ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆ: ದೂಳಿನ ಮಜ್ಜನ

ಪ್ರಯಾಣಿಕರ ಪರದಾಟ l ಉಸಿರಾಟ ರೋಗಿಗಳಿಗೆ ಕಂಟಕ
Last Updated 21 ನವೆಂಬರ್ 2022, 7:16 IST
ಅಕ್ಷರ ಗಾತ್ರ

ಬಂಗಾರಪೇಟೆ: ಪಟ್ಟಣದ ಕೆಂಪೇಗೌಡ ವೃತ್ತದಿಂದ ಕಣಿಂಬೆಲೆ, ಬ್ಯಾಡಬೆಲೆ, ಸೂಲಿಕುಂಟೆ ಮೂಲಕ ಮಾಲೂರಿನತ್ತ ಸಾಗುವ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲದೆ ಈ ರಸ್ತೆ ಸಂಚಾರ ಪ್ರಾಣಕ್ಕೆ ಸಂಚಕಾರ ತರುವಂತಿದೆ.

ರಸ್ತೆಯ ಡಾಂಬಾರು ಕಿತ್ತುಬಂದಿದ್ದು, ರಸ್ತೆಯ ಉದ್ದಕ್ಕೂ ದೊಡ್ಡ ಗುಂಡಿಗಳಿವೆ. ಮಳೆಯಾದರೆ ರಸ್ತೆ ಕೆಲವೆಡೆ ಕೆಸರುಗದ್ದೆಯಾಗುತ್ತದೆ. ಬಿಸಿಲು ಕಾದರೆ ದೂಳಿನ ಮಜ್ಜನವಾಗಲಿದೆ. ಮಾಲೂರು, ಬೆಂಗಳೂರಿನತ್ತ ಸಾಗುವ ಈ ರಸ್ತೆ ಬಹುತೇಕ ಗ್ರಾಮಗಳ ಮಧ್ಯೆ ಹಾದುಹೋಗಿದೆ. ರಸ್ತೆ ಅಂಚಿನ ಮನೆಗಳಿಗೆ ನಿತ್ಯ ದೂಳಿನ ಕಿರಿಕಿರಿ ಆಗುತ್ತಿದೆ. ದೊಡ್ಡ ಅಂಕಂಡಹಳ್ಳಿ, ಕಣಿಂಬೆಲೆ ಯಳವಳ್ಳಿಗೇಟ್, ಬ್ಯಾಡಬೆಲೆ ದಿನ್ನೆ, ಸಿದ್ದನಹಳ್ಳಿ ಗೇಟ್, ಸೂಲಿಕುಂಟೆ ಗ್ರಾಮಗಳ ಮಧ್ಯೆ ರಸ್ತೆ ಹಾದುಹೋಗಿದೆ. ಈ ಗ್ರಾಮಗಳಲ್ಲಿ ನಿತ್ಯ ದೂಳಿನ ಕಿರಿಕಿರಿ ತಪ್ಪಿದ್ದಲ್ಲ.

ಸೂಲಿಕುಂಟೆ ಗ್ರಾಮದ ಪಕ್ಕದಲ್ಲಿ ಬೆಂಗಳೂರು-ಚೆನೈ ಕಾರಿಡಾರ್ ಎಕ್ಸಪ್ರೆಸ್ ಹೈವೇ ಕಾಮಗಾರಿ ಪ್ರಗತಿಯಲ್ಲಿದೆ. ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ನಿತ್ಯ ಇಡೀ ಗ್ರಾಮದಲ್ಲಿ ದೂಳು ಆವರಿಸುತ್ತಿದೆ. ಅಸ್ತಮಾದಂತ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತಷ್ಟು ಸಮಸ್ಯೆಗೆ ಸಿಲುಕಿದ್ದಾರೆ.
ಸೂಲಿಕುಂಟೆ ಗ್ರಾಮದಲ್ಲಿ ಸುಮಾರು 600 ಮನೆಗಳಿವೆ. ರೇಷ್ಮೆ, ಹೈನುಗಾರಿಕೆ, ವಾಣಿಜ್ಯ ಬೆಳೆಗಳು ಬೆಳೆದಿದ್ದಾರೆ. ಕಾರಿಡಾರ್ ರಸ್ತೆ ಕಾಮಗಾರಿ ಅವೆಲ್ಲದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಅಂಕುಡೊಂಕು ಹಾಗೂ ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಆಗ್ಗಾಗ್ಗೆ ಅಪಘಾತಗಳು ಸಂಭವಿಸುತ್ತಲೆ ಇವೆ. ದ್ವಿಚಕ್ರ ವಾಹನ ಸಂಚಾರವಂತೂ ಪ್ರಯಾಸಕರ. ಪಟ್ಟಣದಿಂದ ವಡಿಗೇರಿ ದಿನ್ನೆವರೆಗಿನ 10 ಕಿ.ಮೀ ರಸ್ತೆ ಎಂದು ದುರಸ್ತಿ ಮಾಡುತ್ತಾರೋ ಎನ್ನುವ ಪ್ರಶ್ನೆ ಈ ಭಾಗದವರನ್ನು ಕಾಡುತ್ತಿದೆ.

ನ.19ರಂದು ಈ ರಸ್ತೆಯ ಮಾಗೇರಿ ಗ್ರಾಮದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಹೂಡಿದ್ದರು. ದೂಳು ಹೆಚ್ಚು ಎನ್ನುವ ಕಾರಣಕ್ಕೆ 10 ಕಿಲೋ ಮೀಟರ್ ರಸ್ತೆ ಉದ್ದಕ್ಕೂ ನೀರು ಹಾಕಿದ್ದರು.

ಪಕ್ಕದ ಕೆರೆಗಳಿಂದ ಮಣ್ಣು ತೆಗೆದು ಟಿಪ್ಪರ್‌ಗಳ ಮೂಲಕ ಕಾರಿಡಾರ್ ರಸ್ತೆಗೆ ಹಾಕಲಾಗುತ್ತಿದೆ. ನಿತ್ಯ ಟಿಪ್ಪರ್‌ ಸಂಚಾರದಿಂದ ಇಲ್ಲಿನ ರಸ್ತೆಗಳು ಸಂಪೂರ್ಣ ಕಿತ್ತುಬಂದಿದೆ. ಕಣಿಂಬೆಲೆ ಹಾಗೂ ಸೂಲಿಕುಂಟೆ ಗ್ರಾಮಗಳ ಒಳಗೆ ರಸ್ತೆಗಳು ಹೆಚ್ಚಾಗಿ ಕಿತ್ತು ಹೋಗಿದೆ. ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ನೀಡುವ ಈ ರಸ್ತೆಯಲ್ಲಿ ನಿತ್ಯ ಸಂಪರ್ಕ ದಟ್ಟಣೆಯಿಂದ ಕೂಡಿರುತ್ತದೆ.

ಸೂಲಿಕುಟೆ, ಸಿದ್ದನಹಳ್ಳಿ ಪಕ್ಕ ಬೆಂಗಳೂರು-ಚೆನೈ ಎಕ್ಪ್ರೆಸ್ ಕಾರಿಡಾರ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಅದು ಮುಗಿಯುವ ತನಕ ಈ ರಸ್ತೆ ಅಭಿವೃದ್ಧಿ ಕಷ್ಟಸಾಧ್ಯ. ಸಂಬಂಧಿಸಿದ ಇಲಾಖೆ ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ ಎನ್ನುವುದು ಕ್ಷೇತ್ರ ಶಾಸಕರ
ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT