ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುದಿಗಾಲ ಮೇಲೇರಿಸಿದ ರೋಚಕ ಪಂದ್ಯಗಳು

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ
Published 1 ಮೇ 2024, 5:33 IST
Last Updated 1 ಮೇ 2024, 5:33 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ರೋಚಕ ಘಟ್ಟದ ಪಂದ್ಯಗಳು ನೋಡುಗರಿಗೆ ಭರಪೂರ ಮನರಂಜನೆ ನೀಡಿದವು. ಅದರಲ್ಲೂ ಸೂಪರ್‌ ಓವರ್‌ನ ಪಂದ್ಯವೊಂದು ನಡೆದಿದ್ದು, ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

ಕೊಣಿಯಂಡ ಮತ್ತು ಮಚ್ಚಾರಂಡ ನಡುವಿನ ಇಂತಹದ್ದೊಂದು ಅಪರೂಪದ ಗಳಿಗೆಗೆ ಸಾಕ್ಷಿಯಾಯಿತು. ಎರಡೂ ತಂಡಗಳೂ ನಿಗದಿತ 8 ಓವರ್‌ಗಳಲ್ಲಿ 82 ರನ್‌ ಗಳಿಸಿ ಸಮಬಲ ಸಾಧಿಸಿದವು. ಆಗ ಗೆಲುವಿನ ನಿರ್ಧಾರಕ್ಕಾಗಿ ಅನಿವಾರ್ಯವಾಗಿ ಸೂಪರ್‌ ಓವರ್‌ನ ಮೊರೆ ಹೋಗಬೇಕಾಯಿತು. ಸೂಪರ್ ಓವರ್‌ನಲ್ಲಿ ನಿಗದಿತ 1 ಓವರ್‌ನಲ್ಲಿ ಕೊಣಿಯಂಡ 17 ರನ್‌ ಗಳಿಸಿದರೆ, ಮಚ್ಚಾರಂಡ ಕೇವಲ 6 ರನ್‌ ಗಳಿಸಿತು.  11 ರನ್‌ಗಳಿಂದ ಕೊಣಿಯಂಡ  ರೋಚಕ ಗೆಲುವು ಪಡೆಯಿತು.

ಮಲ್ಲoಡ v/s ಕಳ್ಳಿಚಂಡ

ಮಲ್ಲಂಡ ಮತ್ತು ಕಳ್ಳಿಚಂಡ ನಡುವಿನ ಪಂದ್ಯವೂ ರೋಚಕ ಹಣಾಹಣಿಗೆ ಕಾರಣವಾಯಿತು. ಮಲ್ಲಂಡ ತಂಡವು ಕಳ್ಳಿಚಂಡವನ್ನು 5 ರನ್‌ ಗಳಿಸಿ ಮಣಿಸಿತು. ಮಲ್ಲಂಡ ನೀಡಿದ 141 ರನ್‌ಗಳ ಗುರಿಯನ್ನು ಮುಟ್ಟುವುದಕ್ಕೆ ಇನ್ನು 5 ರನ್‌ಗಳಿರುವಾಗಲೇ ಕಳ್ಳಿಚಂಡ ಎಡವಿತು.

ಕರವಟ್ಟಿರ ತಂಡವು ತೀತಿರ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ತೀತಿರ ನೀಡಿದ 64 ರನ್‌ಗಳ ಗೆಲುವಿನ ಗುರಿಯನ್ನು ಇನ್ನೂ 7 ವಿಕೆಟ್‌ಗಳಿರುವಾಗಲೇ  ಕರವಟ್ಟಿರ ತಲುಪಿತು.

ಕಾಡ್ಯಮಾಡ ತಂಡಕ್ಕೆ ಬಲ್ಯಮಾಡ  ವಿರುದ್ಧ ಬರೋಬರಿ 10 ವಿಕೆಟ್‌ಗಳ ಅಮೋಘ ಜಯ ಒಲಿಯಿತು. ಬಲ್ಯಮಾಡ ನೀಡಿದ 51 ರನ್‌ಗಳ ಗುರಿಯನ್ನು ಕಾಡ್ಯಮಾಡ ಯಾವುದೇ ವಿಕೆಟ್ ಕಳೆದುಕೊಳ್ಳದೇ ತಲುಪಿದ್ದು ವಿಶೇಷ ಎನಿಸಿತು.

ಕಳಕಂಡ ತಂಡವು ಚಂಗುಲಂಡ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ಚಂಗುಲಂಡ ನೀಡಿದ 57 ರನ್‌ಗಳ ಗುರಿಯನ್ನು ಕಳಕಂಡ  ತಂಡವು 4 ವಿಕೆಟ್ ಕಳೆದುಕೊಂಡು ತಲುಪಿತು.

ತೆಕ್ಕಡ ತಂಡವು ವಾಕ್‌ಓವರ್ ಪಡೆಯಿತು.

ಮುಕ್ಕಾಟಿರ (ಕುಂಜಲಗೇರಿ) ತಂಡವು ತೀತರಮಾಡ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ತೀತರಮಾಡ ನೀಡಿದ 78 ರನ್‌ಗಳ ಗುರಿಯನ್ನು ಮುಕ್ಕಾಟಿರ 4 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು.

ಪುದಿಯತಂಡ ತಂಡಕ್ಕೆ ಪೊನ್ನಚಂಡ ವಿರುದ್ಧ 10 ರನ್‌ಗಳ ರೋಚಕ ಜಯ ಒಲಿಯಿತು. ಪುದಿಯತಂಡ ತಂಡ ನೀಡಿದ 79 ರನ್‌ಗಳ ಗುರಿಯನ್ನು ಪೊನ್ನಚಂಡ 69 ರನ್‌ಗಳನ್ನಷ್ಟೇ ಗಳಿಸಿ ಸೋಲು ಕಂಡಿತು.

ಕನ್ನಿಗಂಡ ತಂಡಕ್ಕೆ ಬೊಪ್ಪಂಡ ವಿರುದ್ಧ 58 ರನ್‌ಗಳ ಭರ್ಜರಿ ಜಯ ದಕ್ಕಿತು. ಕನ್ನಿಗಂಡ ನೀಡಿದ 115 ರನ್‌ಗಳ ಗುರಿಗೆ ಪ್ರತಿಯಾಗಿ ಬೊಪ್ಪಂಡ ಗಳಿಸಿದ್ದು 56 ರನ್‌ಗಳು ಮಾತ್ರ.

ಮೋಟನಾಳಿರ ತಂಡವು ಮಲ್ಲಂಗಡ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿತು. ಮಲ್ಲಂಗಡ ನೀಡಿದ 59 ರನ್‌ಗಳ ಗುರಿಯನ್ನು ಕೇವಲ 2 ವಿಕೆಟ್‌ ಕಳೆದುಕೊಂಡು ಮೋಟನಾಳಿರ 6.4 ಓವರ್‌ಗಳಲ್ಲಿಯೇ ತಲುಪಿದ್ದು ವಿಶೇಷ ಎನಿಸಿತು.

ಮಹಿಳಾ ವಿಭಾಗ: ಅಚ್ಚಪಂಡ ತಂಡವು ತೀತಿರ ತಂಡದ ವಿರುದ್ಧ 10 ರನ್‌ಗಳ ಭರ್ಜರಿ ಜಯ ಗಳಿಸಿತು. ತೀತಿರ ನೀಡಿದ 53 ಗೆಲುವಿನ ಗುರಿಯನ್ನು ಯಾವುದೇ ವಿಕೆಟ್ ಕಳೆದುಕೊಳ್ಳದೇ ಅಚ್ಚಪಂಡ ತಲುಪಿದ್ದು ವಿಶೇಷ ಎನಿಸಿತು. ಬಾಚಿನಾಡಂಡ ತಂಡಕ್ಕೂ ಕಾಡ್ಯಮಾಡ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಒಲಿಯಿತು. ಕಾಡ್ಯಮಾಡ ನೀಡಿದ 24 ರನ್‌ಗಳ ಗುರಿಯನ್ನು ಬಾಚಿನಾಡಂಡ ಯಾವುದೇ ವಿಕೆಟ್‌ ಕಳೆದುಕೊಳ್ಳದೇ ತಲುಪಿತು. ಕಳಕಂಡ ತಂಡವು ನಂದೇಟಿರ ವಿರುದ್ಧ 9 ವಿಕೆಟ್‌ಗಳ ಜಯ ಪಡೆಯಿತು. ನಂದೇಟಿರ ನೀಡಿದ 35 ರನ್‌ಗಳ ಗುರಿಯನ್ನು ಕೇವಲ 1 ವಿಕೆಟ್ ಕಳೆದುಕೊಂಡು ಕಳಕಂಡ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT