ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಕೃಪೆ ತೋರಿದ ವರುಣ: ಬತ್ತಿದ್ದ ಕಾವೇರಿ ನದಿಯಲ್ಲಿ ಹರಿಯಿತು ನೀರು

Published 5 ಮೇ 2024, 6:57 IST
Last Updated 5 ಮೇ 2024, 6:57 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಮಳೆಯಿಂದ ಬರಡಾಗಿದ್ದ ದುಬಾರೆಯ ಕಾವೇರಿ ನದಿಯಲ್ಲಿ ನೀರು ಹರಿಯಲು ಆರಂಭಿಸಿದೆ. ಇದರಿಂದ ಗುಂಡಿಗಳಲ್ಲಿ ಉಳಿದಿದ್ದ ನೀರಿನಲ್ಲಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಮೀನುಗಳು ಸೇರಿದಂತೆ, ಜಲಚರಗಳ ಜೀವಗಳು ಉಳಿದಿದೆ.

ಹಲವು ದಿನಗಳ ಕಾಲ ನೀರು ಕಡಿಮೆಯಾಗುತ್ತಾ ಬಂದು ದುಬಾರೆಯಲ್ಲಿ ನೀರಿನ ಹರಿವೇ ಸ್ಥಗಿತಗೊಂಡಿತ್ತು. ಗುಂಡಿಗಳಲ್ಲಿ ಮಾತ್ರವೇ ನೀರು ನಿಂತಿತ್ತು. ಅಳಿದು ಉಳಿದಿದ್ದ ಮೀನುಗಳೆಲ್ಲ ಇಲ್ಲಿ ಸೇರಿಕೊಂಡಿದ್ದವು. ಹರಿಯದೇ ನಿಂತ ನೀರು ಕೊಳೆತು ಆಮ್ಲಜನಕದ ಕೊರತೆಯಾಗಿ ಹಲವು ಮೀನುಗಳು ಸಾವನ್ನಪ್ಪಿದ್ದವು. ಇದರಿಂದ ದುಬಾರೆಯ ಸಾಕಾನೆ ಶಿಬಿರಕ್ಕೆ ಬರಡಾಗಿದ್ದ ನದಿಯಲ್ಲಿ ನಡೆದುಕೊಂಡು ಹೋಗುವಾಗ ವಾಸನೆ ಮೂಗಿಗೆ ಅಡರುತ್ತಿತ್ತು. ಸದ್ಯ, ಸುರಿದ ಮಳೆಯಿಂದ ಶನಿವಾರ ಜುಳುಜುಳನೇ ನೀರು ಹರಿಯುವ ಶಬ್ದ ಮತ್ತೆ ಕೇಳಿ ಬಂದಿದ್ದು, ಜಲಚರಗಳು ಸಂಭ್ರಮಿಸುವಂತಾಯಿತು.

ಕೇವಲ ದುಬಾರೆ ಮಾತ್ರವಲ್ಲ, ಬತ್ತಿ ಹೋಗಿದ್ದ ಹಲವು ತೊರೆಗಳಲ್ಲಿ ನೀರು ಮತ್ತೆ ಒಂದಿಷ್ಟು ಒಸರತೊಡಗಿದೆ. ಆದರೆ, ಬಿದ್ದಿರುವ ಮಳೆ ತೊರೆಗಳು ಮತ್ತೆ ಚೈತನ್ಯಪೂರ್ಣವಾಗಿ ಹರಿಯಲು ಸಹಕಾರಿಯಾಗಿಲ್ಲ. ಹೀಗಾಗಿ, ಜಿಲ್ಲೆಯಲ್ಲಿರುವ ಎಲ್ಲ ನೀರಿನ ಸಣ್ಣ ಸಣ್ಣ ತೊರೆಗಳು, ತೋಡುಗಳು ಮತ್ತಷ್ಟು ಮಳೆಯ ನಿರೀಕ್ಷೆಯಲ್ಲಿವೆ.

ಗುಡುಗು, ಸಿಡಿಲಿನ ಆರ್ಭಟ ಹಾಗೂ ಜೋರುಗಾಳಿಯಿಂದಾಗಿ ಮೇಲ್ನೋಟಕ್ಕೆ ಉತ್ತಮ ಮಳೆ ಎಂದೆನಿಸಿದರೂ ವಾಸ್ತವದಲ್ಲಿ ಈಗ ಬಂದಿರುವ ಮಳೆ ಏನೇನೂ ಸಾಲದು. ಇದೇ ರೀತಿ ಇನ್ನೂ ಒಂದಷ್ಟು ದಿನಗಳ ಕಾಲ ಮಳೆ ಬಂದರೆ ಮಾತ್ರವೇ ಏನಾದರೂ ಪ್ರಯೋಜನವಾದೀತು. ಇಲ್ಲದಿದ್ದರೆ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಹಾರಂಗಿ ಜಲಾಶಯದಲ್ಲಿ ಹಾಗೂ ಚೆಂಬು ಗ್ರಾಮದ ಭಾಗಗಳಲ್ಲಿ 2.6 ಸೆಂ.ಮೀನಷ್ಟು ಮಳೆ ದಾಖಲಾಗಿದೆ ಎಂದು ಹೇಳಿದೆ.

ಉಳಿದಂತೆ, ಐಗೂರಿನಲ್ಲಿ 2.4, ಮದೆ, ಬಿ.ಶೆಟ್ಟಿಗೇರಿ 2.1, ಕಂಬಿಬಾಣೆ, ಕುಟ್ಟ 1.4, ನಾಲ್ಕೂರು ಶಿರಂಗಾಲ, ಮಡಿಕೇರಿ ನಗರ 1.3, ಮಾಲ್ದಾರೆ ಹಾಗೂ ಚೆನ್ನಯ್ಯನಕೋಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ ಎಂದು ತಿಳಿಸಿದೆ.

ಭಾರಿ ಹಾಗೂ ಸಾಧಾರಣ ಮಳೆಯ ನಿರೀಕ್ಷೆ ಕೊಡಗಿನಲ್ಲಿ ಸದ್ಯಕ್ಕೆ ಇಲ್ಲ ಎಂದು ಕೇಂದ್ರವು ಮುನ್ಸೂಚನೆ ನೀಡಿದೆ. 7 ಮತ್ತು 8 ರಂದು ಒಂದಿಷ್ಟು ಮಳೆಯಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಅಲ್ಲಲ್ಲಿ ಹಗುರ ಮಳೆ ಬೀಳುವ ಸಾಧ್ಯತೆ ಇದೆಯೇ ವಿನಹಾ ಬಿರುಸಿನ ಮಳೆಯ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಕೇಂದ್ರವು ತಿಳಿಸಿದೆ.

ಸೋಮವಾರಪೇಟೆ ತಾಲ್ಲೂಕಿಗೆ ಬಾರದ ಮಳೆ

ಕೊಡಗು ಜಿಲ್ಲೆಯ ಮಡಿಕೇರಿ ವಿರಾಜಪೇಟೆ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ಮಾತ್ರವೇ ಮಳೆ ಸುರಿದಿದೆ. ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರಕ್ಕೆ ಹೊಂದಿಕೊಂಡ ಕೆಲವಾರು ಹಳ್ಳಿಗಳಲ್ಲಿ ಮಾತ್ರವೇ ಮಳೆಯಾಗಿದೆ. ಉಳಿದಂತೆ ಸೋಮವಾರಪೇಟೆ ಪಟ್ಟಣ ಶನಿವಾರಸಂತೆ ಕೊಡ್ಲಿಪೇಟೆ ಭಾಗಗಳಲ್ಲಿ ಮೇ ತಿಂಗಳು ಬಂದರೂ ಮಳೆ ಮರೀಚಿಕೆ ಎನಿಸಿದೆ. ಬಿರು ಬಿಸಿಲಿನಿಂದ ಜನಜಾನುವಾರುಗಳು ಬಸವಳಿದಿವೆ.

ಕೊಂಚ ದೂರವಾದ ಬೆಂಕಿ ಆತಂಕ

ಈಗ ಸುರಿದ ಮಳೆಯು ಮಡಿಕೇರಿ ನಾಗರಹೊಳೆ ವಿರಾಜಪೇಟೆ ಪೊನ್ನಂಪೇಟೆ ಭಾಗದ ಅರಣ್ಯಗಳಲ್ಲಿ ಮೂಡಿದ್ದ ಬೆಂಕಿಯ ಆತಂಕ ಕೊಂಚ ದೂರವಾಗುವಂತೆ ಮಾಡಿದೆ. ಮಳೆ ಇದೇ ರೀತಿ ನಿತ್ಯ ಇಲ್ಲವೇ ಎರಡು ದಿನಗಳಿಗೆ ಒಮ್ಮೆಯಾದರೂ ಮುಂದುವರಿದರೆ ಬೆಂಕಿ ಆತಂಕ ಶಾಶ್ವತವಾಗಿ ದೂರವಾಗಲಿದೆ. ಇಲ್ಲದಿದ್ದರೆ ಮಳೆ ಮತ್ತೆ ಕಾಣೆಯಾಗಿ ಬಿರುಬಿಸಿಲಿನ ವಾತಾವರಣ ಮುಂದುವರಿದರೆ ಬೆಂಕಿ ಆತಂಕ ಮತ್ತೆ ಕಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT