ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಮರು ನಿರ್ಮಾಣ: ಎದ್ದು ನಿಂತಿವೆ ಮಣ್ಣಿನ ರಸ್ತೆಗಳು

ಕೊಡಗು ಮರು ನಿರ್ಮಾಣದಲ್ಲಿ ಅಧಿಕಾರಿಗಳು, ಗುತ್ತಿಗೆದಾರರು, ಕಾರ್ಮಿಕರ ಪರಿಶ್ರಮ
Last Updated 29 ಸೆಪ್ಟೆಂಬರ್ 2018, 11:31 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಸುರಿದಿದ್ದ ಮಹಾಮಳೆ ಹಾಗೂ ಭೂಕುಸಿತದಿಂದ ಸಂಚಾರ ಬಂದ್‌ ಆಗಿದ್ದ ಬಹುತೇಕ ರಸ್ತೆಗಳಲ್ಲಿ ಈಗ ಲಘು ವಾಹನಗಳ ಸಂಚಾರ ಆರಂಭವಾಗಿದ್ದು, ಗ್ರಾಮೀಣ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕೊಡಗು ಮರು ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ನೇತೃತ್ವದಲ್ಲಿ ಅಧಿಕಾರಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅದಕ್ಕೆ ಗುತ್ತಿಗೆದಾರರು, ಕಾರ್ಮಿಕರು ಕೈಜೋಡಿಸಿದ್ದಾರೆ. ಸ್ವಯಂ ಸೇವಾ ಸಂಸ್ಥೆಗಳು ಬೆನ್ನೆಲುಬಾಗಿ ನಿಂತಿವೆ. ‘ಕಾಮಗಾರಿ ಪೂರ್ಣಗೊಳ್ಳುವ ತನಕ ಹಣ ಕೇಳುವಂತಿಲ್ಲ’ ಎನ್ನುವ ಷರತ್ತಿಗೆ ಮರು ಮಾತಿಲ್ಲದೇ ಒಪ್ಪಿಕೊಂಡಿದ್ದ ಗುತ್ತಿಗೆದಾರರು, ಅಲ್ಲಲ್ಲಿ ಹೊಸ ರಸ್ತೆಗಳನ್ನೇ ನಿರ್ಮಿಸಿಬಿಟ್ಟಿದ್ದಾರೆ. ಕುಸಿದ ಸ್ಥಳಗಳಲ್ಲಿ ಎಲ್ಲಿ ನೋಡಿದರೂ ಹೊಸ ರಸ್ತೆಗಳೇ ಕಣ್ಣಿಗೆ ಬೀಳುತ್ತಿವೆ.

ಜಿಲ್ಲೆಯಲ್ಲಿ ಹಾದು ಹೋಗಿರುವ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಾಲ್ಕೈದು ತಿಂಗಳು ಕಾಲ ವಾಹನ ಸಂಚಾರ ಸಾಧ್ಯವಿಲ್ಲ ಎಂದೇ ಭಾವಿಸಲಾಗಿತ್ತು. ಆ ಮಾತನ್ನು ಕಾರ್ಮಿಕರು ಹಾಗೂ ಅಧಿಕಾರಿಗಳು ಸುಳ್ಳು ಮಾಡಿದ್ದು, ಆ ಮಾರ್ಗಗಳಲ್ಲಿ ತಿಂಗಳಲ್ಲಿಯೇ ಲಘು ವಾಹನಗಳು ಸಂಚರಿಸುತ್ತಿವೆ.

ಭೂಕುಸಿತದಿಂದ ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪಿದ್ದ ಮೈಸೂರು – ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ (ಮಡಿಕೇರಿ– ಸಂಪಾಜೆ ನಡುವೆ) ಲಘು ವಾಹನಗಳು ಸಂಚರಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದ ಕಾರಣ ಭಾಗಮಂಡಲ, ಕರಿಕೆ, ಸುಳ್ಯ ಮಾರ್ಗವಾಗಿ ವಾಹನಗಳು ಮಂಗಳೂರಿಗೆ ಹೋಗುತ್ತಿದ್ದವು. ಈಗ ಮಿನಿ ಬಸ್‌ಗಳು ಮಡಿಕೇರಿಯಿಂದ ಮದೆನಾಡು ಗ್ರಾಮಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದು, ಅಲ್ಲಿಂದ ಮಂಗಳೂರಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಂತ್ರಿಕತೆ ಅಳವಡಿಕೆ: ಈ ಹೆದ್ದಾರಿಯಲ್ಲಿ ಸುಮಾರು 25 ಕಡೆ ಕುಸಿತ ಉಂಟಾಗಿತ್ತು. ನಾಲ್ಕು ಕಡೆ ರಸ್ತೆಯೇ ಇರಲಿಲ್ಲ. ಭೂಕುಸಿತ, ಜಲಸ್ಫೋಟದಿಂದ ಜೋಡುಪಾಲ, ಮದೆನಾಡು ಹಾಗೂ ಮೊಣ್ಣಂಗೇರಿಯಲ್ಲಿ ಹೆದ್ದಾರಿಯೇ ಮಾಯವಾಗಿತ್ತು. ಪ್ರಪಾತಗಳೂ ಸೃಷ್ಟಿ ಆಗಿದ್ದವು.

ತಾಂತ್ರಿಕತೆ ಅಳವಡಿಸಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿದೆ. ಮರದ ತುಂಡುಗಳನ್ನು ತಳಭಾಗಕ್ಕೆ ಹಾಕಿ ಅದರ ಮೇಲೆ ಜಿಯೊ ಫ್ಯಾಬ್ರಿಕ್ಸ್‌, ಜಿಯೊ ಗ್ರಿಡ್‌ ಹಾಗೂ ಸಾವಿರಾರು ಮರಳು ತುಂಬಿದ ಚೀಲಗಳನ್ನಿಟ್ಟು ರಸ್ತೆ ದುರಸ್ತಿ ಪಡಿಸಲಾಗಿದೆ. ಮಧ್ಯದಲ್ಲಿ ಪೈಪ್‌ ಅಳವಡಿಸಿ, ಮಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ಇದೆಲ್ಲವೂ ತಾತ್ಕಾಲಿಕ ಕಾಮಗಾರಿ ಅಷ್ಟೆ. ಟೆಂಡರ್‌ ಆದ ಬಳಿಕ ಹೊಸದಾಗಿಯೇ ರಸ್ತೆ ನಿರ್ಮಿಸಬೇಕು ಎಂದು ಹೇಳುತ್ತಾರೆ ಕಾರ್ಮಿಕರು.

ಮಡಿಕೇರಿ, ಸೋಮವಾರಪೇಟೆ ರಾಜ್ಯ ಹೆದ್ದಾರಿಯೂ ಭೂಕುಸಿತದಿಂದ ಅತ್ಯಂತ ಅಪಾಯದ ಮಟ್ಟಕ್ಕೆ ತಲುಪಿತ್ತು. ಈ ರಸ್ತೆಯ 11 ಸ್ಥಳಗಳಲ್ಲಿ ಪ್ರಪಾತವೇ ಸೃಷ್ಟಿಯಾಗಿತ್ತು. ಈ ರಸ್ತೆ ಕುಸಿದಿದ್ದ ಪರಿಣಾಮ 10 ಗ್ರಾಮಗಳಿಗೆ ತೆರಳಲು ರಸ್ತೆಯೇ ಇರಲಿಲ್ಲ! 200 ಮೀಟರ್‌ಗೆ ಒಬ್ಬರಂತೆ ಗುತ್ತಿಗೆ ಪಡೆದು, ನೂರಾರು ಕಾರ್ಮಿಕರು ಹಗಲಿರುಳು ದುಡಿದ ಪರಿಣಾಮವಾಗಿ ಒಂದು ವಾರದಿಂದ ಈ ಭಾಗದ ಕಾರ್ಮಿಕರು ಕೆಲಸಕ್ಕೆ ಹೋಗುತ್ತಿದ್ದಾರೆ. ಶಾಲಾ ಮಕ್ಕಳು ನೆಮ್ಮದಿಯಿಂದ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕಂಡುಬರುತ್ತಿದೆ.

ಕಾಲೂರಿನಲ್ಲಿ ಭವಿಷ್ಯದ್ದೇ ಚಿಂತೆ: ಬೆಟ್ಟದ ಸಾಲಿನಲ್ಲಿದ್ದ ಕಾಲೂರು ಗ್ರಾಮದ ರಸ್ತೆಯ ಮೇಲೆ ಬಿದ್ದಿದ್ದ ಮಣ್ಣು ತೆರವು ಮಾಡಲಾಗಿದೆ. ಆದರೆ, ಕಾಲೂರು ಹೊಳೆಯು ಉಕ್ಕಿ ಹರಿದಿದ್ದರಿಂದ ನೂರಾರು ಎಕರೆ ಗದ್ದೆಯಲ್ಲಿ ತುಂಬಿದ್ದ ಮಣ್ಣು ಮಾತ್ರ ಹಾಗೆಯೇ ನಿಂತಿದೆ.

ಸೇತುವೆಯ ಒಂದು ಭಾಗದ ಪಿಲ್ಲರ್‌ಗಳು ಕೊಚ್ಚಿ ಹೋಗಿವೆ. ಅದರ ಮೇಲೆ ಕೆಸರು ಮಣ್ಣು ನಿಂತಿದೆ. ಅದನ್ನು ನೋಡುತ್ತಲೇ ವ್ಯಥೆಯಿಂದ ಗ್ರಾಮಸ್ಥರು ಹೆಜ್ಜೆ ಹಾಕುತ್ತಿದ್ದಾರೆ. ‘ಈಗೇನೋ ಊರು ಸೇರಿದ್ದೇವೆ. ಮುಂದಿನ ಮಳೆಗಾಲದಲ್ಲಿ ನಮ್ಮ ಭವಿಷ್ಯವೇನು’ ಎಂದು ನೋವು ತೋಡಿಕೊಳ್ಳುತ್ತಾರೆ.

ಮಡಿಕೇರಿ, ಸೋಮವಾರಪೇಟೆ ತಾಲ್ಲೂಕಿನ ಮಕ್ಕಂದೂರು, ಗರ್ವಾಲೆ, ಮಾದಾಪುರ, ಗಾಳಿಬೀಡು, ಶಾಂತಳ್ಳಿ, ಸಂಪಾಜೆ, ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 38 ಹಳ್ಳಿಗಳಲ್ಲಿ ಮಳೆಯಿಂದ ಸಮಸ್ಯೆ ಉಂಟಾಗಿತ್ತು. ಇದರಲ್ಲಿ ಕೆಲವು ಗ್ರಾಮಗಳಿಗೆ ರಸ್ತೆ ಸಂಪರ್ಕಿಸುವ ಕೆಲಸ ಮುಕ್ತಾಯವಾಗಿದ್ದರೂ, ಇನ್ನು ಕೆಲವು ಕಡೆ ಕಾಮಗಾರಿ ಪ್ರಗತಿಯಲ್ಲಿದೆ. ಅಬ್ಬಿ ಜಲಪಾತಕ್ಕೂ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆ ರಸ್ತೆಯನ್ನೂ ದುರಸ್ತಿ ಪಡಿಸಲಾಗಿದ್ದು ಪ್ರವಾಸಿಗರು ಎರಡು ದಿನಗಳಿಂದ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT