ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ| ನ್ಯಾ.ಸದಾಶಿವ ವರದಿ ಕೇಂದ್ರಕ್ಕೆ ಶಿಫಾರಸು ನಿರ್ಧಾರಕ್ಕೆ ವಿರೋಧ

Last Updated 27 ಮಾರ್ಚ್ 2023, 6:51 IST
ಅಕ್ಷರ ಗಾತ್ರ

ಶಿವಮೊಗ್ಗ: ನ್ಯಾಯಮೂರ್ತಿ ಎ.ಜೆ. ಸದಾಶಿವ ಅಯೋಗದ ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಶಿಕಾರಿಪುರ ತಾಲ್ಲೂಕಿನ ಹಲವು ತಾಂಡಾಗಳ ಎದುರು ವಿಧಾನಸಭೆ ಚುನಾವಣೆ ಬಹಿಷ್ಕಾರ ಕುರಿತಾದ ಫ್ಲೆಕ್ಸ್‌ಗಳು ಕಾಣಿಸುತ್ತಿವೆ.

ತಾಲ್ಲೂಕು ಕೇಂದ್ರ ಶಿಕಾರಿಪುರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲು ಬಂಜಾರ ಸಮುದಾಯ ಮುಂದಾಗಿದೆ.

ತಾಲ್ಲೂಕಿನ ಕುಸ್ಕೂರು ತಾಂಡಾ, ಬಿಳಕಿ, ಇಟ್ಟಿಗೆಹಳ್ಳಿ ಬಳ್ಳೂರು ತಾಂಡಾಗಳ ಪ್ರವೇಶ ದ್ವಾರದಲ್ಲಿ ‘ಹಮಾರೋ ತಾಂಡೊ ಹಮಾರೋ ರಾಜ್’ ಹೆಸರಿನ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ತಾಂಡಾಕ್ಕೆ ರಾಜಕೀಯ ಪಕ್ಷಗಳ ಮುಖಂಡರ ಪ್ರವೇಶ ಸಂಪೂರ್ಣ ನಿರ್ಬಂಧಿಸಲಾಗಿದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಸಾಮಾಜಿಕ ಜಾಲತಾಣದಲ್ಲೂ ಪೋಸ್ಟರ್‌ ಹರಿಬಿಡಲಾಗಿದೆ.

ಮುಖಂಡರಿಗೂ ಬಹಿಷ್ಕಾರದ ಭೀತಿ: ‘ಪ್ರತಿಭಟನೆಗೆ ಪೂರ್ವಭಾವಿಯಾಗಿ ಶಿಕಾರಿಪುರದಲ್ಲಿ ಭಾನುವಾರ ನಡೆದ ಸಭೆಗೆ ಹಾಲಿ, ಮಾಜಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಸಮಾಜದ ಮುಖಂಡರು ಯಾರು ಬರುವು
ದಿಲ್ಲವೋ ಅವರು ಚುನಾವಣೆ ಪ್ರಚಾರಕ್ಕೆ ತಾಂಡಾಗಳಿಗೆ ಬಿಟ್ಟುಕೊಳ್ಳಬಾರದು ಎಂಬ ನಿರ್ಧಾರ ಕೈಗೊಳ್ಳ
ಲಾಗಿತ್ತು. ನೀವು ಬರುತ್ತೀರೊ, ಇಲ್ಲವೋ ಸ್ಪಷ್ಟಪಡಿಸಿ ಎಂದು ತಾಕೀತು ಮಾಡಿದ್ದರಿಂದ ಬಹುತೇಕರು ಪಾಲ್ಗೊಂಡಿದ್ದೆವು’ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ, ಸಾಲೂರಿನ ಜಯಾನಾಯ್ಕ ಹೇಳಿದರು.

‘ನಮಗೆ ಅನ್ಯಾಯ ಆಗಲಿದೆ. ಚುನಾವಣೆಯಲ್ಲಿ ಮತ ಹಾಕುವುದು ಬೇಡ. ಬಹಿಷ್ಕರಿಸೋಣ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ನಾವು ಬಿಜೆಪಿಯಲ್ಲಿ ಇದ್ದವರು. ಪಕ್ಷದ ಪರ ಮಾತಾಡಲು ಹೋದರೆ ಗಲಾಟೆ ಆಗುತ್ತಿತ್ತು. ಹೀಗಾಗಿ ಏನೂ ಮಾತಾಡಲಾಗಲಿಲ್ಲ’ ಎಂದು ತಿಳಿಸಿದರು.

‘ಶಿಕಾರಿಪುರ ತಾಲ್ಲೂಕಿನಲ್ಲಿ 68 ತಾಂಡಾಗಳಿವೆ. ನಮಗೂ ಈ ವಿಚಾರದಲ್ಲಿ ವಿಷಾದ ಇದೆ. ರಾಘಣ್ಣ, ಬಿ.ಎಸ್.ಯಡಿಯೂರಪ್ಪ ನಮ್ಮ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದು ನಮಗೂ ನುಂಗಲಾರದ ತುತ್ತಾಗಿದೆ’ ಎಂದು ಅಳಲು ತೋಡಿಕೊಂಡರು.

‘ನಮ್ಮ ತಾಂಡಾದಲ್ಲಿ 125 ಮನೆಗಳಿವೆ. ನಾವ್ಯಾರೂ ಮತ ಹಾಕುವುದಿಲ್ಲ. ಯಾವುದೇ ಪಕ್ಷದವರು ನಮ್ಮೂರಿಗೆ ಬರುವಂತಿಲ್ಲ’ ಎಂದು ಬಹಿಷ್ಕರಿಸಿದ್ದೇವೆ’ ಎಂದು ಕುಸ್ಕೂರು ತಾಂಡಾದ ಲಕ್ಷ್ಮಣ ನಾಯ್ಕ ಹೇಳಿದರು.

ಪ್ರತಿಭಟನೆಯ ನಿರ್ಧಾರ

ಶಿಕಾರಿಪುರದ ಪ್ರವಾಸಿ ಮಂದಿರದಲ್ಲಿ ಭಾನುವಾರ ತಾಲ್ಲೂಕು ಬಂಜಾರ ಸಮಿತಿ ಅಧ್ಯಕ್ಷ ವಡ್ಡಿಗೇರಿ ಮಂಜುನಾಯ್ಕ ನೇತೃತ್ವದಲ್ಲಿ ತಾಂಡಾಗಳ ಪ್ರಮುಖರು ಸೇರಿ ಸರ್ಕಾರದ ನಿರ್ಧಾರದ ವಿರುದ್ಧ ಖಂಡನಾ ಸಭೆ ನಡೆಸಿದರು. ಈ ವೇಳೆ ಪ್ರತಿಭಟನೆಯ ನಿರ್ಧಾರ ಕೈಗೊಳ್ಳಲಾಗಿದೆ.

**

ಸರ್ಕಾರದ ಮೇಲಿನ ಸಿಟ್ಟಿಗೆ ತಾಂಡಾದ ಜನರು ಚುನಾವಣೆ ಬಹಿಷ್ಕಾರದ ಫ್ಲೆಕ್ಸ್‌ಗಳನ್ನು ಹಾಕಿದ್ದಾರೆ. ಶಿಕಾರಿಪುರದಲ್ಲಿ ಸೋಮವಾರ ನಡೆಯುವ ಪ್ರತಿಭಟನೆ ನಂತರ ಆ ಬಗ್ಗೆ ಚರ್ಚಿಸಲಾಗುವುದು.

ಸೈನಾಭಗತ್ ಮಹಾರಾಜ್, ಬಂಜಾರಾ ಸಮುದಾಯದ ಧರ್ಮಗುರು, ಮರಿಯಮ್ಮದೇವಿ ಮತ್ತು ಸೇವಾಲಾಲ್ ಮಠ, ಸಾಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT