ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗೆಟ್ಟ ಕಾಡಾನೆಗಳಿಂದ ದಿಕ್ಕೆಟ್ಟ ಜನಜೀವನ

Last Updated 13 ಆಗಸ್ಟ್ 2014, 9:36 IST
ಅಕ್ಷರ ಗಾತ್ರ

ಸಿದ್ದಾಪುರ:  ವಾರದ ಹಿಂದೆ ವಿದ್ಯುತ್‌ ಕಂಬದ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್‌ ಕಡಿತಗೊಂಡಿದೆ, ಸರಿಪಡಿಸಿ ಎಂದು ಕೋರಿ ಸೆಸ್ಕ್‌ಗೆ ಗ್ರಾಹಕರೊಬ್ಬರು ದೂರವಾಣಿ ಕರೆ ಮಾಡಿದರು. ಆದರೆ, ಸೆಸ್ಕ್‌ ಸಿಬ್ಬಂದಿ ವಿದ್ಯುತ್‌ ಕಂಬ ದುರಸ್ತಿ ಮಾಡಲು ಹಿಂದೇಟು ಹಾಕಿದರು. ಕಾರಣ ಸಿದ್ದಾಪುರ ಗ್ರಾಮ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಆನೆ ಹಿಂಡು.

ಕೆಲಸ ಮುಗಿಸಿ ಮನೆಗೆ ಹೋಗಬೇಕಿದ್ದ ಆಟೊ ಚಾಲಕರೊಬ್ಬರು, ಆ ರಾತ್ರಿ ಮನೆಗೆ ಮರಳದೇ ಆಟೊ ದಲ್ಲಿಯೇ ತಂಗಬೇಕಾಯ್ತು. ಕಾರಣ ಆನೆ ಹಾವಳಿ.
ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯಬ್ಬರನ್ನು ರಾತ್ರಿ ಆರೋಗ್ಯ ಕೇಂದ್ರಕ್ಕೆ ಸಾಗಿಸಲು ಕುಟುಂಬವೊಂದು ಹರಸಾಹಸ ಪಡಬೇಕಾಯ್ತು. ಕಾರಣ ಆನೆ ದಾಳಿ ಭಯ.

ಕೆಲ ದಿನಗಳ ಹಿಂದೆ ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ತಂದೆಯವರ ಮೇಲೆ ಹಾಡು ಹಗಲೇ ಮನೆಯ ಬಳಿ ಕಾಡಾನೆಯೊಂದು ದಾಳಿ ನಡೆಸಿತ್ತು. ಎರಡು ದಿನಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ಯುವಕನೊಬ್ಬನ ಮನೆಗೆ ಸಾಂತ್ವನ ಹೇಳಲು ಹೋದ ಸಮೀಪವರ್ತಿಗಳು ಅರ್ಧ ದಾರಿಯಲ್ಲಿ ಅನೆ ಹಿಂಡು ಕಂಡು ಮರಳಬೇಕಾಯ್ತು.

ಬೆಂಗಳೂರಿನಿಂದ ಸಂಬಂಧಿಕರ ಮನೆಗೆ ಬಂದ ಕುಟುಂಬವೊಂದು ರಾತ್ರಿ ಬಸ್‌ ಇಳಿದು ಬಾಡಿಗೆ ವಾಹನವೊಂದನ್ನು ಕರೆದರು. ಆದರೆ, ಚಾಲಕ ಬಾಡಿಗೆ ತೆರಳಲು ನಿರಾಕರಿಸಿದ. ಇಳಿ ಸಂಜೆಯಾಗುತ್ತಿದಂತೆ ವಾಹನ ಸಂಚಾರ ಸ್ಥಗಿತಗೊಂಡು ನಿಷೇಧಾಜ್ಞೆ ಹೇರಿದ ಪ್ರದೇಶವೆಂಬಂತೆ ಸಿದ್ದಾಪುರ ಪಟ್ಟಣ ಕಂಡು ಬರುತ್ತದೆ. ಕಾರಣ ಕಾಡಾನೆ ಭೀತಿ. ಬೆಂಗಳೂರಿನಿಂದ ಬಂದ ಕುಟುಂಬ ಮುಂಜಾನೆಯವರೆಗೆ ಬಸ್‌ ನಿಲ್ದಾಣದಲ್ಲಿ ಕಳೆಯುವಂತಹ ಪರಿಸ್ಥಿತಿ ತಲೆದೋರಿತ್ತು.

ಈ ಮೇಲೆ ಹೇಳಿದ ಘಟನೆಗಳು ಯಾವುದೇ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಅಥವ ಗಿರಿಜನರ ಹಾಡಿಗಳಲ್ಲಿ ನಡೆಯುತ್ತಿರುವ ಘಟನೆಗಳು ಅಲ್ಲ. ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ನಿತ್ಯ ಕಾಣುತ್ತಿರುವ ದೃಶ್ಯಾವಳಿ.

ಒಂದೆಡೆ ಸಿದ್ದಾಪುರ ಗ್ರಾಮ ಪಂಚಾಯಿತಿಯ ಜನಸಂಖ್ಯೆ ಹೆಚ್ಚಳವಾಗುತ್ತ  ಬರುತ್ತಿದೆ. ಆದುದರಿಂದ ಈ ವ್ಯಾಪ್ತಿಯನ್ನು ಮೇಲ್ದರ್ಜೆಗೆ ಏರಿಸಿ ಪಟ್ಟಣ ಪಂಚಾಯಿತಿಯನ್ನಾಗಿ ಪರಿವರ್ತಿಸಬೇಕೆಂಬ ಚಿಂತನೆ ಸ್ಥಳೀಯ ನಾಗರಿಕರಲ್ಲಿ, ಜನಪ್ರತಿನಿಧಿಗಳ ನಡುವೆ ಮೂಡುತ್ತಿದೆ. ಇದರ ಬೆನ್ನ ಹಿಂದೆಯೇ ಮಿತಿಮೀರಿದ ಆನೆ ಹಾವಳಿಯಿಂದ ಅರಣ್ಯ ಪ್ರದೇಶಗಳಲ್ಲಿ ಬದುಕುತ್ತಿದ್ದೇವೆಯೇ ಎಂಬ ಭಾವನೆ ಮೂಡಲಾರಂಭಿಸಿದೆ.

ಬಹುತೇಕ ವಿದ್ಯುತ್‌ ಮಾರ್ಗಗಳು ಕಾಫಿ ತೋಟಗಳ ನಡುವೆ ಹಾದು ಹೋಗಿರುವುದರಿಂದ ವಿದ್ಯುತ್‌ ಮಾರ್ಗ ಕಡಿತಗೊಂಡರೆ ಸೆಸ್ಕ್‌ ಸಿಬ್ಬಂದಿ ಕಾಫಿ ತೋಟಗಳ ಒಳಗೆ ಪ್ರವೇಶಿಸಿ ದುರಸ್ತಿ ಮಾಡಲು ಹಿಂದೇಟು ಹಾಕುತ್ತಾರೆ. ವಿದ್ಯುತ್‌ ಇಲ್ಲವೆಂದಾಕ್ಷಣ ಕುಡಿಯುವ ನೀರಿನ ಸರಬರಾಜು ನಿಂತು ಹೋಗುತ್ತದೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ, ಕೂಡುಗದ್ದೆ, ಕರಡಿಗೋಡು, ಮುಲ್ಲತೋಡು, ಅಂಬೇಡ್ಕರ್‌ ನಗರ, ಕಕ್ಕಟಕಾಡು, ಪಳ್ಳಕೆರೆ ನೆರೆಯ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠ, ನೆಲ್ಯಹುದೀಕೇರಿ ಗ್ರಾಮ ಪಂಚಾಯಿತಿ ಬೆಟ್ಟದಕಾಡು ಮುಂತಾದ ಗ್ರಾಮಗಳು ಆನೆಗಳ ಬೀಡಾಗಿವೆ. ಈ ಗ್ರಾಮಗಳೆಲ್ಲವೂ ಜನ ದಟ್ಟಣೆ ಹೊಂದಿರುವ ಗ್ರಾಮಗಳು. ಆದರೆ, ಆನೆ ಹಾವಳಿಗೆ ಬೆದರಿ ಜನಸಂಚಾರ, ವಾಹನ ಸಂಚಾರ ವಿರಳಗೊಂಡಿದೆ.

ಯಾವುದೇ ಕ್ಷಣದಲ್ಲಿ ಆನೆ ದಾಳಿಗೆ ತುತ್ತಾಗಬಹುದು ಎಂಬ ಭಯದ ವಾತಾವರಣದಲ್ಲಿ ಜನಸಾಮಾನ್ಯರು ಸಂಚರಿಸಬೇಕಿದೆ. ಎಳೆ ಕಂದಮ್ಮಗಳು ರಾತ್ರಿ ಅನಾರೋಗ್ಯ ಪೀಡಿತರಾದರೆಂದರೆ ಪೋಷಕರು ಪರದಾಡಬೇಕಾಗುತ್ತದೆ. ಕಾಫಿ ತೋಟ, ಭತ್ತ, ಬಾಳೆ ಕೃಷಿಗಳ ಸ್ಥಿತಿ ಅಸ್ತವ್ಯಸ್ಥಗೊಂಡಿದೆ. ಕಟಾವಿಗೆ ಬಂದ ಬಾಳೆ, ಶುಂಠಿ ಕಾಡಾನೆಗಳ ಅಟ್ಟಹಾಸಕ್ಕೆ ಬಲಿಯಾಗಿವೆ. ಕಾರ್ಮಿಕರು ಕಾಫಿ ತೋಟಗಳ ಒಳಗೆ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದಾರೆ.

ಕಾಫಿ ತೋಟಗಳಲ್ಲಿ ಮುಂದಿನ ಫಸಲು ಪ್ರಮುಖವಾಗಿ ಮಳೆಗಾಲದಲ್ಲಿ ನಡೆಯುವ ಕೃಷಿ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ. ಕಾಫಿ ಗಿಡಗಳು ಬೆಳೆದು ಉತ್ತಮ ಫಸಲು ನೀಡಲು ಅನುಕೂಲಕರವಾಗುವಂತೆ ಅನಗತ್ಯ ಕೊಂಬೆಗಳ ಕತ್ತರಿಸುವಿಕೆ, ಗಿಡದ ಕೆಳಭಾಗ ಬೆಳೆದಿರುವ ಕುರುಚಲು ಕಾಡುಗಳನ್ನು ನಾಶಮಾಡುವುದು, ಗೊಬ್ಬರ ಹಾಕುವುದು, ರಾಸಾಯನಿಕ ಸಿಂಪಡಿಸುವಿಕೆ, ಹೊಸ ಕಾಫಿ ಮತ್ತು ಕರಿಮೆಣಸಿನ ಬಳ್ಳಿಗಳನ್ನು ನೆಡುವುದು, ಅವಧಿ ಮುಗಿದ ಗಿಡಗಳನ್ನು ಕಿತ್ತು ಹಾಕುವುದು– ಹೀಗೆ ಅನೇಕ ಕೆಲಸಗಳು ಬೆಳೆಗಾರರಿಗೆ ಇರುತ್ತವೆ. ಆದರೆ, ಕಾಡಾನೆಗಳು ಕಾಫಿ ತೋಟಗಳನ್ನು ಪ್ರವೇಶಿಸಿ ಬೀಡುಬಿಟ್ಟಿರುವುದರಿಂದ ಯಾವುದೇ ಕೆಲಸಗಳು ಸರಿಯಾಗಿ ನಡೆಯದೇ ರೈತರು ಕಂಗೆಟ್ಟಿದ್ದಾರೆ.

ಈ ಎಲ್ಲಾ  ಗ್ರಾಮಗಳು ಸಿದ್ದಾಪುರ ಪಟ್ಟಣದ ಸಮೀಪದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿವೆ. ಆದರೆ, ಸಂಜೆಯಾಗುತ್ತಿದಂತೆ ರಾಜ್ಯ ಹೆದ್ದಾರಿ ಸೇರಿ ಇತರೆ ಗ್ರಾಮಗಳ ರಸ್ತೆಗಳ ಮೇಲೆ ಆನೆಗಳ ಹಿಂಡು ದನಕರುಗಳಂತೆ ಮೇಯುತ್ತ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಆನೆ ಹಾವಳಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ ಸ್ಥಿತಿ ಮಾತ್ರವಲ್ಲ ಶಿಕ್ಷಕರ ಸ್ಥಿತಿಯೂ ಬಿಗಡಾಯಿಸಿದೆ. ಅನೇಕ ಬಾರಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ರಸ್ತೆಯಲ್ಲಿ ಆನೆ ಹಿಂಡು ಕಂಡು ಮರಳಿ ಮನೆಗೆ ವಾಪಸ್‌ ಆದ ಘಟನೆಗಳು ನಡಯುತ್ತಿವೆ.

ಈ ವ್ಯಾಪ್ತಿಯ ಜನ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಪ್ರತಿಭಟನೆಯನ್ನು ಮಾಡಿದ್ದಾರೆ. ಕಾಡಿನಲ್ಲಿ ಕಂಗೆಟ್ಟು ನಾಡಿಗೆ ಲಗ್ಗೆ ಹಾಕಿರುವ ಆನೆಗಳು ಜನಜೀವನವನ್ನು ದಿಕ್ಕೆಡಿಸಿದೆ. ಆನೆಗಳನ್ನು ಕಾಡಿಗಟ್ಟಲು ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಸುಸ್ತಾದರೇ ಹೊರತು  , ಆನೆಗಳ ಹಾವಳಿಗೆ ಅಂಕುಶ ಬಿದ್ದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT