ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದುಗೆ ಏರಲು ಸಜ್ಜಾದ ‘ತೆನೆ ಹೊತ್ತ ಮಹಿಳೆ’

Last Updated 8 ಆಗಸ್ಟ್ 2016, 7:08 IST
ಅಕ್ಷರ ಗಾತ್ರ

ಸೊರಬ: ಬಹಳಷ್ಟು ಕುತೂಹಲ ಮೂಡಿಸಿರುವ ಇಲ್ಲಿನ ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಆ.9ರಂದು ಚುನಾವಣೆ ನಡೆಯಲಿದ್ದು, ನಿರೀಕ್ಷೆಯಂತೆಯೇ ಜೆಡಿಎಸ್ ಅಧಿಕಾರ ಹಿಡಿಯುವುದು ಖಚಿತವಾಗಿದೆ.

ತಾಲ್ಲೂಕು ಪಂಚಾಯ್ತಿಯಲ್ಲಿ ಒಟ್ಟು 19 ಸ್ಥಾನಗಳಿವೆ. ಈ ಪೈಕಿ ಜೆಡಿಸ್ 11, ಬಿಜೆಪಿ ಐದು ಹಾಗೂ ಕಾಂಗ್ರೆಸ್ ಮೂರು ಸ್ಥಾನ ಗೆದ್ದಿವೆ. ಹೀಗಾಗಿ ಜೆಡಿಎಸ್ ಸ್ಪಷ್ಟ ಬಹುಮತ ಹೊಂದಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ನಿರೀಕ್ಷೆ ಯಂತೆಯೇ ತನ್ನದಾಗಿಸಿಕೊಳ್ಳಲಿದೆ. ತಾಲ್ಲೂಕು ಪಂಚಾಯ್ತಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಜೆಡಿಎಸ್ ಅಧಿಕಾರ ಪಡೆಯಲಿದೆ. 

ಕಳೆದ ಬಾರಿ ತಾಲ್ಲೂಕು ಪಂಚಾಯ್ತಿ ಯಲ್ಲಿ 18 ಸ್ಥಾನಗಳಿದ್ದವು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಲಾ ಆರು ಸ್ಥಾನಗಳನ್ನು ಪಡೆಯುವ ಮೂಲಕ ಸಮಬಲ ಸಾಧಿಸಿದ್ದವು. ಹೀಗಾಗಿ ತಾಲ್ಲೂಕು ಪಂಚಾಯ್ತಿ ಅತಂತ್ರವಾಗಿತ್ತು. ಮೊದಲ ಅವಧಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಟ್ಟು ಬಿಜೆಪಿಯ ಮೀನಾಕ್ಷಮ್ಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನ ಹೇಮಾವತಿ ಕಡ್ಲೇರ್ ಉಪಾಧ್ಯಕ್ಷರಾಗಿದ್ದರು.

ಈ ಬಾರಿ ತಾಲ್ಲೂಕಿನ ಮತದಾರರು ಜೆಡಿಎಸ್‌ಗೆ ಬಹುಮತ ನೀಡಿದ್ದಾರೆ. ಗುಡವಿ ಕ್ಷೇತ್ರವು ತಾಲ್ಲೂಕು ಪಂಚಾಯ್ತಿಗೆ ಹೊಸದಾಗಿ ಸೇರ್ಪಡೆ ಗೊಂಡಿದ್ದು, ಮೊದಲ ಅವಧಿಯ ಚುನಾವಣೆಯಲ್ಲಿ ಜೆಡಿಎಸ್ ಹೊಸ ಕ್ಷೇತ್ರವನ್ನು ಗೆದ್ದುಕೊಂಡಿದೆ.

ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ನಿಗದಿಯಾಗಿದೆ. ಚುನಾವಣೆ ಪೂರ್ವದಲ್ಲಿಯೇ ಜೆಡಿಎಸ್ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿ ಕೊಂಡಿದೆ ಎನ್ನುವ ಮಾತು ದಟ್ಟವಾಗಿತ್ತು. ಅದರಂತೆ ಉಳವಿ ಕ್ಷೇತ್ರದ ನಯನಾ ಶ್ರೀಪಾದ್ ಅವರು ಅಧ್ಯಕ್ಷ ಸ್ಥಾನ ಅಲಂಕರಿಸುವುದು ಖಚಿತ ಎಂದು ಹೇಳಲಾಗುತ್ತಿದೆ.  ಎಣ್ಣೆಕೊಪ್ಪ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಜೆಡಿಎಸ್ ಸದಸ್ಯ ಸುರೇಶ್ ಹಾವಣ್ಣನವರ್  ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ಕಾನೂನು ಅಡಚಣೆಯಿಂದ ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಾಲ್ಕು ತಿಂಗಳು ತಡವಾಗಿದೆ. ಇದೀಗ ಚುನಾವಣೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ಮುಖಂಡರ ಸೆಣಸಾಟ ಕೊನೆಯಾಗುವ ನಿರೀಕ್ಷೆ ತಾಲ್ಲೂಕಿನ ಮತದಾರರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT