ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಪುನರ್ವಸತಿಗೆ 110 ಎಕರೆ ಜಾಗ; ಲೇಔಟ್‌ ನಿರ್ಮಾಣಕ್ಕೆ ₹5 ಕೋಟಿಗೆ ಪ್ರಸ್ತಾವ

Last Updated 22 ಸೆಪ್ಟೆಂಬರ್ 2018, 12:38 IST
ಅಕ್ಷರ ಗಾತ್ರ

ಮಡಿಕೇರಿ: ಭೂಕುಸಿತದಿಂದ ಮನೆ ಕಳೆದುಕೊಂಡವರಿಗೆ ಒಟ್ಟು 110 ಎಕರೆ ಭೂಮಿಯನ್ನು ವಿವಿಧ ಕಡೆ ಗುರುತಿಸಲಾಗಿದ್ದು, ನಿವೇಶನ ಸಮತಟ್ಟು ಕಾರ್ಯವು ಪೂರ್ಣಗೊಂಡಿದೆ ಎಂದು ವಿಶೇಷ ಜಿಲ್ಲಾಧಿಕಾರಿ ಜಗದೀಶ್ ಮಾಹಿತಿ ನೀಡಿದರು.

ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮಕೈಗೊಳ್ಳುವ ಸಿದ್ದತೆ ನಡೆದಿದೆ. ಈಗಾಗಲೇ ನಾಲ್ಕು ಮಾದರಿಯ ಮನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನಕ್ಕೆ ಇಡಲಾಗಿದ್ದು, ಸಂತ್ರಸ್ತರಿಗೆ ಒಪ್ಪಿಗೆ ಆಗುವ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು.

ಕೆ.ನಿಡುಗಣೆ, ಕರ್ಣಂಗೇರಿ, ಗಾಳಿಬೀಡು, ಮದೆ, ಬಿಳಿಗೇರಿ, ಸಂಪಾಜೆ, ಜಂಬೂರು ಜಾಗದಲ್ಲಿ ನಿವೇಶನ ನಿರ್ಮಾಣಕ್ಕೆ ಸಮತಟ್ಟು ಕಾರ್ಯ ಆಗುತ್ತಿದೆ. ಸದ್ಯ ಲೇಔಟ್ ನಿರ್ಮಾಣಕ್ಕೆ ₹ 5 ಕೋಟಿ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದ್ದು, ಘಟಕ ವೆಚ್ಚ ನಿಗದಿಯಾದ ನಂತರ ಒಪ್ಪಿಗೆಯಾಗುವ ಮನೆಯನ್ನು ನಿರ್ಮಿಸಲಾಗುವುದು. ಆ ನಿಟ್ಟಿನಲ್ಲಿ ಗೃಹ ಮಂಡಳಿ ವತಿಯಿಂದ ಮನೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದೂ ಹೇಳಿದರು.

ಎಲ್ಲೆಲ್ಲಿ ಜಾಗ ಗುರುತು: ಕರ್ಣಂಗೇರಿ ಗ್ರಾಮದ ಸರ್ವೆ ನಂ.: 178ರಲ್ಲಿ ನಾಲ್ಕು ಎಕರೆ ಗುರುತಿಸಲಾಗಿದ್ದು, ಸುಮಾರು 80 ನಿವೇಶನಗಳು ಲಭ್ಯವಾಗಲಿದೆ. ಈ ಗ್ರಾಮದಲ್ಲಿ ಕರ್ಣಂಗೇರಿಯ 13, ಮಕ್ಕಂದೂರಿನ 11, ಹಚ್ಚಿನಾಡಿನ 1, ಹೊದಕಾನ 9 ಹಾಗೂ ಮಡಿಕೇರಿ ನಗರದ 43 ಕುಟುಂಬಗಳಿಗೆ ಒಟ್ಟು 65 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಿಲಾಗಿದೆ ಎಂದು ವಿವರಿಸಿದರು.

ಕೆ. ನಿಡುಗಣೆ ಗ್ರಾಮದ ಸರ್ವೆ ನಂ.: 1/13ರಲ್ಲಿ ಅಂದಾಜು 5 ಎಕರೆ ಜಾಗ ಗುರುತಿಸಲಾಗಿದೆ. ಕಾಲೂರು ಗ್ರಾಮದ 22 ಕುಟುಂಬಗಳಿಗೆ, ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೆ ನಂ.: 103ರಲ್ಲಿ 7 ಎಕರೆ ಜಾಗ ಗುರುತಿಸಲಾಗಿದೆ. ಹೆಬ್ಬೆಟ್ಟಗೇರಿಯ 90 ಕುಟುಂಬಗಳಿಗೆ, ಗಾಳಿಬೀಡು ಸರ್ವೆ ನಂ.: 99/3, 100/3, 100/4ರಲ್ಲಿ 13 ಎಕರೆ ಜಾಗ ಗುರುತಿಸಲಾಗಿದ್ದು, ಗಾಳಿಬೀಡು ಗ್ರಾಮದ 19 ಕುಟುಂಬಗಳಿಗೆ, ನಿಡುವಟ್ಟಿನ 26 ಕುಟುಂಬಗಳಿಗೆ ಬಾರಿ ಬೆಳ್ಳಚ್ಚು 2 ಕುಟುಂಬಗಳಿಗೆ, ಒಂದನೇ ಮೊಣ್ಣಂಗೇರಿ 9 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.

ಮದೆ ಗ್ರಾಮದಲ್ಲಿ 10 ಎಕರೆ, ಸಂಪಾಜೆಯ ಸರ್ವೆ ನಂ.54/1ರಲ್ಲಿ 1.50 ಎಕರೆ, ಜಂಬೂರು ಗ್ರಾಮದ ಸರ್ವೆ ನಂ.: 13/1ರಲ್ಲಿ 50 ಎಕರೆ ಜಾಗ ಗುರುತಿಸಲಾಗದೆ ಎಂದು ಮಾಹಿತಿ ನೀಡಿದ್ದಾರೆ.

ಬೆಳೆ ನಷ್ಟ ಸಮೀಕ್ಷೆ: ಮಾಹಿತಿಗೆ ಮನವಿ

ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಜಿಲ್ಲೆಯ ಕೃಷಿ, ತೋಟಗಾರಿಕೆ, ಕಾಫಿ, ಏಲಕ್ಕಿ, ಕರಿಮೆಣಸು ಬೆಳೆಗಳು ನಾಶವಾಗಿದ್ದು, ಬೆಳೆ ನಷ್ಟದ ಸಮೀಕ್ಷೆಯನ್ನು ಜಿಲ್ಲಾಡಳಿತ ನಡೆಸುತ್ತಿದ್ದು ಬೆಳೆಗಾರರು ಮಾಹಿತಿ ನೀಡಲು ಕೋರಲಾಗಿದೆ

ಕಾಫಿಮಂಡಳಿ, ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಒಟ್ಟು 109 ತಂಡ ರಚಿಸಲಾಗಿದ್ದು, ಈ ತಂಡಗಳು ಜಿಲ್ಲೆಯಾದ್ಯಂತ ಬೆಳೆ ನಷ್ಟ ಹಾಗೂ ಭೂಕುಸಿತದಿಂದ ಉಂಟಾದ ತೋಟ ನಷ್ಟದ ಬಗ್ಗೆ ಸಮೀಕ್ಷೆ ನಡೆಸುತ್ತಿವೆ.

ಜಿಲ್ಲೆಯ ಎಲ್ಲಾ ರೈತರು ಗ್ರಾಮ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಅಥವಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ. ತಾಲ್ಲೂಕುವಾರು ಸಹಾಯವಾಣಿಗಳನ್ನೂ ಸಹ ಸ್ಥಾಪಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಮಡಿಕೇರಿ ತಾಲ್ಲೂಕು: 08272 228396, ವಿರಾಜಪೇಟೆ ತಾಲ್ಲೂಕು: 08274 257328, ಸೋಮವಾರಪೇಟೆ ತಾಲ್ಲೂಕು: 08276 282045 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT