ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಭತ್ತದ ಹುಲ್ಲಿಗೆ ಭಾರೀ ಬೇಡಿಕೆ

Published 21 ಫೆಬ್ರುವರಿ 2024, 4:59 IST
Last Updated 21 ಫೆಬ್ರುವರಿ 2024, 4:59 IST
ಅಕ್ಷರ ಗಾತ್ರ

ಸಿಂಧನೂರು: ರಾಜ್ಯದಾದ್ಯಂತ ಈ ವರ್ಷ ಭೀಕರ ಬರ ಆವರಿಸಿರುವುದರಿಂದ ಭತ್ತದ ಹುಲ್ಲಿಗೆ ಬೇಡಿಕೆ ತೀವ್ರ ಹೆಚ್ಚಿದೆ.

ಬಾಗಲಕೋಟೆ ಜಿಲ್ಲಾ ವ್ಯಾಪ್ತಿಗೊಳಪಡುವ ಹಳ್ಳಿಗಳ ರೈತರೂ ಹುಲ್ಲು ಅರಸಿ ಸಿಂಧನೂರು ತಾಲ್ಲೂಕಿಗೆ ಬರುತ್ತಿದ್ದಾರೆ.

ಸಿಂಧನೂರು ತಾಲ್ಲೂಕಿನಲ್ಲಿ ಎರಡು ಬೆಳೆ ಬೆಳೆಯುತ್ತಿದ್ದ ರೈತರು ಈ ವರ್ಷ ಒಂದೇ ಬೆಳೆಗೆ ಸೀಮಿತವಾಗಿದ್ದಾರೆ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಇರುವುದರಿಂದ ಮುಂಗಾರು ಭತ್ತದ ಬೆಳೆ ಮಾತ್ರ ಬಂದಿದೆ. ಪ್ರತಿ ವರ್ಷ ಭತ್ತದ ಹುಲ್ಲನ್ನು ಸುಡುತ್ತಿದ್ದ ತಾಲ್ಲೂಕಿನ ಹಲವರು, ಇದೀಗ ಹುಲ್ಲು ಸಂಗ್ರಹಿಸಿ ಹೊರೆ ಕಟ್ಟಿ ದೊಡ್ಡ–ದೊಡ್ಡ ಬಣವೆ ಪೇರಿಸಿದ್ದಾರೆ. ಹುಲ್ಲಿನ ಪ್ರತಿ ಹೊರೆಗೆ ₹150 ದರ ನಿಗದಿ ಪಡಿಸಿ ಮಾರಾಟ ಮಾಡುತ್ತಿದ್ದಾರೆ. ಒಣ ಬೇಸಾಯದ ಕುಷ್ಟಗಿ, ಲಿಂಗಸುಗೂರು ತಾಲ್ಲೂಕಿನ ಕೆಲ ಹಳ್ಳಿಗಳ ರೈತರು ಹಿಂದೆಲ್ಲ ಉಚಿತವಾಗಿ ಹುಲ್ಲನ್ನು ಹೇರಿಕೊಂಡು ಹೋಗುತ್ತಿದ್ದರು. ಈ ವರ್ಷ ಆ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದ ತಿಂಗಳು ಪ್ರತಿ ಹೊರೆಗೆ ₹100 ಪಡೆಯುತ್ತಿದ್ದ ಭತ್ತ ಬೆಳೆಗಾರರು, ಹುಲ್ಲಿನ ಬೇಡಿಕೆ ಹೆಚ್ಚಿದಂತೆ ಇದೀಗ ₹150ಕ್ಕೆ ದರ ಹೆಚ್ಚಿಸಿದ್ದಾರೆ.

‘ಪ್ರತಿವರ್ಷ ಸಿಂಧನೂರು ತಾಲ್ಲೂಕಿನ ಗುಂಜಳ್ಳಿ ಗ್ರಾಮದಿಂದ ಹುಲ್ಲನ್ನು ಟ್ರ್ಯಾಕ್ಟರ್‌ನಲ್ಲಿ ಹೇರಿಕೊಂಡು ಹೋಗುತ್ತಿದ್ದೆವು. ಇಲ್ಲಿಯ ರೈತರೇ ಉಚಿತವಾಗಿ ಹೇರಿಕೊಂಡು ಹೋಗುವಂತೆ ಹೇಳುತ್ತಿದ್ದರು. ಈ ವರ್ಷ ಒಂದು ಟ್ರ್ಯಾಕ್ಟರ್ ಹುಲ್ಲಿಗೆ ₹4 ಸಾವಿರ ಕೊಟ್ಟಿದ್ದೇವೆ’ ಎಂದು ಕುಷ್ಟಗಿ ತಾಲ್ಲೂಕಿನ ಟೆಂಗುಂಟಿ ಗ್ರಾಮದ ರೈತ ನಿಂಗಪ್ಪ ಹೇಳಿದರು.

‘ಎಳ್ಳು ಅಮಾವ್ಯಾಸೆಗಿಂತ ಪೂರ್ವದಲ್ಲಿ ಒಂದು ಟ್ರ್ಯಾಕ್ಟರ್ ಹುಲ್ಲುನ್ನು ಖರೀದಿ ಮಾಡಿಕೊಂಡು ಹೋಗಿದ್ದೆವು. ಅದು ಮುಗಿದು ಹೋಯಿತು. ಪುನಃ ಹುಲ್ಲು ಕೊಂಡೊಯ್ಯಲು ಸಿಂಧನೂರು ತಾಲ್ಲೂಕಿಗೆ ಬಂದರೆ ಆಗ ಪ್ರತಿ ಹೊರೆಗೆ ₹100 ಇದ್ದದ್ದು, ಈಗ ₹150ಕ್ಕೆ ಏರಿದೆ. ಮುಂದಿನ ಮಳೆಗಾಲ ಬರುವ ತನಕ ದನಗಳನ್ನು ಸಾಕುವುದೇ ದುಸ್ತರವಾಗಿದೆ’ ಎಂದು ಹುಲ್ಲು ಖರೀದಿಸಲು ಬಂದ ಲಿಂಗಸುಗೂರು ತಾಲ್ಲೂಕಿನ ನಾಗಲಾಪುರ ಗ್ರಾಮದ ರೈತ ಶರಣಪ್ಪ ಅಳಲುತೋಡಿಕೊಂಡರು.

- ಮೇವಿನ ಕೊರತೆ ಇರುವ ಹೋಬಳಿ ಕೇಂದ್ರಗಳಲ್ಲಿ ಮೇವಿನ ಬ್ಯಾಂಕ್ ತೆರೆಯುವ ಮೂಲಕ ರೈತರಿಗಾಗಿರು ಮೇವಿನ ಬವಣೆಯನ್ನು ನೀಗಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು
- ಶರಣಪ್ಪ ಮಳ್ಳಿ, ಅಧ್ಯಕ್ಷ ರಾಜ್ಯ ರೈತ ಸಂಘದ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT