ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಅದ್ದೂರಿ ಹೂವಿನ ಕರಗ ಮಹೋತ್ಸವ

Published 6 ಮೇ 2024, 14:59 IST
Last Updated 6 ಮೇ 2024, 14:59 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ನರಸಾಪುರ ಗ್ರಾಮದ ಶ್ರೀಧರ್ಮರಾಯ ಸ್ವಾಮಿ ಮತ್ತು ದ್ರೌಪದಮ್ಮ ಹೂವಿನ ಕರಗ ಮಹೋತ್ಸವ ಭಾನುವಾರ ರಾತ್ರಿ ಅದ್ದೂರಿಯಿಂದ ನೆರವೇರಿತು.

ಶ್ರೀಧರ್ಮರಾಯ ಸ್ವಾಮಿ ದ್ರೌಪದಮ್ಮ ಕರಗ ಮಹೋತ್ಸವದ ಅಭಿವೃದ್ಧಿ ಟ್ರಸ್ಟ್ ಹಾಗೂ ತಿಗಳ ಯುವಕರ ಕ್ಷೇಮಾಭಿವೃದ್ಧಿ ಸಂಘದಿಂದ 93ನೇ ವರ್ಷದ ಹೂವಿನ ಕರಗ ಆಯೋಜಿಸಲಾಗಿತ್ತು.

ಕರಗ ಮಹೋತ್ಸವಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ ನೀಡಿದರು. ಸಾವಿರಾರು ಜನರ ಸಮೂಹದಲ್ಲಿ ಭಕ್ತಿ ಭಾವದಿಂದ ನಡೆಯಿತು.

ಕರಗ ಹೊತ್ತು ಪೂಜಾರಿ ಕುಪ್ಪಂ ಬಾಲಾಜಿ, ದೇವಾಲಯದಿಂದ ಹೊರಟು ನೃತ್ಯಕ್ಕಾಗಿ ಏರ್ಪಡಿಸಿದ್ದ ವೇದಿಕೆಯ ಮೇಲೇರಿದರು. ವಾದ್ಯ ಹಾಗೂ ತಮಟೆ ಮೇಳಕ್ಕೆ ಅವರು ವಿವಿಧ ರೀತಿಯ ನೃತ್ಯಗಳನ್ನು ಆಕರ್ಷಕವಾಗಿ ಕಂಗೊಳಿಸುವಂತೆ ಪ್ರದರ್ಶಿಸಿದರು. ಸುತ್ತ ಸೇರಿದ್ದ ಸಾವಿರಾರು ಮಂದಿ ವೀಕ್ಷಿಸಿದರು.

ಹೂವಿನ ಕರಗಕ್ಕೆ ನರಸಾಪುರ ಗ್ರಾಮದ ಪ್ರತಿಯೊಂದು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮನೆ ಮನೆಗಳಲ್ಲಿ ಮತ್ತು ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀಧರ್ಮರಾಯ ಸ್ವಾಮಿ ದ್ರೌಪದಮ್ಮ ದೇವಾಲಯದಲ್ಲಿ ದೇವರಿಗೆ ಹೂವಿನ ಅಲಂಕಾರ, ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಊರಿನಲ್ಲಿ ದೀಪಾಲಂಕಾರ ಹಾಗೂ ದೇವರ ಪಲ್ಲಕ್ಕಿ ಉತ್ಸವ, ಮಹಿಳೆಯರಿಂದ ದೀಪಾರಾಧನೆ ಸೇರಿದಂತೆ ವಿವಿಧ ದೈವಿಕ ಕೈಂಕರ್ಯಗಳು ನಡೆದವು. ಅದೇ ರೀತಿ ಸೋಮವಾರ ಅಗ್ನಿಕುಂಡ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಅದ್ದೂರಿ ಕರಗ ಮಹೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್, ಮುಖಂಡರಾದ ಲಕ್ಷ್ಮಣ್ ಗೌಡ , ಹೂಡಿ ವಿಜಯ ಕುಮಾರ್, ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೆ ಪದ್ಮಮ್ಮ, ಧರ್ಮರಾಯಸ್ವಾಮಿ ದ್ರೌಪದಮ್ಮ ಕರಗ ಮಹೋತ್ಸವದ ಅಭಿವೃದ್ಧಿ ಟ್ರಸ್ಟ್ ಹಾಗೂ ತಿಗಳ ಯುವಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ನರಸಾಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT