ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಮಹಾಮಳೆ: ಪರಿಹಾರಕ್ಕೆ ಆಗ್ರಹಿಸಿ ನೆರೆ ಸಂತ್ರಸ್ತರ ಬೃಹತ್ ರ್‍ಯಾಲಿ

ನೆರೆ ಸಂತ್ರಸ್ತರ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆ
Last Updated 29 ಸೆಪ್ಟೆಂಬರ್ 2018, 10:51 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಮಹಾಮಳೆ ಹಾಗೂ ಭೂಕುಸಿತದಿಂದ ಸಂತ್ರಸ್ತರಾದವರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಕೊಡಗು ಪ್ರಾಕೃತಿಕ ವಿಕೋಪ ಮತ್ತು ನೆರೆ ಸಂತ್ರಸ್ತರ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆ.ಜಿ.ಎಫ್‌), ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಬೃಹತ್‌ ರ್‍ಯಾಲಿ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಸಂತ್ರಸ್ತರು ಹಾಗೂ ಬೆಳೆಗಾರರು ಈ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ನಗರದ ಗಾಂಧಿ ಮೈದಾನ ಹಾಗೂ ಜನರಲ್‌ ತಿಮ್ಮಯ್ಯ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನೆರೆ ಸಂತ್ರಸ್ತರ ಸಮಿತಿ ಅಧ್ಯಕ್ಷ ಮನು ಮೇದಪ್ಪ ಮಾತನಾಡಿ, ಮಹಾಮಳೆಗೆ ಜಿಲ್ಲೆಯ ಜನರು ಸಂತ್ರಸ್ತರಾಗಿದ್ದಾರೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನ ಹರಿಸಿ ಜಿಲ್ಲೆಗೆ ವಿಶೇಷ ಅನುದಾನಗಳನ್ನು ನೀಡುವ ಮೂಲಕ ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಸೋಮವಾರಪೇಟೆ ಹಾಗೂ ಮಡಿಕೇರಿ ತಾಲ್ಲೂಕಿಗೆ ಒಳಗೊಂಡಿರುವ ಮಕ್ಕಂದೂರು, ಗರ್ವಾಲೆ, ಮಾದಾಪುರ, ಗಾಳಿಬೀಡು, ಶಾಂತಳ್ಳಿ, ಸಂಪಾಜೆ, ಕೆ.ನಿಡುಗಣೆ ಸೇರಿ ಒಟ್ಟು 7 ಗ್ರಾಮ ಪಂಚಾಯಿತಿ ವ್ಯಾಪ್ತಿಯ 38 ಗ್ರಾಮಗಳು ನೆರೆ ಹಾವಳಿಯಿಂದ ಸಂಪೂರ್ಣ ಪ್ರದೇಶಕ್ಕೆ ಹಾನಿಯಾಗಿವೆ. ಈ ಗ್ರಾಮಗಳ ಬಗ್ಗೆ ಸರ್ಕಾರ ವಿಶೇಷ ಗಮನಹರಿಸಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಕಾಫಿ ಮಂಡಳಿ ಸೇರಿದಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸಂಕಷ್ಟದಲ್ಲಿರುವ ಗ್ರಾಮಗಳನ್ನು ಪರಿಗಣಿಸಬೇಕು ಎಂದೂ ಅವರು ಒತ್ತಾಯಿಸಿದರು.

ಗುಡ್ಡ ಕುಸಿತದಿಂದ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಹಾಗೂ ಭಾಗಶಃ ಮನೆಗಳನ್ನು ಜಿಲ್ಲಾಡಳಿತ ಪರಿಗಣಿಸಿ ಸೂಕ್ತ ಜಾಗ ಹಾಗೂ ಮನೆಗಳನ್ನು ನೀಡಬೇಕು. ಇನ್ನು ಹಾನಿಗೊಳಗಾದ 38 ಗ್ರಾಮಗಳ ಎಲ್ಲ ರೈತರ ಮತ್ತು ಬೆಳೆಗಾರರ ಬ್ಯಾಂಕ್‌ ಹಾಗೂ ಸಹಕಾರ ಸಂಘಗಳಲ್ಲಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ತೋಟ ಹಾಗೂ ಗದ್ದೆಗಳನ್ನು ಪುನರ್‌ ಅಭಿವೃದ್ಧಿಗಳಿಸಲು ಮುಂದಿನ 5 ವರ್ಷಗಳವರೆಗೆ ಬಡ್ಡಿರಹಿತ ಸಾಲವನ್ನು ನೀಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಸಂಘಟಕ ನಂದ ಬೆಳ್ಯಪ್ಪ, ಜಿಲ್ಲೆಯ ಕಾಫಿ ಬೆಳೆ, ತೋಟಗಾರಿಕಾ ಹಾಗೂ ಸಾಂಬಾರ ಬೆಳೆಗಳ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಸರ್ಕಾರ ಘೋಷಿಸಬೇಕು. ಈ ಸಂಬಂಧ ಸೂಕ್ತ ಸರ್ವೆಗಳನ್ನು ಆಯಾ ಗ್ರಾಮದಲ್ಲಿ ನಡೆಸಬೇಕಿದೆ. ಬೆಳೆಗಾರರ ಜಾಗದಲ್ಲಿ ಪ್ರತಿ ಎಕರೆಗೆ ಆಯಾ ಸಂದರ್ಭದ ಮಾರುಕಟ್ಟೆ ಧಾರಣೆಗೆ ಅನುಗುಣವಾಗಿ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಅತಿವೃಷ್ಟಿಯಿಂದ ಉಂಟಾದ ಗುಡ್ಡ ಕುಸಿತಕ್ಕೆ ಭಾರೀ ಪ್ರಮಾಣದ ಕೆಸರು ಹಾಗೂ ತ್ಯಾಜ್ಯಗಳು ಹಟ್ಟಿಹೊಳೆ, ಮಕ್ಕಂದೂರು, ಮಾದಾಪುರ, ತಂತಿಪಾಲ ಮತ್ತು ಹಾರಂಗಿಯ ಹಿನ್ನೀರು ಪ್ರದೇಶದಲ್ಲಿ ಸಂಗ್ರಹವಾಗಿದೆ. ಈ ಪ್ರದೇಶಗಳಲ್ಲಿ ನೀರಿನ ಹರಿವಿಗೆ ಅಡಚಣೆ ಆಗಿರುವುದರಿಂದ ಹೂಳು ತೆಗೆಯುವ ಕ್ರಮ ಸರ್ಕಾರದ ಮಟ್ಟದಲ್ಲಿ ಆಗಬೇಕು ಎಂದು ಹೇಳಿದರು.

ವರದಿಗಳ ಪ್ರಕಾರ ಹಾರಂಗಿ ಜಲಾಶಯದಲ್ಲಿ ಸಂಗ್ರಹವಾದ ನೀರಿನ ಪ್ರಮಾಣವೇ ಭಾರೀ ಭೂಕುಸಿತಕ್ಕೆ ಕಾರಣವಾಗಿದೆ. ಜಲಾಶಯಯದಲ್ಲಿ ಹೂಳು ತುಂಬಿರುವುದರಿಂದ ಹೆಚ್ಚು ಮಳೆಯಾಗುವ ಸಂದರ್ಭ ನೀರನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಾಗದೆ ಭೂಕುಸಿತ ಉಂಟಾಗಿರಬಹುದು. ಈ ಬಗ್ಗೆ ಜಿಲ್ಲಾಡಳಿತ ಪರಿಶೀಲಿಸಿ ಮತ್ತೆ ಅನಾಹುತ ಸಂಭವಿಸುವ ಮೊದಲು ಜಾಗೃತರಾಗಬೇಕು ಎಂದು ಕೋರಿದರು.

ಕೊಡಗು ಪ್ಲಾಂಟರ್ ಅಸೋಸಿಯೇಷನ್‌ ಮುಖಂಡ ಕೆ.ಕೆ. ವಿಶ್ವನಾಥ್ ಮಾತನಾಡಿ, ಭೂ ಕುಸಿತದಿಂದ ಜಿಲ್ಲೆಯಲ್ಲಿ ಭೌಗೋಳಿಕ ಏರುಪೇರು ಉಂಟಾಗಿದೆ. ಭೂಕುಸಿತ ಜಾಗದಲ್ಲಿ ಮತ್ತೆ ತೋಟ ನಿರ್ವಹಣೆ ಅಸಾಧ್ಯ, ಸರ್ಕಾರದ ಏರಿಯಲ್‌ ಸರ್ವೆಯಿಂದ ನಷ್ಟದ ಮಾಹಿತಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಭೌಗೋಳಿಕ ಸರ್ವೆ ಕಾರ್ಯ ಆಯಾ ಗ್ರಾಮದಲ್ಲಿ ಆಗಬೇಕು ಎಂದು ಮನವಿ ಮಾಡಿದರು.

ಸಂತ್ರಸ್ತರಿಗೆ ಸುರಕ್ಷಿತ ಸ್ಥಳದಲ್ಲಿ ಪುನರ್‌ ವಸತಿ ಮತ್ತು ಕೃಷಿಗೆ ಅಗತ್ಯವಿರುವ ಭೂಮಿಯನ್ನು ನೀಡಬೇಕು. ಜತೆಗೆ, ಸಂತ್ರಸ್ತ ಕುಟುಂಬದ ಕನಿಷ್ಠ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮುಂದಿನ 10 ವರ್ಷಗಳವರೆಗೆ ಪಿಂಚಣಿಯನ್ನು ಆಯಾ ಕುಟುಂಬದ ಒಬ್ಬ ಸದಸ್ಯರಿಗೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಸಂತ್ರಸ್ತ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚ ಹಾಗೂ ವಸತಿ ನಿಲಯಗಳ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಈ ಸೌಲಭ್ಯಗಳು ವಿದ್ಯಾರ್ಥಿಗಳು ಆಯ್ಕೆ ಮಾಡುವ ಶಾಲೆ–ಕಾಲೇಜುಗಳಿಗೂ ಅನ್ವಯಿಸಬೇಕು ಎಂದು ವಿಶ್ವನಾಥ್ ಮನವಿ ಮಾಡಿದರು.

ವಿಶೇಷ ಜಿಲ್ಲಾಧಿಕಾರಿ ಜಗದೀಶ್‌ ಹಾಗೂ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ವೀಣಾ ಅಚ್ಚಯ್ಯ ಮಾತನಾಡಿ, ‘ಜಿಲ್ಲೆಯ ಸಂತ್ರಸ್ತರು ಹಾಗೂ ಬೆಳೆಗಾರರ ಬೇಡಿಕೆಗಳನ್ನು ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು; ನಷ್ಟದಲ್ಲಿರುವ ಕೃಷಿಕರ ನ್ಯಾಯಯುತ ಹೋರಾಟಕ್ಕೆ ನನ್ನ ಬೆಂಬಲವಿದೆ’ ಎಂದು ಹೇಳಿದರು.

ಪತ್ರಿಭಟನೆಯಲ್ಲಿ ಕುಕ್ಕೆರ ಜಯಾ ಚಿಣ್ಣಪ್ಪ, ರತನ್ ತಮ್ಮಯ್ಯ, ಬಿ.ಎನ್.ರಮೇಶ್, ಎಸ್‌.ಕೆ.ಅಚ್ಚಯ್ಯ, ಕೊಡಗು ಪ್ಲಾಂಟರ್ಸ್‌ ಅಸೋಸಿಯೇಷನ್‌ನ ಎಂ.ಸಿ.ಕಾರ್ಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT