ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುತ್ತು ಅನ್ನಕ್ಕೆ ಆಸರೆಯಾದ ಚಿಂದಿ

ಮಹಾನಗರದ ಕಸಕ್ಕೆ ಮುಕ್ತಿ ನೀಡುವರು ಇವರು, ತ್ಯಾಜ್ಯ ವಸ್ತುಗಳಿಗೆ ಭಾರಿ ಬೇಡಿಕೆ
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ ಚಿಂದಿ ಆಯುವವರ ಸಂಖ್ಯೆ ಹೆಚ್ಚುತ್ತಲಿದೆ. ಜತೆಗೆ ಚಿಂದಿ ವಸ್ತುಗಳಿಗೆ ಇತ್ತೀಚೆಗೆ ಉತ್ತಮ ಬೇಡಿಕೆ ಸೃಷ್ಟಿಯಾಗಿದ್ದು, ಕೈತುಂಬಾ ಕಾಸು ಎಣಿಸುತ್ತಿದ್ದಾರೆ.

ಚಿಂದಿ ಆಯುವವರು ಎಂದರೆ ಮೂಗು ಮುರಿಯವ, ಅಸಹ್ಯ ಪಡುವ ಜನರೇ ಹೆಚ್ಚು. ಸಮಾಜ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದೆ. ಆದರೆ, ‘ಕಸದಿಂದ ರಸ’ ಎನ್ನುವ ಗಾದೆ ಮಾತನ್ನು ಚಿಂದಿ ಆಯುವವರು ಅರ್ಥಮಾಡಿ ಕೊಂಡು ಜೀವನ ಮುನ್ನಡೆಸುತ್ತಿದ್ದಾರೆ.

ಕಲಬುರ್ಗಿ ನಗರ ಬೃಹತ್‌ ಪ್ರಮಾಣ ದಲ್ಲಿ ಬೆಳೆಯುತ್ತಿದೆ. ಸೌಲಭ್ಯಗಳು ಹೆಚ್ಚುತ್ತಿವೆ. ಜತೆಗೆ ತ್ಯಾಜ್ಯ ಪ್ರಮಾಣವೂ ವೃದ್ಧಿಸಿದೆ. ಬಹುತೇಕ ಬಡಾವಣೆಗಳಲ್ಲಿ ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಈ ತ್ಯಾಜ್ಯ ಚಿಂದಿ ಆಯುವ ಕುಟುಂಬ ತುತ್ತು ಅನ್ನಕ್ಕೆ ನೆರವಾಗುತ್ತಿದೆ.

ಯಾವುದು ಚಿಂದಿ: ಜನಕ್ಕೆ ಬೇಡವಾದ ಎಲ್ಲ ವಸ್ತುಗಳು ಚಿಂದಿಯೇ ಆಗಿವೆ. ಕಸ ಎಂದು ಎಸೆಯುವ ವಸ್ತುಗಳು ರಸವಾಗಿ ಬದಲಾಗುತ್ತಿವೆ. ರದ್ದಿ ಹಾಳೆ, ಬಾಟಲ್, ಸೀಸೆ, ಪ್ಲಾಸ್ಟಿಕ್ ಡಬ್ಬ, ಕಬ್ಬಿಣದ ವಸ್ತುಗಳು, ಹಳೆಯ–ಹರಿದ ಬಟ್ಟೆ, ನೀರಿನ ಬಾಟಲ್ ಗೃಹಬಳಕೆ ಸಾಧನ, ಎಲೆಕ್ಟ್ರಾನಿಕ್‌ ವಸ್ತುಗಳು...ಇತ್ಯಾದಿಗಳು ಈ ಪಟ್ಟಿಯಲ್ಲಿವೆ. ಇವುಗಳನ್ನು ಆಯ್ದು
ತಮ್ಮ ಉಪಯೋಗಕ್ಕೆ ಬರುವ ವಸ್ತುಗಳನ್ನು ವಿಂಗಡಿಸಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ.

ಬದಲಾದ ಜೀವನಶೈಲಿ: ಚಿಂದಿ ಆಯುವ ವರ ಜೀವನ ಮಾತ್ರ ಚಿಂದಿಯಾಗಿಲ್ಲ. ಅವರ ಜೀವನ ಶೈಲಿಯೂ ಶಿಸ್ತುಬದ್ಧ ವಾಗಿದೆ. ನಿರುಪಯುಕ್ತ ವಸ್ತುಗಳಲ್ಲಿ ಉಪಯುಕ್ತ ವಸ್ತು ಹುಡುಕುವಲ್ಲಿ ಇವರ ಜಾಣತನ ಅಡಗಿದೆ.

ನಗರದ ಗಲ್ಲಿಗಳಲ್ಲಿ ಹಗಲು, ರಾತ್ರಿ ತಿರುಗುವ ಇವರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ‘ಚಿಂದಿ ಆಯುವರಿಗೆ ಯಾವುದೇ ಜಾತಿ ಇಲ್ಲ. ಯಾರು ಬೇಕಾದರೂ ಈ ಕೆಲಸ ಮಾಡಬಹುದು. ಆದಯವೂ ಹೆಚ್ಚಿದೆ’ ಎನ್ನುತ್ತಾರೆ ಆದಪ್ಪ.

ಗುಜರಿ ಅಂಗಡಿಗಳ ಪೈಪೋಟಿ: ನಗರದಲ್ಲಿ ತ್ಯಾಜ್ಯ ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ತಕ್ಕಂತೆ ಗುಜರಿ ಅಂಗಡಿಗಳ ಸಂಖ್ಯೆಯೂ ಹೆಚ್ಚುತ್ತಿವೆ. ಹಳೆ ಬಜಾರ್‌, ಸೂಪರ್ ಮಾರ್ಕೆಟ್, ಶಹಬಜಾರ್‌, ನಗರ ಬಸ್‌ ನಿಲ್ದಾಣ ಮುಂತಾದೆಡೆ ಚಿಂದಿ ಸಂಗ್ರಹಿಸುವ ಗುಜರಿ ಅಂಗಡಿಗಳು ಹೆಚ್ಚಾಗುತ್ತಿವೆ. ಇದೊಂದು ಬೃಹತ್‌ ಉದ್ಯಮವಾಗಿ ಬೆಳೆಯುತ್ತಿದೆ. ಗುಜರಿ ಅಂಗಡಿಗಳು ಖರೀದಿಸಿದ ಚಿಂದಿ ಮರು ಬಳಕೆಗೆ ಕಾರ್ಖಾನೆಗಳಿಗೆ ಕಳುಹಿಸುತ್ತಿವೆ

ಪ್ಲಾಸ್ಟಿಕ್‌ ಮರುಬಳಕೆಗೆ ಈಗ ಸಾಧ್ಯವಿದೆ. ಹಳೆ ಬಟ್ಟೆಗಳಿಂದ ನಾನಾ ಉಪಯೋಗವಿದೆ. ಪೇಪರ್‌, ಕಬ್ಬಿಣದ ವಸ್ತುಗಳು ಬಂಗಾರವಿದ್ದಂತೆ’ ಎನ್ನುತ್ತಾರೆ ಗುಜರಿ ಅಂಗಡಿ ಮಾಲಿಕ ಶಂಶುದ್ದೀನ್.

‘ಒಂದು ಗುಜರಿ ಅಂಗಡಿಯಲ್ಲಿ ದಿನಕ್ಕೆ 2–3 ಕ್ವಿಂಟಲ್ ವಸ್ತುಗಳು ಸಂಗ್ರಹ ವಾಗುತ್ತವೆ. ಅವುಗಳನ್ನು ಒಂದೆಡೆ ಕಲೆಹಾಕುತ್ತೇವೆ. ತಿಂಗಳಿಗೆ ನಾಲ್ಕಾರು ಬಾರಿ ಟನ್‌ ಲೆಕ್ಕದಲ್ಲಿ ಹೈದರಾಬಾದ್‌, ಮಹಾರಾಷ್ಟ್ರದ ಕಾರ್ಖಾನೆಗಳಿಗೆ
ಕಳುಹಿಸಿ ಕೊಡುತ್ತೇವೆ. ಅಂಗಡಿಯ ಕೆಲಸಗಾರ  ಅನಿಲ್.

ಚಿಂದಿ ಆಯ್ದು ನಗರ ನೈರ್ಮಲ್ಯ ಕಾಪಾಡುವ ಈ ಜನರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳಿಲ್ಲ. ಕನಿಷ್ಠ ಸ್ವಂತ ಸೂರು ಇಲ್ಲದೆ ಇವರು ನಗರದಲ್ಲಿ ಬದುಕುತ್ತಿದ್ದಾರೆ.

ಕಸಕ್ಕೂ ‘ಬಂಗಾರ’ದ ಬೆಲೆ
ಚಿಂದಿ ಆಯುವವರು ಸಂಗ್ರಹಿಸಿದ ವಸ್ತುಗಳಿಗೆ ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಚೌಕಾಶಿ ಮಾಡಿದರೂ ಉತ್ತಮ ಹಣ ಗಳಿಸಬಹುದಾಗಿದೆ. 1 ಕೆ.ಜಿ ಪ್ಲಾಸ್ಟಿಕ್ ಡಬ್ಬಗಳಿಗೆ ₨15, ಹಳೆ ಪೆಪರ್‌ಗೆ ₨10, ಕಬ್ಬಿಣಕ್ಕೆ ₨20 ನಿಗದಿಯಾಗಿದೆ.

ಇತರ ವಸ್ತುಗಳಿಗೂ ನಿಗದಿತ ಬೆಲೆ ಸಿಗುತ್ತಿದೆ. ‘ದಿನಕ್ಕೆ 10ರಿಂದ 15 ಕೆ.ಜಿ ವರೆಗೆ ವಿವಿಧ ವಸ್ತುಗಳನ್ನು ಸಂಗ್ರಹಿಸುತ್ತೇವೆ. ಇದರಿಂದ ಬರುವ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತದೆ’ ಎನ್ನುತ್ತಾರೆ ಗಂಗಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT