ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಮಾಜಿ ಅಧ್ಯಕ್ಷೆ ಮನೆಯಲ್ಲಿ ಅಂಗವಿಲಕರ ಹೊಲಿಗೆ ಯಂತ್ರ: ಫಲಾನುಭವಿಗಳ ಗೋಳು

Last Updated 11 ಡಿಸೆಂಬರ್ 2020, 14:20 IST
ಅಕ್ಷರ ಗಾತ್ರ

ಚಿತ್ತಾಪುರ: ಅಂಗವಿಕಲರಿಗಾಗಿ ಶೇ 5ರ ಅನುದಾನದಡಿ ಖರೀದಿಸಿದ ಹೊಲಿಗೆ ಯಂತ್ರಗಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಮನೆಯಲ್ಲಿ ಗೆದ್ದಲು ತಿನ್ನುತ್ತ ಬಿದ್ದಿವೆ. ಇತ್ತ, ಸ್ವಯಂ ಉದ್ಯೋಗಕ್ಕೆ ಹಂಬಲಿಸಿ ಅರ್ಜಿ ಸಲ್ಲಿಸಿದ ಅಂಗವಿಕಲರು ಬಕಪಕ್ಷಿಯಂತೆ ಕಾಯುತ್ತ ಕುಳಿತುಕೊಳ್ಳುವಂತಾಗಿದೆ.

ತಾಲ್ಲೂಕಿನ ಭಾಗೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 30 ಅಂಗವಿಕಲ ಫಲಾನುಭವಿಗಳು ತಮ್ಮ ಸೌಲಭ್ಯದಿಂದ ವಂಚಿತರಾಗಿದ್ದಾರೆ. 14ನೇ ಹಣಕಾಸು ಯೋಜನೆಯ ಅನುದಾನದಲ್ಲಿ ನಾಲ್ಕು ತಿಂಗಳ ಹಿಂದೆ ಈ ಹೊಲಿಗೆ ಯಂತ್ರಗಳನ್ನು ಖರೀದಿಸಲಾಗಿದೆ. ಅವುಗಳನ್ನು ಅರ್ಹ ಅಂಗವಿಕಲರಿಗೆ ವಿತರಣೆ ಮಾಡದೇ, ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆಯ ಮನೆಯಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಸ್ವತಃ ಅಂಗವಿಕಲರೇ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಪಿಡಿಒ ಆಗಿದ್ದ ಬೀರಪ್ಪ ಅವರು ಹೊಲಿಗೆ ಯಂತ್ರಗಳನ್ನು ಖರೀದಿ ಮಾಡಿದ್ದಾರೆ. ಅವರು ವರ್ಗಾವಣೆಯಾಗಿ ಇವಣಿ ಪಂಚಾಯಿತಿ ಪಿಡಿಒ ಆಗಿ ಹೋಗಿದ್ದಾರೆ. ಹೊಸದಾಗಿ ಓಂಕಾರ ಅವರು ಭಾಗೋಡಿಗೆ ಪಿಡಿಒ ಆಗಿ ಬಂದಿದ್ದಾರೆ. ನಾಲ್ಕು ತಿಂಗಳು ಕಳೆದರೂ ಅಂಗವಿಕಲರಿಗೆ ಹೊಲಿಗೆ ಯಂತ್ರ ವಿತರಣೆ ಮಾಡುತ್ತಿಲ್ಲ ಎಂದು ಬಸವರಾಜ ಕುಸನೂರ, ಶರಣಪ್ಪ ದುಗನೂರ, ಭಗವಂತರಾವ ನಾಟಿಕಾರ, ದತ್ತಾತ್ರೆಯ ಏರಿ, ಸದಾನಂದ ಚೆನ್ನಶೆಟ್ಟಿ, ಜಗದೇವಪ್ಪ ಬಾಸ್ಬಾ, ಅಸ್ಲಂ ಖುರೇಷಿ, ಇಮಾಮ್ ಪಟೇಲ್, ಮಲ್ಲಿಕಾರ್ಜುನ ಏರಿ ಅವರು ಆರೋಪಿಸಿದ್ದಾರೆ.

‘ಅಂಗವಿಕಲರಿಗಾಗಿ ಖರೀದಿ ಮಾಡಿದ ಹೊಲಿಗೆ ಯಂತ್ರಗಳನ್ನು ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ದಾಸ್ತಾನು ಮಾಡಬೇಕಿತ್ತು. ಅದನ್ನು ಬಿಟ್ಟು ಹಿಂದಿನ ಪಿಡಿಒ ಅವರು ಮಾಜಿ ಅಧ್ಯಕ್ಷೆಯ ಮನೆಯಲ್ಲಿ ದಾಸ್ತಾನು ಮಾಡಿದ್ದಾರೆ. ಇದರಲ್ಲಿ ಹಣ ಲಪಟಾಯಿಸುವ ಸಂಚು ನಡೆದಿದೆ’ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಮುಖಂಡ ಮಲ್ಲಿಕಾರ್ಜುನ ಎಸ್. ಏರಿ, ಗ್ರಾಮದ ಮುಖಂಡ ಬಸವರಾಜ ದಳಪತಿ, ನಾಗಣ್ಣ ಕುಸನೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿ ಆಡಳಿತ ನಿರ್ವಹಣೆಗೆ ಆಡಳಿತಾಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಜಕುಮಾರ ರಾಠೋಡ ಅವರನ್ನು ನೇಮಕ ಮಾಡಲಾಗಿದೆ. ಹೊಲಿಗೆ ಯಂತ್ರ ಖರೀದಿ ಮತ್ತು ವಿತರಣೆ ಕುರಿತು ಅವರು ಕೂಡ ಕಣ್ಣುಮುಚ್ಚಿ ಕುಳಿತ್ತಿದ್ದಾರೆ. ಅಂಗವಿಕಲರಿಗೆ ಅನ್ಯಾಯ ಆಗುತ್ತಿದ್ದರೂ ಗಮನ ಹರಿಸುತ್ತಿಲ್ಲ ಎಂಬುದು ಫಲಾನುಭವಿಗಳ ಗೋಳು.‌

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ತಿಮ್ಮವ್ವ ಚೌಧರಿ ಅವರ ಮಗ ರಾಜು ಚೌಧರಿ, ‘ಅಂಗವಿಕಲರಿಗೆ ವಿತರಣೆ ಮಾಡಲೆಂದು ಖರೀದಿ ಮಾಡಿರುವ ಹೊಲಿಗೆ ಯಂತ್ರ ನಮ್ಮ ಮನೆಯಲ್ಲಿ ಇಡಲಾಗಿದೆ. ಭಾಗೋಡಿ, ಮುಡಬೂಳ, ಕದ್ದರಗಿ, ಜೀವಣಗಿ ಗ್ರಾಮದ ಪಂಚಾಯಿತಿ ಸದಸ್ಯರು ಆಗ ಅರ್ಹ ಅಂಗವಿಕಲ ಫಲಾನುಭವಿಗಳ ಪಟ್ಟಿ ಸಲ್ಲಿಸಲಿಲ್ಲ. ಹೀಗಾಗಿ ವಿತರಣೆ ಮಾಡಿಲ್ಲ. ಈಗ ವಿತರಣೆ ಮಾಡಲು ಪಂಚಾಯಿತಿಗೆ ಒಪ್ಪಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT