವಸತಿ ನಿಲಯಗಳಿವೆ. ಸುಮಾರು 11 ವಸತಿ ನಿಲಯಗಳಲ್ಲಿ ನಾಲ್ಕೈದು ವಸತಿ ನಿಲಯಗಳು ಹೊಸದಾಗಿದ್ದರೆ, ಬಹುತೇಕವು ಹಳೆಯ ಕಟ್ಟಡಗಳಿಂದ ಕೂಡಿವೆ. ಒಟ್ಟು 8 ವಾರ್ಡನ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಹೋಳ್ಕರ್ ತಿಳಿಸಿದರು.

ಹೆಚ್ಚಿದ ವಿದ್ಯಾರ್ಥಿಗಳ ಸಂಖ್ಯೆ: ಕಳೆದೆರಡು ವರ್ಷಗಳಿಂದ ಸರ್ಕಾರ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ವಸತಿ ನಿಲಯ ಸೌಲಭ್ಯದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಅರ್ಜಿ ಹಾಕಿದ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರಿಂದ ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯ ನಡೆಸಲಾಗಿದೆ ಎಂದು ವಾರ್ಡನ್ ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 11 ವಸತಿ ನಿಲಯಗಳಿದ್ದು, 4 ಜನ ವಾರ್ಡನ್ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಮೆಟ್ರಿಕ್ ಪೂರ್ವ ಬಾಲಕರ 4, ಬಾಲಕಿಯರ 1 ಮತ್ತು ಮೆಟ್ರಿಕ್ ನಂತರದ ವಸತಿ ನಿಲಯ 2 ಇದ್ದು, ವೃತ್ತಿಪರ ವಸತಿ ನಿಲಯ 1 ಇನ್ಫೋಸಿಸ್ ಬಡಾವಣೆಯಲ್ಲಿದೆ. ಜೊತೆಗೆ ಸೇಡಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಕ್ಕದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ 1 ನಿಲಯ, ವಿಶ್ವನರ ಬಡಾವಣೆಯಲ್ಲಿ 2 ವಸತಿ ನಿಲಯಗಳಿವೆ.

‘ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರಿಂದ ಗುಣಮಟ್ಟದ ಆಹಾರ ನೀಡಿಕೆಯಲ್ಲಿ ಸಮಸ್ಯೆಯಾಗುತ್ತಿದೆ. ಮೆನು ಪ್ರಕಾರ ನಮಗೆ ಅಡುಗೆ ಮಾಡುತ್ತಿಲ್ಲ, ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂದು ಈ ಹಿಂದೆ ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಅಲ್ಪಸಂಖ್ಯಾತರ ಇಲಾಖೆ: ಅಲ್ಪಸಂಖ್ಯಾತರ ಇಲಾಖೆಯಲ್ಲಿ ಒಟ್ಟು 4 ವಸತಿ ನಿಲಯಗಳಿದ್ದು ನಾಲ್ಕು ವಸತಿ ನಿಲಯಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. ತಲಾ ಎರಡು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಿವೆ. ಇಬ್ಬರು ವಾರ್ಡನ್‌ಗಳಿದ್ದಾರೆ.

ಇದುವರೆಗೂ ನಮ್ಮಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ. ಸ್ವಂತ ಕಟ್ಟಡದಲ್ಲಿ ವಸತಿ ನಿಲಯಗಳು ನಡೆಯುತ್ತಿವೆ ಎಂದು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ವಿಜಯಲಕ್ಮೀ ‘ಪ್ರಜಾವಾಣಿ’ಗೆ ತಿಳಿಸಿದರು.  

ಸೇಡಂನಲ್ಲಿರುವ 2 ವಸತಿ ನಿಲಯಗಳು ಹಳೆಯದಾಗಿದ್ದು ಅವುಗಳ ನವೀಕರಣ ಅಥವಾ ಹೊಸ ಕಟ್ಟಡ ನಿರ್ಮಾಣ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ
ವಿಜಯಲಕ್ಷ್ಮಿ ಹೋಳ್ಕರ್ ಸಹಾಯಕ ನಿರ್ದೇಶಕಿ ಸಮಾಜ ಕಲ್ಯಾಣ ಇಲಾಖೆ

ಬಾಡಿಗೆ ಕಟ್ಟಡದಲ್ಲಿ ತಾಲ್ಲೂಕು ಕಚೇರಿಗಳು! ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅನೇಕ ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಉಭಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ 2 ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಇದುವರೆಗೂ ಖಾಯಂ ಕಟ್ಟಡವಿಲ್ಲ. ಈಚೆಗೆ ಬಿಸಿಎಂ ಇಲಾಖೆ ವಿಶ್ವನಗರದಲ್ಲಿರುವ ಹೊಸ ವಸತಿ ನಿಲಯಕ್ಕೆ 2 ವಸತಿ ನಿಲಯದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದೆ ಎಂದು ವಸತಿ ನಿಲಯದ ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT