ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಸವಾರರನ್ನು ಸೆಳೆಯುತ್ತಿದೆ ಬೈಸಿಕಲ್‌ ಟ್ರಿಣ್.. ಟ್ರಿಣ್..

30 ಕಡೆ ಬೈಸಿಕಲ್ ನಿಲುಗಡೆ ಕೇಂದ್ರ, ಜಿಪಿಎಸ್ ಆಧಾರಿತ ವ್ಯವಸ್ಥೆ
Published 22 ಫೆಬ್ರುವರಿ 2024, 5:12 IST
Last Updated 22 ಫೆಬ್ರುವರಿ 2024, 5:12 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸ್ಮಾರ್ಟ್ ಸಿಟಿ ಪರಿಕಲ್ಪನೆಯಲ್ಲಿ ಸಾರ್ವಜನಿಕ ಬೈಸಿಕಲ್‌ (ಪಿಬಿಎಸ್‌) ಯೋಜನೆಗೆ ನಗರದ ಜನತೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ. ಪ್ರತಿ ದಿನ  100 ಕ್ಕೂ ಹೆಚ್ಚು ಜನರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

ನಗರದಲ್ಲಿ ₹4.43 ಕೋಟಿ ವೆಚ್ಚದಲ್ಲಿ ಒಟ್ಟು 30 ಬೈಸಿಕಲ್ ನಿಲುಗಡೆ ಕೇಂದ್ರ ತೆರೆದು, 300 ಬೈಸಿಕಲ್ ಇರಿಸಲಾಗಿದೆ. ಇದರಿಂದ, ಸಾರ್ವಜನಿಕರು ದಿನದ 24 ಗಂಟೆಯೂ ಇದರ ಸೇವೆ ಪಡೆಯಬಹುದಾಗಿದೆ.

‘ಪ್ರತಿ ನಿಲುಗಡೆ ಕೇಂದ್ರದಲ್ಲಿ 10 ಬೈಸಿಕಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಪಿಎಸ್‌ ಆಧರಿತ 270 ಪೆಡಲ್‌ ಅಸಿಸ್ಟ್‌ ಸೈಕಲ್‌ ಗಳು ಹಾಗೂ 30 ಎಲೆಕ್ಟ್ರಿಕ್ ಬೈಸಿಕಲ್ ಗಳು ಸೇವೆ ಒದಗಿಸುತ್ತಿವೆ. ಸೀಮಿತ ದರ ಪಾವತಿಸಿ ಸಾರ್ವಜನಿಕರು ಬೈಸಿಕಲ್ ಬಳಸಬಹುದಾಗಿದೆ.

ಬಾಡಿಗೆ ದರ: ಬೈಸಿಕಲ್‌ ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಆದ್ದರಿಂದ, ಕಳವು ಮಾಡಲು ಸಾಧ್ಯವಿಲ್ಲ. ಪೆಡಲ್‌ ಅಸಿಸ್ಟ್‌ ಸೈಕಲ್‌ ಗೆ ಭದ್ರತಾ ಶುಲ್ಕ ₹350 ಪಾವತಿಸಿ‌ ಪ್ರತಿ 30 ನಿಮಿಷಕ್ಕೆ ₹10 ಹಾಗೂ ಎಲೆಕ್ಟ್ರಿಕ್ ಸೈಕಲ್ ಬಳಸಲು ಪ್ರತಿ 30 ನಿಮಿಷಕ್ಕೆ ₹20 ಪಾವತಿಸಬೇಕು. ಇಲ್ಲಿ ಭದ್ರತಾ ಶುಲ್ಕ ಹಿಂಪಡೆಯುವ ಅವಕಾಶ ಕಲ್ಪಿಸಲಾಗಿದೆ. ಮಾಸಿಕ ₹150 ಪಾವತಿಸಿ ಸದಸ್ಯತ್ವ ಪಡೆದವರಿಗೆ ಪ್ರತಿ 30 ನಿಮಿಷ ಸಂಪೂರ್ಣ ಉಚಿತ. ನಂತರ ₹5 ‍ಪಾವತಿಸಬೇಕು. ವಾರ್ಷಿಕ ಸದಸ್ಯತ್ವ ಪಡೆಯಲು ₹1000 ದರ ನಿಗದಿ ಪಡಿಸಲಾಗಿದೆ ಎಂದು ಪಿಬಿಎಸ್‌ ಯೋಜನೆಯ ಪ್ರಾದೇಶಿಕ ಜಿಲ್ಲಾ ವ್ಯವಸ್ಥಾಪಕ ಪಿ. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾಸಗಿ ಕಂಪನಿಯೊಂದು 5 ವರ್ಷದ ಅವಧಿಗೆ ಬೈಸಿಕಲ್ ನಿರ್ವಹಣೆಯ ಹೊಣೆ ಹೊತ್ತಿದೆ. ಎರಡು ವರ್ಷಕ್ಕೊಮ್ಮೆ ಸಂಸ್ಥೆಯು ಬೈಸಿಕಲ್ ಗಳನ್ನು ಬದಲಿಸಲಿದೆ. ಅದೇ ರೀತಿ ಹೆಚ್ಚಿನ ನೆರಳಿರುವ ಪ್ರದೇಶಗಳಲ್ಲಿ ಬೈಸಿಕಲ್ ನಿಲುಗಡೆ ಕೇಂದ್ರಗಳ ತೆರೆಯಲಾಗಿದೆ. ಆದ್ದರಿಂದ, ಬೈಸಿಕಲ್ ನಿಲುಗಡೆ ಕೇಂದ್ರಗಳಿಗೆ ಛಾವಣಿ ವ್ಯವಸ್ಥೆ ಮಾಡಿಲ್ಲ‘ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ತಿಳಿಸಿದರು.

‘ಯೋಜನೆ ಕುರಿತ ಸಮರ್ಪಕ ಮಾಹಿತಿ ಮಹಿಳೆಯರಿಗೆ ಇಲ್ಲ. ಹೆಚ್ಚಿನದಾಗಿ ಪುರುಷರೇ ಬೈಸಿಕಲ್ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. ಅದೇ ರೀತಿ, ಮಹಿಳೆಯರಲ್ಲಿ ಬೈಸಿಕಲ್ ಬಳಸಲು ಮುಜುಗರ ಹಾಗೂ ಬೈಸಿಕಲ್ ನಿರ್ವಹಣೆಯ ಕುರಿತ ಭಯವಿದೆ. ಆದ್ದರಿಂದ, ಮಹಿಳೆಯರು ಯೋಜನೆಯ ಪ್ರಯೋಜನ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಹೆಚ್ಚಿನ ಅರಿವು ಮೂಡಿಸಬೇಕು’ ಎಂದು ಸ್ಥಳೀಯರಾದ ಬಿ.ತನುಜ ಅಂತರಗಂಗೆ ಪ್ರಜಾವಾಣಿಗೆ ತಿಳಿಸಿದರು.

ಖಾಸಗಿ ಬಸ್ ನಿಲ್ದಾಣದಿಂದ ನಗರದ ಕೇಂದ್ರ ಗ್ರಂಥಾಲಯಕ್ಕೆ ಪ್ರತಿ ದಿನ 2 ಕಿ.ಮೀ ನಡೆದು ಬರಬೇಕಿತ್ತು. ಆದರೆ, ಈ ಎರಡೂ ಪ್ರದೇಶದಲ್ಲಿ ಬೈಸಿಕಲ್ ನಿಲುಗಡೆ ಕೇಂದ್ರ ತೆರೆಯಲಾಗಿದೆ. ಇದರಿಂದ, ಬಸ್ ನಿಲ್ದಾಣದಿಂದ ಕೊಂಡೋಯ್ದ ಬೈಸಿಕಲ್ ಅನ್ನು ಗ್ರಂಥಾಲಯದ ಬಳಿ ನಿಲ್ಲಿಸಿ, ಓದು ಮುಗಿದ ಬಳಿಕ ಸಯಂಕಾಲ ಇನ್ನೊಂದು ಬೈಸಿಕಲ್ ಪಡೆದು ಬಸ್ ನಿಲ್ದಾಣಕ್ಕೆ ತೆರಳುತ್ತೇನೆ. ಯೋಜನೆಯಿಂದ ಸಹಕಾರ ಆಗಿದೆ ಎಂದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಅಭ್ಯರ್ಥಿ ವಿನಾಯಕ ಮೈಯ್ಯಳ್ಳಿ ತಿಳಿಸಿದರು.

ಪಾದಚಾರಿ ಮಾರ್ಗ ಹಾಗೂ ಬೈಸಿಕಲ್‌ ಪಾಥ್ ಮೇಲೆ ವಾಹನ ಪಾರ್ಕಿಂಗ್ ಸೇರಿದಂತೆ ಸಿಮೆಂಟ್ ಜೆಲ್ಲಿ ಸುರಿಯಲಾಗಿದೆ. ಇದನ್ನು ತೆರವುಗೊಳಿಸಲು ಶೀಘ್ರದಲ್ಲಿ ಆದೇಶ ನೀಡಿ ಕ್ರಮ ಕೈಗೊಳ್ಳಲಾಗುವುದು

–ಮಾಯಣ್ಣ ಗೌಡ ಆಯುಕ್ತರು ಮಹಾನಗರ ಪಾಲಿಕೆ 

ಪಿಬಿಎಸ್‌ ಯೋಜನೆ: ₹ 3 ಲಕ್ಷ ಆದಾಯ

ಯೋಜನೆಗೆ ಫೆ. 1ರಿಂದ ಫೆ. 21ರವರೆಗೆ ಒಟ್ಟು 1640 ಜನರು ಸದಸ್ಯತ್ವ ಪಡೆದಿದ್ದು ಸಾರ್ವಜನಿಕರಿಂದ ಒಟ್ಟು ‌₹3 ಲಕ್ಷ ಕ್ಕೂ ಹೆಚ್ಚು ಆದಾಯ ಸಂದಾಯ ಆಗಿದೆ. ಇಲ್ಲಿಯವರೆಗೆ ನಗರ ವ್ಯಾಪ್ತಿಯ 30 ಬೈಸಿಕಲ್ ಕೇಂದ್ರಗಳಿಂದ 10000 ಕಿ.ಮೀ ನಷ್ಟು ಸೈಕಲ್ ಸವಾರರು ಸಂಚರಿಸಿದ್ದು ಸಾರ್ವಜನಿಕರು ಹೆಚ್ಚಿನದಾಗಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಯಣ್ಣ ಗೌಡ ತಿಳಿಸಿದರು.

ಬೈಸಿಕಲ್: ಪ್ರವಾಸಿ ತಾಣ ವೀಕ್ಷಣೆಗೆ ಬಳಕೆ ನಗರದಲ್ಲಿ 10 ಕಿ.ಮೀ ವ್ಯಾಪ್ತಿಗೆ ಮಾತ್ರ ಬೈಸಿಕಲ್ ಸೇವೆ ಒದಗಿಸಲು ಯೋಚಿಸಲಾಗಿತ್ತು. ಆದರೆ ವಾರಂತ್ಯದಲ್ಲಿ ಹಿರಿಯ ನಾಗರೀಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಬೈಸಿಕಲ್ ಸವಾರಿ ನಡೆಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಕೆಲವರು ಸಕ್ರೇಬೈಲು ಸೇರಿದಂತೆ ಪ್ರವಾಸಿ ತಾಣಗಳ ವೀಕ್ಷಣೆಗೆ ಬೈಸಿಕಲ್ ಬಳಸುವುದಾಗಿ ಅವಕಾಶ ಕೇಳಿದ್ದರು. ಇದಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಬೈಸಿಕಲ್ ಸವಾರರು ಸುರಕ್ಷಿತವಾಗಿ ಹಿಂದಿರುಗುವವರೆಗೆ ನಮ್ಮ ಸಿಬ್ಬಂದಿ ಸಂಪರ್ಕದಲ್ಲಿರುವರು ಎಂದು ಪಿ. ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT