ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದತೆ, ಸಹಬಾಳ್ವೆಯಿಂದ ದೇಶದ ಏಳಿಗೆ

ಎಮ್ಮೆಮಾಡು ಉರುಸ್: ಶಾಫಿ ಸಅದಿ ಅಭಿಮತ
Published 30 ಏಪ್ರಿಲ್ 2024, 5:11 IST
Last Updated 30 ಏಪ್ರಿಲ್ 2024, 5:11 IST
ಅಕ್ಷರ ಗಾತ್ರ

ನಾಪೋಕ್ಲು: ಪರಸ್ಪರ ಸೌಹಾರ್ದತೆ, ಸಹಬಾಳ್ವೆ, ಸಹನೆಯಿಂದ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡರೆ ಸಮಾಜದ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಹೇಳಿದರು. ಸಮೀಪದ ಎಮ್ಮೆಮಾಡು ಉರುಸ್ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದರು.

ತಿಳಿವಳಿಕೆಯ ಕೊರತೆ ಧರ್ಮ- ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಹಿಂದೂ ಮುಸಲ್ಮಾನರ ಸೌಹಾರ್ದತೆಗೆ ಧಕ್ಕೆ ಆಗಬಾರದು. ಮುಸಲ್ಮಾನರು ಉದಾತ್ತವಾದ, ಆಧ್ಯಾತ್ಮಿಕ ಚಿಂತನೆಯಿಂದ ಬೆಳೆದು ಬಂದಿದ್ದಾರೆ. ಧರ್ಮದ ಬಗೆಗಿನ ಅಜ್ಞಾನದಿಂದ ಸಂಘರ್ಷ ಸೃಷ್ಟಿಯಾಗುತ್ತಿದೆ. ಸಮಾಜಕ್ಕೆ ಆತಂಕ ತಂದೊಡ್ಡುವ ಕೆಲಸವನ್ನು ಯಾವ ಯುವಕರು ಮಾಡಬಾರದು. ತಪ್ಪು ಮಾಡಿದ ಯಾವುದೇ ವ್ಯಕ್ತಿಗೆ ಶಿಕ್ಷೆ ಆಗಬೇಕು. ಇತ್ತೀಚಿನ ದಿನಗಳಲ್ಲಿ ದೊಂಬಿ, ಕೊಲೆ ಸಂಘರ್ಷಗಳು ಸಂಭವಿಸಿದಾಗ ಜಾತಿ ಹುಡುಕುವ ಕೆಲಸ ಆಗುತ್ತಿದೆ .ಅಂತಹ ಘಟನೆಗಳು ಮರುಕಳಿಸಬಾರದು. ಯುವಕರು ಯಾವತ್ತು ಆಕ್ರೋಶಕ್ಕೆ ಒಳಗಾಗಬಾರದು ಎಂದರು.

ಕೆಲ ಯುವಕರು ಇಂದು ಮಾದಕ ವ್ಯಸನಿಗಳಾಗಿ ಸಮಾಜಕ್ಕೆ ಕಂಟಕರಾಗುತ್ತಿದ್ದಾರೆ. ಇದರಿಂದ ನಾಡಿಗೆ, ರಾಜ್ಯಕ್ಕೆ ತೊಂದರೆ. ಯುವಕರಲ್ಲಿ ಜಾಗೃತಿ ಕೆಲಸ ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಕ್ಷುಲ್ಲಕ ಕಾರಣಕ್ಕೆ ಮನುಷ್ಯತ್ವವನ್ನು ಕಳೆದುಕೊಳ್ಳುವಂತಾಗಬಾರದು. ಪ್ರತಿ ಗ್ರಾಮ, ರಾಜ್ಯವನ್ನು ಗಾಂಜಾ ಮುಕ್ತವನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕು ಎಂದರು.

ಸುನ್ನಿ ವಿದ್ಯಾಭ್ಯಾಸ ಬೋರ್ಡಿನ ಕೋಶಾಧಿಕಾರಿ ಸಯಿದ್ ಆಟಕೋಯ ತಂಗಳ್ ಕೊಂಬೋಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಿದ್ ಮುಯಿನಿಲ್ ಶಿಹಾಬ್ ತಂಗಳ್ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೂರ್ಗ್ ಜಮಾಯುತ್ತಲ್ ಉಲಮಾ ಕೋಶಾಧಿಕಾರಿ ಕೆ.ಎಂ ಹುಸೇನ್ ಸಖಾಫಿ, ತಾಜೂಲ್ ಇಸ್ಲಾಂ ಮುಸ್ಲಿಂ ಜಮಾಯತ್ ಕೋಶಾಧಿಕಾರಿ ಆಲಿ ನೆರೋಟ್, ಎಮ್ಮೆಮಾಡು ಶಹೀದಿಯ ಕಾರ್ಯದರ್ಶಿ ಇಸ್ಮಾಯಿಲ್ ಚಕ್ಕೇರ, ಸಿಎಂ ಮಾಹಿನ್ ಚಂಬಾರಂಡ, ಹಂಸ ಕೊಟ್ಟಮುಡಿ, ಇಸ್ಮಾಯಿಲ್ ನಾಪೋಕ್ಲು, ಲತೀಫ್ ಸುಂಟಿಕೊಪ್ಪ, ಮೊಹಮ್ಮದ್ ಹಾಜಿ ಕುಂಜಿಲ, ಮನ್ಸೂರ್ ಆಲಿ, ಅಬ್ದುಲ್ ರೆಹಮಾನ್, ಹಂಸ ದೋರೋಟ್, ಕೊಳಕೇರಿ ಜಮಾಯತ್ ಅಧ್ಯಕ್ಷ ಅಬ್ದುಲ್ ನಾಸಿರ್, ಕುಂಜಿಲ ಜಮಾಯತ್ ಅಧ್ಯಕ್ಷ ಶೌಕತ್ತಾಲಿ, ಹಳೆ ತಾಲ್ಲೂಕು ಜಮಾಯತ್ ಅಧ್ಯಕ್ಷ ಮುಹಮದ್ ಪಾಲ್ಗೊಂಡಿದ್ದರು.

ಪೊಲೀಸ್ ಇಲಾಖೆ ವತಿಯಿಂದ ಎಮ್ಮೆಮಾಡು ಮಖಾಂ ಉರುಸ್ ಪ್ರಯುಕ್ತ ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿತ್ತು. ನೆಲಜಿ, ಬಲ್ಲಮಾವಟಿ, ಕಕ್ಕಬ್ಬೆ ಭಾಗದಿಂದ ನಾಪೋಕ್ಲು ಪಟ್ಟಣಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಹಳೇ ತಾಲ್ಲೂಕು ಸರ್ಕಾರಿ ಶಾಲಾ ಮೈದಾನದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಬೇತು ರಸ್ತೆ, ಪೊಲೀಸ್ ಠಾಣಾ ಮೈದಾನ, ನಾಡಕಚೇರಿ ಆವರಣ, ಚೆರಿಯಪರಂಬು ರಸ್ತೆಯಲ್ಲಿ ಇತರೆ ಕಡೆಯಿಂದ ಬರುವ ಸಾರ್ವಜನಿಕರ ವಾಹನ ನಿಲುಗಡೆ ಅವಕಾಶ ಕಲ್ಪಿಸಿ  ಸಂಚಾರ ದಟ್ಟಣೆ ನಿಯಂತ್ರಿಸಲಾಗಿತ್ತು.

ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯ ಹಾಗೂ ಹೊರ ರಾಜ್ಯದಿಂದ ಅತ್ಯಧಿಕ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ನಾಪೋಕ್ಲು ಸಮೀಪದ ಎಮ್ಮೆಮಾಡು ಉರುಸ್ ಪ್ರಯುಕ್ತ ಸೋಮವಾರ ದರ್ಗಾಗಳಿಗೆ ಅಧಿಕ ಸಂಖ್ಯೆಯ ಭಕ್ತರು ಭೇಟಿ ನೀಡಿದರು
ನಾಪೋಕ್ಲು ಸಮೀಪದ ಎಮ್ಮೆಮಾಡು ಉರುಸ್ ಪ್ರಯುಕ್ತ ಸೋಮವಾರ ದರ್ಗಾಗಳಿಗೆ ಅಧಿಕ ಸಂಖ್ಯೆಯ ಭಕ್ತರು ಭೇಟಿ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT