ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂಗೆ ಧನ್ಯವಾದ ಹೇಳಿದ ಫತಹ್‌

ಅಕ್ಷರ ಗಾತ್ರ

ಮಡಿಕೇರಿ: ಮಳೆಯಿಂದ ಆಗಿರುವ ಅನಾಹುತಗಳ ಬಗ್ಗೆ ವಿಡಿಯೊ ಮಾಡಿ ಸರ್ಕಾರದ ಗಮನ ಸೆಳೆದಿದ್ದ ಎಮ್ಮೆಮಾಡು ಗ್ರಾಮದ ಬಾಲಕ ಫತಹ್‌ನನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಗುರುವಾರ ರಾತ್ರಿ ಭೇಟಿ ಮಾಡಿ ಮಾತನಾಡಿದರು. ಜಿಲ್ಲೆಗೆ ಆಗಮಿಸಿದ್ದಕ್ಕೆ ಮುಖ್ಯಮಂತ್ರಿಗೆ ಫತಹ್‌ ಸಹ ಧನ್ಯವಾದ ಹೇಳಿದ.

‘ಏನಪ್ಪಾ, ಮುಖ್ಯಮಂತ್ರಿ ಅವರು ಕೊಡಗನ್ನು ಮರೆತುಬಿಟ್ರು ಎಂದೆಲ್ಲಾ ವಿಡಿಯೊ ಮಾಡಿದ್ದೀಯಾ’ ಎಂದು ಕುಮಾರಸ್ವಾಮಿ ಅವರು ಫತಹ್‌ನ ಕಾಲೆಳೆದರು. ಬಾಲಕ ಸಹ ತಕ್ಷಣವೇ ಪ್ರತಿಕ್ರಿಯಿಸಿ, ‘ಹಿಂದಿನ ಮುಖ್ಯಮಂತ್ರಿ ನಮ್ಮನ್ನು ಮರೆತುಬಿಟ್ಟಿದ್ದರು ಸರ್. ಆದರೆ, ನೀವು ಬಂದಿರೋದು ಸಂತೋಷವಾಗಿದೆ’ ಎಂದು ಹೇಳಿದ. ‘ನೀನು ಹೇಳದಿದ್ದರೂ ನಾನು ಇಲ್ಲಿಗೆ ಭೇಟಿ ನೀಡುತ್ತಿದ್ದೆ. ಎಲ್ಲ ಕೆಲಸಗಳನ್ನು ಮಾಡಿಕೊಡುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಗ್ರಾಮಕ್ಕೆ ಸರ್ಕಾರಿ ಜೂನಿಯರ್‌ ಕಾಲೇಜು ಮಂಜೂರು ಮಾಡಿಸಿಕೊಡುವಂತೆ ಮನವಿ ಸಲ್ಲಿಸಿದ್ದಕ್ಕೆ, ಪಕ್ಕದಲ್ಲಿದ್ದ ಸಚಿವ ಎಚ್‌.ಡಿ.ರೇವಣ್ಣ, ಈ ವರ್ಷವೇ ಕಾಲೇಜು ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದರು. ‘ಶಾಸಕ ಕೆ.ಜಿ.ಬೋಪಯ್ಯ ನಿಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಳ್ತಾರಾ ಹೇಗೆ?’ ಎಂದು ಕಿಚಾಯಿಸಿದರು.

ಕೊನೆಗೆ ಮುಖ್ಯಮಂತ್ರಿ ಅವರನ್ನೇ ತಮ್ಮ ಮನೆಗೆ ಫತಹ್‌ ಆಹ್ವಾನಿಸಿದ. ಅದಕ್ಕೆ ರೇವಣ್ಣ ‘ನಾನೇ ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತೇನೆ’ ಎಂದು ಭರವಸೆ ಕೊಟ್ಟರು.

‘ಭಾರಿ ಮಳೆಗೆ ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗೆ ಕೊಳೆರೋಗ ತಗುಲಿದೆ; ರೈತರಿಗೆ ಅಪಾರ ನಷ್ಟವುಂಟಾಗಿದೆ. ಇಲ್ಲಿ ಮಳೆ ಬಿದ್ದರೆ ಅದರ ಲಾಭ ಪಡೆಯುವುದು ಮೈಸೂರು, ಮಂಡ್ಯ ಹಾಗೂ ತಮಿಳುನಾಡು ಭಾಗದ ಜನರು. ಜಿಲ್ಲೆಯಲ್ಲಿ ಇಷ್ಟೆಲ್ಲಾ ನಷ್ಟವಾಗುತ್ತಿರುವಾಗ ಮೊದಲು ಪರಿಹಾರ ಕೊಡಬೇಕಿದ್ದು ಕೊಡಗಿಗೆ ಸ್ವಾಮಿ. ಆದರೆ, ನಮ್ಮನ್ನು ಮರೆತಿದ್ದೀರಲ್ಲಾ ಸ್ವಾಮಿ’ ಎಂದು ಬಾಲಕ ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT