ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಶಾಲಾ ವಿದ್ಯಾರ್ಥಿಗಳಿಗೆ ಕಾಲ್ನಡಿಗೆಯ ಶಿಕ್ಷೆ

ಗ್ರಾಮೀಣ ಭಾಗಗಳಿಗೆ ಇಲ್ಲದ ಬಸ್: 10 ಕಿ.ಮೀ. ನಡೆಯಬೇಕಾದ ಪರಿಸ್ಥಿತಿ
Last Updated 18 ನವೆಂಬರ್ 2021, 4:25 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮಲೆನಾಡಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲಾ, ಕಾಲೇಜು ಆರಂಭವಾಗಿದ್ದರೂ ಬಸ್ ಇಲ್ಲದೆ 8-10 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾದ ಪರಿಸ್ಥಿತಿ ಇದೆ.

ಕೊರೊನಾ ಕಾರಣದಿಂದ ಸ್ಥಗಿತವಾಗಿದ್ದ ಬಸ್ ಸಂಚಾರ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳು, ಜನರು ಆಟೊ ಅಥವಾ ಸ್ನೇಹಿತರ ಬೈಕ್‌ಗಳಿಗೆ ಪೀಡಿಸಬೇಕು. ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಓದಿನ ಜತೆ ತರಾತುರಿಯಲ್ಲಿ ಶಾಲಾ, ಕಾಲೇಜಿಗೆ ಹೋಗುವ ಸಿದ್ಧತೆ ಮಾಡಿಕೊಳ್ಳುವ ಅನಿವಾರ್ಯ ಸೃಷ್ಟಿಯಾಗಿದೆ.

ಕೋವಿಡ್ ಕಾರಣದಿಂದ ಒಂದೂವರೆ ವರ್ಷದಿಂದ ಆದ ನಷ್ಟಕ್ಕೆ ಬಸ್ ಮಾಲೀಕರು ಕಂಗಾಲಾಗಿದ್ದಾರೆ. ಮುಂಚೆ ಇದ್ದ ಬಸ್ ಈಗ ಹಳ್ಳಿಯಲ್ಲಿ ಸಂಚರಿಸುತ್ತಿಲ್ಲ. ಕೆಲವು ಕಡೆ ಬಸ್ ಸಂಚಾರವೇ ಇಲ್ಲದೇ ಪರದಾಡುವಂತಾಗಿದೆ. ಸಂಚಾರಕ್ಕೆ ಆಗುತ್ತಿರುವ ತೊಂದರೆ ಪರಿಹಾರಕ್ಕೆ ಆಡಳಿತ ಕ್ರಮ ವಹಿಸುತ್ತಿಲ್ಲ ಎಂಬುದು ಗ್ರಾಮೀಣ ಜನರ, ವಿದ್ಯಾರ್ಥಿಗಳ ದೂರಾಗಿದೆ.

ಗ್ರಾಮೀಣ ಭಾಗಗಳಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು 5ನೇ ತರಗತಿ ನಂತರ ಬಸ್ ಏರುವುದಕ್ಕೆ ಆರಂಭಿಸಬೇಕು. ಆದರೆ 6ನೇ ತರಗತಿ ಓದುವ ಶಿಕ್ಷೆಯ ಜೊತೆಗೆ ಕಾಲ್ನಡಿಗೆ ಶಿಕ್ಷೆ ಕೂಡ ಅನುಭವಿಸಬೇಕು. ಪೋಷಕರಿಗೂ ಶಾಲೆಗೆ ಕಳುಹಿಸುವ ಪ್ರಸಂಗ ಕಿರಿಕಿರಿಗೆ ಕಾರಣವಾಗಿದೆ.

ಪಟ್ಟಣದ ಸಮೀಪದ ಹೆಗ್ಗೆಬೈಲು–ಆಲ್ಬಳ್ಳಿ-ಹೊನ್ನಾನಿ-ಹುಲಿಗುದ್ದು ಮಾರ್ಗ ಮಧ್ಯೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಗ್ರಾಮೀಣ ಭಾಗದಿಂದ ಹೆಚ್ಚು ಜನ ಸಂಚಾರ ಮಾಡುವ ಬಾಳಗಾರು-ಮಹಿಷಿ–ದಬ್ಬಣಗದ್ದೆ–ಹಾರೆಕೊಪ್ಪ ಮಾರ್ಗ, ಕಟ್ಟೆಹಕ್ಕಲು-ಮೃಗವಧೆ, ಶೇಡ್ಗಾರು-ಸಾಲ್ಗಡಿ ಮಾರ್ಗ, ಆಗುಂಬೆ-ಮಲ್ಲಂದೂರು-ಆಲಗೇರಿ ಮಾರ್ಗ, ಹುಂಚದಕಟ್ಟೆ -ಕೋಣಂದೂರು ಮಾರ್ಗ, ಆಗುಂಬೆ-ಮಲ್ಲಂದೂರು-ಹೊನ್ನೇತಾಳು-ಆಲಗೇರಿ ಮಾರ್ಗ, ಬಾಂಡ್ಯ-ಕುಕ್ಕೆ-ಬೆಜ್ಜವಳ್ಳಿ-ದತ್ತರಾಜಪುರ-ಸಾಲೇಕೊಪ್ಪ ಮಾರ್ಗ, ಸಾಲೂರು-ಕೊಂಡ್ಲೂರು ಮಾರ್ಗ, ದೇಮ್ಲಾಪುರ-ಯೋಗಿಮಳಲಿ –ಕಾರಕೋಡ್ಲು-ಮಳಲೀಮಕ್ಕಿ-ಆಲೂರು ಹೊಸಕೊಪ್ಪ-ಹುತ್ತಳ್ಳಿ ಮಾರ್ಗ ಸೇರಿದಂತೆ ಬಹುತೇಕ ಕಡೆಗೆ ಬಸ್ ಸಂಚಾರ ಇಲ್ಲವಾಗಿದೆ.

ಪ್ರತಿ ನಿತ್ಯ ವಿದ್ಯಾರ್ಥಿಗಳು ಸುಮಾರು ದೂರ ಕಾಲ್ನಡಿಗೆಯಲ್ಲಿ ಕಾಡುದಾರಿಯಲ್ಲಿ ಕ್ರಮಿಸಿ ಮುಖ್ಯ ರಸ್ತೆ ತಲುಪಿ ಬಸ್ ನಲ್ಲಿ ಶಾಲಾ, ಕಾಲೇಜಿಗೆ ಹೋಗಬೇಕಿದೆ. ಮಂಗನ ಕಾಯಿಲೆ ಪ್ರತಿ ಬೇಸಿಗೆಯಲ್ಲಿ ತೀವ್ರವಾಗಿ ಬಾಧಿಸುವ ಪ್ರದೇಶಗಳಿಗೂ ಬಸ್ ಸೌಕರ್ಯ ನೀಡದೆ ಗ್ರಾಮೀಣ ಭಾಗದ ಜನರನ್ನು ನಿರ್ಲಕ್ಯ್ಯ ಮಾಡಲಾಗಿದೆ ಎಂಬ ಆರೋಪಕ್ಕೆ ಆಡಳಿತ ಗುರಿಯಾಗಿದೆ.

‘ಮಲೆನಾಡಿನ ಕಾಡಿನ ನಡುವೆ ವಿದ್ಯಾರ್ಥಿನಿಯರು ಪ್ರತಿ ನಿತ್ಯ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗಬೇಕಿದ್ದು, ಸುರಕ್ಷತೆಯ ದೃಷ್ಟಿಯಿಂದ ಕಷ್ಟ ಎಂಬ ಕಾರಣಕ್ಕೆ ಶಾಲೆಗೆ ಹೋಗುವುದನ್ನು ನಿಲ್ಲಿಸುವಂತಾಗಿದೆ. ಮಳೆಗಾಲದಲ್ಲಿ ಶಾಲಾ, ಕಾಲೇಜಿಗೆ ಹೋಗುವುದು ತುಂಬಾ ಕಷ್ಟ’ ಎನ್ನುತ್ತಾರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT