ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಿಂದ ದೂರ ‘ದುಬಾರೆ’ ಗ್ರಾಮ

Last Updated 14 ಜನವರಿ 2015, 9:42 IST
ಅಕ್ಷರ ಗಾತ್ರ

ಸಿದ್ದಾಪುರ:  ರಾಜ್ಯ ಮಾತ್ರವಲ್ಲ ದೇಶ, ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಪುಟ್ಟ ಗ್ರಾಮವೊಂದು ಇಲ್ಲಿದೆ. ಆದರೆ, ಈ ಗ್ರಾಮವು ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ ಎಂಬ ಗೊಂದಲ ಇಲ್ಲಿನ ಅನೇಕ ನಿವಾಸಿಗಳನ್ನು ಕಾಡುತ್ತಿದೆ.

ದುಬಾರೆ ಗ್ರಾಮವು ದುಬಾರೆ ಮೀಸಲು ರಕ್ಷಿತಾರಣ್ಯದ ಒಂದು ಭಾಗ. ಮಡಿಕೇರಿ ವಿಭಾಗದ ಕುಶಾಲನಗರ ಅರಣ್ಯ ವಲಯಕ್ಕೆ ಸೇರಿದ್ದಾಗಿದೆ. ಇಲ್ಲಿರುವ ಗಿರಿಜನ ಹಾಡಿಯನ್ನು ಹಾಗೂ ಸುತ್ತಲಿನ ಪ್ರದೇಶವನ್ನು ದುಬಾರೆ ಗ್ರಾಮ ಎಂದು ಹೇಳಲಾಗುತ್ತದೆ. ವಿಪರ್ಯಾಸವೆಂದರೆ ಅತ್ತ ಹಾಡಿ ಎಂದು ಕರೆಸಿಕೊಳ್ಳಲಾಗದೆ, ಇತ್ತ ಸಂಪೂರ್ಣ ಗ್ರಾಮವೂ ಆಗದ ಪರಿಸ್ಥಿತಿ ಇಲ್ಲಿಯದು.

ಸಿದ್ದಾಪುರ ಪಟ್ಟಣದಿಂದ ತುಂಬಾ ದೂರದಲ್ಲಿರುವ ದುಬಾರೆ ಗ್ರಾಮ ಕುಶಾಲನಗರ ಪಟ್ಟಣಕ್ಕೆ ಸನಿಹ. ಅಲ್ಲದೆ ದುಬಾರೆಯನ್ನು ಆಡಳಿತ ಮತ್ತು ಅರಣ್ಯ ಇಲಾಖೆ ಇಬ್ಭಾಗ ಮಾಡಿದೆ. ನದಿಯಿಂದ ಈಚಿನ ಭಾಗ ದುಬಾರೆ ಗ್ರಾಮ ವ್ಯಾಪ್ತಿಯಾದರೂ ಈ ಭಾಗ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ನದಿಯ ಮತ್ತೊಂದು ಭಾಗವೇ ‘ದುಬಾರೆ ಹಾಡಿ’ ಎಂದು ವಿಂಗಡಿಸಲಾಗಿದೆ.

ಈ ಭಾಗ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ದುಬಾರೆ ಸಂಪೂರ್ಣ ಪ್ರದೇಶವನ್ನು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಇಲ್ಲವೇ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಬೇಕೆಂಬ ಕೂಗು ಅನೇಕ ವರ್ಷಗಳಿಂದ ಕೇಳಿ ಬರುತ್ತಿದ್ದರೂ ತಾಂತ್ರಿಕವಾಗಿ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.

ಇಲ್ಲಿನ ನಿವಾಸಿಗಳು ಗಿರಿಜನರು, ಜೇನು ಕುರುಬ ಸೇರಿದಂತೆ ವಿವಿಧ ಪರಿಶಿಷ್ಟ ಜನಾಂಗಕ್ಕೆ ಸೇರಿದ ನಿವಾಸಿಗಳು ಇಲ್ಲಿ ಬದುಕುತ್ತಿದ್ದಾರೆ. ಒಟ್ಟು 80 ಗಿರಿಜನ ಕುಟುಂಬಗಳು ಇಲ್ಲಿ ವಾಸಮಾಡುತ್ತಿವೆ. ದುಬಾರೆಯನ್ನು ‘ದುಬಾರೆ ಆನೆ ಕ್ಯಾಂಪ್‌’ ಎಂದೂ ಕರೆಯಲಾಗುತ್ತದೆ. ಇಲ್ಲಿನವರ ಮೂಲ ವೃತ್ತಿ ಆನೆಗಳ ಯೋಗಕ್ಷೇಮ ನೋಡಿಕೊಳ್ಳುವುದು, ಕಾಡಾನೆಗಳನ್ನು ಪಳಗಿಸುವುದು, ಪ್ರವಾಸಿಗರನ್ನು ಆನೆಯ ಮೇಲೆ ಕೂರಿಸಿ ನದಿ ತೀರ ಮತ್ತು ಕಾಡಿನೊಳಗೆ ಸಂಚಾರ ಮಾಡಿಸುವುದು ಇವರ ಮುಖ್ಯ ಕಸುಬು.

ಇಲ್ಲಿನ ನಿವಾಸಿಗಳು ಮೂಲಸೌಕರ್ಯ ಮತ್ತು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಇಲ್ಲಿ ಕೇವಲ ಇಬ್ಬರೇ ಶಿಕ್ಷಕರನ್ನು ಹೊಂದಿರುವ  ಕಿರಿಯ ಪ್ರಾಥಮಿಕ ಶಾಲೆಯೊಂದಿದ್ದು, ಆಧುನಿಕ ವ್ಯವಸ್ಥೆಯಿಂದ ದೂರ ಉಳಿದಿದೆ. ಕಾವೇರಿ ನದಿ ತಟದಲ್ಲಿ ದುಬಾರೆ ಗ್ರಾಮವಿದ್ದರೂ, ಕುಡಿಯುವ ನೀರಿನ ಅಭಾವಕ್ಕೆ ಇನ್ನೂ ಮುಕ್ತಿ ದೊರಕಿಲ್ಲ. ವಿದ್ಯುತ್‌ ಸಂಪರ್ಕ ಕಲ್ಪಿಸುವ ಯೋಜನೆಯಿದ್ದರೂ ಪರಿಸ್ಥಿತಿ ಕಂಗಂಟ್ಟಾಗಿದೆ.

ದುಬಾರೆ ಪ್ರವಾಸಿ ತಾಣ ಎಂಬ ಹೆಸರಿನಲ್ಲಿ  ಪ್ರವಾಸಿಗರಿಂದ ವಿವಿಧ ರೂಪದಲ್ಲಿ ಸಂಗ್ರಹವಾಗುವ ಲಕ್ಷಾಂತರ ರೂಪಾಯಿಗಳ ಹಣ ಸೇರುವುದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಆಡಳಿತಕ್ಕೆ. ಪ್ರವಾಸಿಗರಿಗಾಗಿ ನಿತ್ಯ ದುಡಿಯುತ್ತಿರುವುದು ದುಬಾರೆ ಗಿರಿಜನರು. ಆದರೆ, ಇಲ್ಲಿ ಸಂಗ್ರಹವಾಗುವ ಹಣ ಮಾತ್ರ ಯಾವುದೇ ರೂಪದಲ್ಲಿಯೂ ದುಬಾರೆ  ಗ್ರಾಮಾಭಿವೃದ್ಧಿಗೆ ಬಳಕೆಯಾಗುತ್ತಿಲ್ಲ. ದುಬಾರೆ ನದಿದಡದಲ್ಲಿ ಪ್ರವಾಸಿಗರಿಂದ ನಿತ್ಯ ಬೋಟಿಂಗ್‌, ರ್‌್ಯಾಫ್ಟಿಂಗ್‌ ಸೇರಿದಂತೆ ವಿವಿಧ ಸಾಹಸಗಳು ನಡೆಯುತ್ತಿರುತ್ತದೆ.

ಅರಣ್ಯ ಇಲಾಖೆಯ ಜಂಗಲ್‌ ಲಾಡ್ಜ್‌ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಹೋಟೆಲ್‌ಗಳು, ಹೋಂ ಸ್ಟೇಗಳು ತಲೆಯೆತ್ತಿವೆ. ಪ್ರವಾಸಿಗರಿಂದ ಅಪಾರ ಪ್ರಮಾಣದಲ್ಲಿ ವಾಹನ ನಿಲುಗಡೆ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಇಲ್ಲಿಗೆ ಸ್ಥಳೀಯ ಆಡಳಿತ ಕುಡಿಯುವ ನೀರು, ವಿದ್ಯುತ್‌, ರಸ್ತೆ ಸೇರಿದಂತೆ ಎಲ್ಲಾ ರೀತಿಯ ಮೂಲಸೌಕರ್ಯ ಒದಗಿಸಿದೆ. ನದಿಯ ಮತ್ತೊಂದು ಬದಿಯಲ್ಲಿ ಕೂಗಳತೆಯ ದೂರದಲ್ಲಿರುವ ದುಬಾರೆ ಹಾಡಿ ಮಾತ್ರ ಕುಗ್ರಾಮವಾಗಿಯೇ ಉಳಿದಿದೆ.

ಹಾಡಿಯ ನಿವಾಸಿಗಳನ್ನು ಕಾಡಾನೆಗಳಿಂದ ರಕ್ಷಿಸಲು ಸಿದ್ದಾಪುರ ಗ್ರಾಮ ಪಂಚಾಯಿತಿ ಆಡಳಿತ 13ನೇ ಹಣಕಾಸು ಯೋಜನೆಯಡಿ 1.75 ಲಕ್ಷದ ಕ್ರಿಯಾಯೋಜನೆ ತಯಾರಿಸಿದೆ. ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಶೌಚಾಲಯ ವ್ಯವಸ್ಥೆ ಇಲ್ಲ ಎಂಬ ಕೂಗು ಬಹಳ ದಿನಗಳಿಂದ ಇದ್ದ ಪರಿಣಾಮ, ಇದೇ ಯೋಜನೆಯಡಿ  ₨ 30ಸಾವಿರವನ್ನು ಮೀಸಲಿಟ್ಟು ಅನೇಕ ದಿನಗಳು ಉರುಳಿವೆ. ಆದರೆ, ಯಾವುದೂ ಕಾರ್ಯಗತವಾಗಿಲ್ಲ.

ಜಿಲ್ಲಾ ಪಂಚಾಯಿತಿಯಿಂದ ಇಲ್ಲಿ ಕೇವಲ 40 ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಇಷ್ಟಾದರೂ ಇಲ್ಲಿನ ನಿವಾಸಿಗಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಿಲ್ಲ. ‘ನಮಲ್ಲಿ ಜನಸಂಖ್ಯೆ ಕಡಿಮೆ, ಓಟೂ ಕಡಿಮೆ ಆದ್ದರಿಂದ ಜನಪ್ರತಿನಿಧಿಗಳು ಇತ್ತ ಭೇಟಿ ನೀಡುವುದೂ ಕಡಿಮೆ, ಅಭಿವೃದ್ಧಿಯೂ ಕಡಿಮೆ’ ಎನ್ನುತ್ತಾರೆ ಹಾಡಿ ನಿವಾಸಿಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT