ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಜಾನೆ ಖಾಲಿ ಮಾಡಿದ್ದೇ ಕಾಂಗ್ರೆಸ್ ಸಾಧನೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

Published 29 ಏಪ್ರಿಲ್ 2024, 16:17 IST
Last Updated 29 ಏಪ್ರಿಲ್ 2024, 16:17 IST
ಅಕ್ಷರ ಗಾತ್ರ

ಕೋಣಂದೂರು: ‘ಅಭಿವೃದ್ಧಿಗಾಗಿ ಯಾವುದೇ ಕಾರ್ಯಕ್ರಮಗಳನ್ನು ರೂಪಿಸದೇ ಗ್ಯಾರಂಟಿಗಳಿಗಾಗಿ ₹52,000 ಕೋಟಿ ಸಾಲ ಮಾಡಿದ್ದೇ ಕಾಂಗ್ರೆಸ್ ಪಕ್ಷದ ಸಾಧನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಇಲ್ಲಿ ಸೋಮವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ರಚನೆಯಾಗಿ 11 ತಿಂಗಳು ಕಳೆದರೂ ಅಭಿವೃದ್ಧಿಗಾಗಿ ಒಂದು ಪೈಸೆಯನ್ನೂ ಕೊಡಲಿಲ್ಲ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುವುದು ಇವರ ಸಾಧನೆ. ದಲಿತರಿಗೆ ಮೀಸಲಿದ್ದ ಹಣವನ್ನು ಗ್ಯಾರಂಟಿಗಳಿಗೆ ವಿನಿಯೋಗಿಸುವ ಮೂಲಕ ದಲಿತರಿಗೆ ಮೋಸ ಮಾಡಿದ್ದಾರೆ. ಗ್ಯಾರಂಟಿ ಅನುಷ್ಠಾನಕ್ಕಾಗಿ ಮಾಡಿರುವ ಸಾಲದ ಹೊರೆಯನ್ನು ತೀರಿಸುವವರು ಯಾರು? ಎಂದು ಅವರು ಪ್ರಶ್ನಿಸಿದರು.

94 ಸದಸ್ಯರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಿದ್ದಾರೆ. ಅವರಿಗೆ ಲಕ್ಷಗಟ್ಟಲೆ ಸಂಬಳ, ಬೆಂಗಳೂರಿನಲ್ಲಿ ನಿವಾಸ ಕೊಡುವ ಮೂಲಕ ದುಂದುವೆಚ್ಚ ಮಾಡುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಮೇಲೆ ₹36,000 ಸಾಲ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಅವಧಿಯಲ್ಲಿ (2004-2014) ರಾಜ್ಯ ಸರ್ಕಾರ ₹19,500 ಕೋಟಿ ಬರಪರಿಹಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಆದರೆ ₹1,500 ಕೋಟಿ ನೀಡಿತ್ತು. ಮೋದಿ ಅವರ 8 ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ₹18,500 ಕೋಟಿ ಬೇಡಿಕೆ ಸಲ್ಲಿಸಿತ್ತು. ₹3,200 ಕೋಟಿಯನ್ನು ಮೋದಿ ಸರ್ಕಾರ ಮಂಜೂರು ಮಾಡಿದೆ ಎಂದು ವಿವರಿಸಿದರು.

‘ದೇಶದಲ್ಲಿಯೇ ಅತ್ಯಂತ ಪ್ರಜ್ಞಾವಂತ ಮತದಾರರಿರುವ ಕ್ಷೇತ್ರ ತೀರ್ಥಹಳ್ಳಿ. ನೀವು ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸುತ್ತೀರಿ ಎಂಬ ನಂಬಿಕೆ ನನಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ ಹೆದ್ದೂರು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಆರಗ ಜ್ಞಾನೇಂದ್ರ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕುಣಜೆ ಕಿರಣ್, ಮುಖಂಡರಾದ ರಘುಪತಿ ಭಟ್, ಬಾಳೆಬೈಲು ರಾಘವೇಂದ್ರ, ಪುಣ್ಯಪಾದ, ಬೇಗುವಳ್ಳಿ ಸತೀಶ್, ಸಾಲೆಕೊಪ್ಪ ರಾಮಚಂದ್ರ, ಕುಕ್ಕೆ ಪ್ರಶಾಂತ್, ಟಿ.ಮಂಜುನಾಥ್, ಅಪೂರ್ವ ಶರಧಿ ಪೂರ್ಣೇಶ್ ಇತರರು ಇದ್ದರು.

ಕೋಣಂದೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಸದ ಬಿ.ವೈ. ರಾಘವೇಂದ್ರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು
ಕೋಣಂದೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಸದ ಬಿ.ವೈ. ರಾಘವೇಂದ್ರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT