ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡ್ಗಿಚ್ಚಿಗೆ ಕಡಿವಾಣ ಹಾಕಿದ ಅಕಾಲಿಕ ಮಳೆ

ಮಲೆನಾಡಿನಲ್ಲಿ ಹಸಿರು ಚಿಮ್ಮಿಸುತ್ತಿರುವ ವನದೇವಿ; ಅರಣ್ಯ ಇಲಾಖೆಯಿಂದ ಅಗ್ನಿ ನಂದಕ ಗೆರೆ
Last Updated 23 ಮೇ 2021, 5:34 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಏಪ್ರಿಲ್, ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಮಲೆನಾಡಿನಲ್ಲಿ ಕಾಡ್ಗಿಚ್ಚಿಗೆ ಕಡಿವಾಣ ಬಿದ್ದಿದೆ. ಬಿರು ಬೇಸಿಗೆಯಲ್ಲಿ ಸುರಿದ ಮಳೆಯಿಂದಾಗಿ ಮಲೆನಾಡಿನ ಕಾಡಿನಲ್ಲಿ ಹಸಿರು ಚಿಮ್ಮಿದೆ.

ಪಶ್ಚಿಮಘಟ್ಟ ಸಾಲಿನ ಆಗುಂಬೆ ಸುತ್ತಮುತ್ತಲ ನಿತ್ಯಹರಿದ್ವರ್ಣದ ಪ್ರದೇಶವನ್ನು ಹೊರತುಪಡಿಸಿ ಎಲೆ ಉದುರುವ ಕಾಡುಗಳಲ್ಲಿ ಯಾವ ಹೊತ್ತಿನಲ್ಲಾದರೂ ಕಾಡಿಗೆ ಬೆಂಕಿ ತಗಲುವ ಭೀತಿ ಹೆಚ್ಚಿತ್ತು. ಈ ಬಾರಿ ಆಗಾಗ್ಗೆ ಸುರಿದ ಮಳೆ ಕಾಡಿಗೆ ಬೆಂಕಿ ತಗುಲದಂತೆ ತಡೆದಿದೆ.

ತಾಲ್ಲೂಕಿನ ಮಂಡಗದ್ದೆ, ಮುತ್ತೂರು, ಅಗ್ರಹಾರ ಹಾಗೂ ಕಸಬಾ ಹೋಬಳಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಎಲೆ ಉದುರುವ ಮರಗಳಲ್ಲಿ ಹೊಸ ಚಿಗುರು ಚಿಮ್ಮಿದೆ. ನೆಲಕ್ಕೆ ಬಿದ್ದ ತರಗೆಲೆ ಬಿಸಿಲಿನ ತೀವ್ರತೆಗೆ ಒಣಗಿ ಬೆಂಕಿ ತಗುಲಿದರೆ ಇಡೀ ಕಾಡು ಸುಟ್ಟು ಕರಕಲಾಗುವ ಭೀಕರ ಪರಿಸ್ಥಿತಿಯನ್ನು ಮಳೆ ತಪ್ಪಿಸಿದೆ.

ಅರಣ್ಯ ಇಲಾಖೆಯು ಸಾರ್ವಜನಿಕರು ಕಾಡನ್ನು ಸಂಪರ್ಕಿಸುವ ರಸ್ತೆ ಮಾರ್ಗದಲ್ಲಿ ಬಿದ್ದಿರುವ ತರಗೆಲೆಗಳನ್ನು ಗುಡಿಸಿ ಬೆಂಕಿ ತಡೆಗಟ್ಟಲು ಅಗ್ನಿ ನಂದಕ ಗೆರೆಗಳನ್ನು (ಫೈರ್ ಲೈನ್) ಆಯಕಟ್ಟಿನ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಿತ್ತು. ಕಾಡಿಗೆ ಬೆಂಕಿ ತಗುಲದಂತೆ ಎಚ್ಚರಿಕೆ ಕ್ರಮದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಮಾಡಿತ್ತು. ಬೇಸಿಗೆ ಹೊತ್ತಲ್ಲಿ ಸುರಿದ ಮಳೆ, ಮೋಡ ಕವಿದ ವಾತಾವರಣ ಕಾಡ್ಗಿಚ್ಚನ್ನು ತಡೆಯುವ ಅರಣ್ಯ ಇಲಾಖೆ ಕೆಲಸಕ್ಕೆ ವಿರಾಮ ಹೇಳಿದೆ.

ಮಳೆಗಾಲ ಅರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಅಲ್ಲಿವರೆಗೆ ಕಾಡಿಗೆ ಬೆಂಕಿ ತಗುಲದಂತೆ ಎಚ್ಚರವಹಿಸುವ ಅಗತ್ಯವಿದೆ. ಈಗಾಗಲೇ ಹದ ಮಳೆ ಬಿದ್ದ ಪರಿಣಾಮ ಮಲೆನಾಡಿನ ಕಾಡು ಸಂಪೂರ್ಣ ತೇವಗೊಂಡಿದೆ.

ಮೂರು ವರ್ಷಗಳ ಹಿಂದೆ ತಾಲ್ಲೂಕಿನ ಕೋಣಂದೂರು ಭಾಗದ ದೇಮ್ಲಾಪುರ, ಅಗಸರಕೊಪ್ಪ, ಕನ್ನಂಗಿ, ಹಣಗೆರೆಕಟ್ಟೆಯ ಕೆಲ ಭಾಗ ಕಾಡ್ಗಿಚ್ಚಿಗೆ ತುತ್ತಾಗಿತ್ತು. ಕಾಡಂಚಿನ ಮನೆ, ಅಡಿಕೆ ತೋಟಗಳಿಗೆ ಹಾನಿ ಸಂಭವಿಸಿತ್ತು. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಕಾಡುಪ್ರಾಣಿಗಳು ಜೀವ ಕಳೆದುಕೊಂಡಿದ್ದವು.

ಈಗ ಮಳೆ ಬಿದ್ದು ತರಗೆಲೆಗಳು ತೇವಗೊಂಡಿರುವುದರಿಂದ ಕಾಡಿನಲ್ಲಿ ಹಸಿರು ಹೆಚ್ಚಿದ್ದರೂ ಕಳ್ಳಬೇಟೆಗಾರರಿಗೆ ಕಾಡುಪ್ರಾಣಿಗಳು ಸುಲಭವಾಗಿ ಸಿಗುತ್ತಿವೆ. ಕಾಡ್ಗಿಚ್ಚು ಹಾಗೂ ಕಳ್ಳಬೇಟೆಯಿಂದ ವನ್ಯಜೀವಿಗಳು ಜೀವ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಅರಣ್ಯ ಇಲಾಖೆ ಕಣ್ಣು ತಪ್ಪಿಸಿ ವನ್ಯಜೀವಿಗಳನ್ನು ಮಾಂಸ, ಕೊಂಬು, ಉಗುರು,
ಚರ್ಮಕ್ಕಾಗಿ ಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪರಿಸರ ಪ್ರೇಮಿ ರಮೇಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT