ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕೇಂದ್ರಕ್ಕೇ ‘ಅನಾರೋಗ್ಯ’!

Last Updated 1 ಸೆಪ್ಟೆಂಬರ್ 2017, 7:29 IST
ಅಕ್ಷರ ಗಾತ್ರ

ಸಿದ್ದಾಪುರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯಗಳು ಮರೀಚಿಕೆಯಾಗಿದ್ದು, ರೋಗಿಗಳ ಸಂಕಟ ಹೇಳ ತೀರದಾಗಿದೆ. ಈ ಆರೋಗ್ಯ ಕೇಂದ್ರವನ್ನು ಕೇವಲ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 25 ಸಾವಿರ ಜನರು ಮಾತ್ರ ಅವಲಂಬಿಸಿಲ್ಲ.ನೆಲ್ಯಹುದಿಕೇರಿ, ವಾಲ್ನೂರು– ತ್ಯಾಗತ್ತೂರು ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ಜನರ ಆರೋಗ್ಯವನ್ನು ಇದೇ ಆಸ್ಪತ್ರೆ ಕಾಪಾಡಬೇಕಿತ್ತು.

ದುಬಾರೆ, ಅವರೆಗುಂದ, ಬಸವನಹಳ್ಳಿ, ಚೆನ್ನಯ್ಯನಕೋಟೆ, ದೈಯದ ಹಡ್ಲು ಮುಂತಾದ ಗಿರಿಜನ ಹಾಡಿ ಮಂದಿಗೂ ಆರೋಗ್ಯ ಸೇವೆ ನೀಡಬೇಕು. ಆದರೆ, ಆರೋಗ್ಯ ಕೇಂದ್ರಕ್ಕೇ ಅನಾರೋಗ್ಯವಿದ್ದು, ರೋಗಿಗಳು ಪರದಾಡುವಂತಾಗಿದೆ.

ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆ ಹೊಂದಿರುವಷ್ಟೇ ಸೌಲಭ್ಯವನ್ನು ಸಿದ್ದಾಪುರದ ಆಸ್ಪತ್ರೆ ಹೊಂದಿರಬೇಕಿತ್ತು. ಆದರೆ, ಇಲ್ಲಿ ವೈದ್ಯರ ಕೊರತೆ ತೀವ್ರ ವಾಗಿದೆ. ಒಬ್ಬ ವೈದ್ಯಾಧಿಕಾರಿ ಸಂಪೂರ್ಣ ಆಸ್ಪತ್ರೆಯನ್ನು ನಿಭಾಯಿಸಬೇಕಾದ ಪರಿಸ್ಥಿತಿಯಿದೆ.

ಅನೇಕ ವರ್ಷಗಳಿಂದ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ವೈದ್ಯರ ಕೊರತೆಯನ್ನು ಎದುರಿಸುತ್ತಿದೆ. ಇಲ್ಲಿ ಪ್ರಸೂತಿ ತಜ್ಞರು, ಮಹಿಳಾ ವೈದ್ಯರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು... ಸೇರಿದಂತೆ ಒಟ್ಟು 6 ವೈದ್ಯರ ಅಗತ್ಯವಿದೆ.

ಹೊರರೋಗಿಗಳ ಶುಶ್ರೂಷೆ ಮಾತ್ರವಲ್ಲ; ಒಳ ರೋಗಿಗಳಾಗಿ ದಾಖಲಾಗುವ ರೋಗಿಗಳಿಗೂ ಒಬ್ಬರೇ ವೈದ್ಯರು ಚಿಕಿತ್ಸೆ ನೀಡಬೇಕು. ದಂತ ವೈದ್ಯರು ಆಸ್ಪತ್ರೆಗೆ ನೇಮಕಗೊಂಡಿದ್ದರೂ ಅಗತ್ಯ ಉಪಕರಣಗಳಿಲ್ಲ. ಈ ವ್ಯಾಪ್ತಿ ಅತಿಹೆಚ್ಚು ಕೂಲಿ ಕಾರ್ಮಿಕರಿದ್ದು, ಗುಣಮಟ್ಟದ ಆಸ್ಪತ್ರೆ ಅಗತ್ಯವಿದೆ.

ಕಾಫಿ, ಕರಿಮೆಣಸು, ಅಡಿಕೆ ಫಸಲು ಸಂದರ್ಭದಲ್ಲಿ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳದಿಂದಲೂ ಕಾರ್ಮಿಕರು ಇಲ್ಲಿಗೆ ಆಗಮಿಸುತ್ತಾರೆ. ಅವರು ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆ ಸಿಗದ ಸ್ಥಿತಿಯಿದೆ.

ಅನಾರೋಗ್ಯ ಪೀಡಿತ ಮಕ್ಕಳನ್ನು ಹೊತ್ತುಕೊಂಡು ಆಸ್ಪತ್ರೆಯ ನೆಲಹಾಸಿನ ಮೇಲೆ ಸಾಲುಗಟ್ಟಿ ಕುಳಿತ ತಾಯಂದಿರು ವೈದ್ಯರ ಬೇಟಿಗಾಗಿ ಎದುರು ನೋಡುತ್ತಾ ಕುಳಿತಿರುತ್ತಾರೆ. ಇತ್ತೀಚೆಗೆ ಶಾಸಕ ಕೆ.ಜಿ. ಬೋಪಯ್ಯ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಆಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT