ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ | ಮೇವು ಬ್ಯಾಂಕ್ ಮೇಲೆ ಹೆಚ್ಚಿದ ಒತ್ತಡ

ಗೋಶಾಲೆ ಆರಂಭಿಸುವಂತೆ ರೈತರ ಒತ್ತಾಯ
Published 1 ಮೇ 2024, 5:51 IST
Last Updated 1 ಮೇ 2024, 5:51 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಮೇವು ಬ್ಯಾಂಕಿನ ಮೇಲೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚುತ್ತಿದೆ. ಇತರೆಡೆ ಮೇವು ಬ್ಯಾಂಕ್, ಗೋಶಾಲೆ ಆರಂಭಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.

ತಾಲ್ಲೂಕಿನ ನಾಗಲಮಡಿಕೆಯಲ್ಲಿ ಏಪ್ರಿಲ್ 5ರ ಶುಕ್ರವಾರ ಮೇವು ಬ್ಯಾಂಕ್‌ಗೆ ಚಾಲನೆ ನೀಡಲಾಗಿದೆ. ಆರಂಭದಲ್ಲಿ 40 ರಿಂದ 50 ಮಂದಿ ರೈತರು ಮೇವು ಖರೀದಿಸುತ್ತಿದ್ದರು. ಆದರೆ ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಎಲ್ಲೂ ಮೇವು ಸಿಗುತ್ತಿಲ್ಲ. ಮೇವಿನ ಅಭಾವದ ಕಾರಣ ತಾಲ್ಲೂಕಿನ ಮೂಲೆ ಮೂಲೆಯಿಂದ ನಾಗಲಮಡಿಕೆಗೆ ಆಗಮಿಸಿ ನೂರಾರು ರೈತರು ನಿತ್ಯ ಮೇವು ಖರೀದಿಸುತ್ತಿದ್ದಾರೆ.

ನಿಡಗಲ್, ಕಸಬಾ, ವೈಎನ್ ಹೊಸಕೋಟೆ ಗಡಿ ಭಾಗದ ರೈತರಿಗೆ ಮೇವು ಸಾಗಿಸುವ ವೆಚ್ಚ ಹೆಚ್ಚುತ್ತಿದೆ. 1 ಕೆ.ಜಿ ಮೇವಿಗೆ ₹2 ನೀಡಬೇಕು. ಮೇವು ಸಾಗಣೆಗೆ ಸಾವಿರಾರು ರೂ ಖರ್ಚು ಮಾಡಬೇಕಿದೆ. ಜಾನುವಾರುಗಳ ಜೀವ ಉಳಿಸಲು ರೈತರು ಸಾಲ ಮಾಡಿ ಮೇವು ಖರೀದಿಸುವ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.

ಈ ಹಿಂದಿನ ವರ್ಷಗಳಿಗಿಂತಲೂ ತೀವ್ರ ಬರ ತಾಲ್ಲೂಕಿನ ರೈತರ ನಿದ್ದೆ ಕೆಡಿಸಿದೆ. ಮಳೆಗಾಲದವರೆಗೆ ಕುರಿ, ಮೇಕೆ, ಜಾನುವಾರುಗಳ ಜೀವ ಕಾಪಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

ಒಂದೆರೆಡು ದಿನಗಳಲ್ಲಿ ವೈಎನ್ ಹೊಸಕೋಟೆಯಲ್ಲಿ ಮೇವು ಬ್ಯಾಂಕ್ ಆರಂಭಿಸಲಾಗುವುದು. ಈಗಾಗಲೆ ಯಾವ ಸ್ಥಳದಲ್ಲಿ ಬ್ಯಾಂಕ್ ಆರಂಭಿಸಬೇಕು ಎಂದು ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮೇವಿಲ್ಲದೆ ಜಾನುವಾರು ಸಾಯುವ ಮುನ್ನ ನಿಡಗಲ್, ಕಸಬ ಹೋಬಳಿಯಲ್ಲಿಯೂ ಮೇವು ಬ್ಯಾಂಕ್ ಆರಂಭಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

ಗ್ರಾಮ ಪಂಚಾಯಿತಿ ಹಂತದಲ್ಲಿ ಮೇವು ಬ್ಯಾಂಕ್ ಆರಂಭಿಸಿದಲ್ಲಿ ಸಾಗಣೆ ವೆಚ್ಚ ಕಡಿಮೆಯಾಗುತ್ತದೆ. ಕನಿಷ್ಠ ಇಬ್ಬರು ಸಿಬ್ಬಂದಿ ಮೇವು ಬ್ಯಾಂಕ್ ನಿರ್ವಹಿಸಬಹುದು. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇವು ಖರೀದಿಸಲು ರೈತರಿಗೆ ಅನುಕೂಲವಾಗುತ್ತದೆ ಎಂದು ಕೆಂಚಗಾನಹಳ್ಳಿ ರೈತ ಬಿ.ವಿ ನರೇಂದ್ರ ಹೇಳಿದರು.

ಜಾನುವಾರುಗಳಿಗಾಗಿ ಮೇವು ಖರೀದಿಸುವ ರೈತರಿಗೆ ತಾಲ್ಲೂಕು ಆಡಳಿತ, ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ರೈತ ಮುಖಂಡ ಪಳವಳ್ಳಿ ವೇಣುಗೋಪಾಲ್ ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಕೇವಲ ಒಂದು ಮೇವು ಬ್ಯಾಂಕ್ ಆರಂಭಿಸಿರುವುದರಿಂದ ಒತ್ತಡ ಹೆಚ್ಚಿದೆ. ತಾಲ್ಲೂಕಿನ ಇತರೆಡೆ ಮೇವು ಬ್ಯಾಂಕ್ ಆರಂಭಿಸಿ ಜಾನುವಾರುಗಳ ಜೀವ ಉಳಿಸಬೇಕು ಎಂದು ತಿಮ್ಮಮ್ಮನಹಳ್ಳಯ ಯರ‍್ರಿಸ್ವಾಮಿ ಹೇಳಿದರು.

ಕಸಬಾ ಹೋಬಳಿಯ ಗೌಡೇಟಿ, ದೊಮ್ಮತಮರಿ ಸೇರಿದಂತೆ ಈ ಭಾಗದ ರೈತರು ನಾಗಲಮಡಿಕೆಗೆ ಹೋಗಿ ಮೇವು ಖರೀದಿಸಲು ವಾಹನಗಳಿಗೆ ಕನಿಷ್ಠ ₹3 ರಿಂದ ₹4 ಸಾವಿರ ನೀಡಬೇಕು. ಹೀಗಾಗಿ ಈ ಭಾಗದಲ್ಲಿ ಶೀಘ್ರ ಮೇವು ಬ್ಯಾಂಕ್ ಆರಂಭಿಸಬೇಕು ಎಂದು ರೈತ ಗೋವಿಂದಪ್ಪ ಒತ್ತಾಯಿಸಿದರು.

ಪಟ್ಟಣದಲ್ಲಿ ಮೇವು ಬ್ಯಾಂಕ್ ಆರಂಭಿಸುವಂತೆ ಆಗ್ರಹ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಮೇವು ಬ್ಯಾಂಕ್ ಆರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ 4 ಹೋಬಳಿಗಳ ರೈತರಿಗೆ ಮೇವು ಸಾಗಿಸಲು ಅನುಕೂಲವಾಗುತ್ತದೆ. ಪಟ್ಟಣಕ್ಕೆ ತರಕಾರಿ, ಹೂ, ಕೃಷಿ ಉತ್ಪನ್ನಗಳನ್ನು ಮಾರಾಟಕ್ಕಾಗಿ ತರಲಾಗುತ್ತದೆ. ಹಿಂದಿರುಗುವಾಗ ರೈತರು ಖಾಲಿ ವಾಹನಗಳಲ್ಲಿ ಮೇವು ಕೊಂಡೊಯ್ಯಬಹುದು. ವಿವಿಧ ಇಲಾಖೆಗಳ ಅಧಿಕಾರಿಗಳು ತಾಲ್ಲೂಕು ಕೇಂದ್ರದಲ್ಲಿ ಇರುವುದರಿಂದ ನಿರ್ವಹಣೆಯೂ ಸುಲಭ ಸಾಧ್ಯ. ಶೀಘ್ರ ಪಟ್ಟಣದಲ್ಲಿ ಮೇವು ಬ್ಯಾಂಕ್ ಆರಂಭಿಸಬೇಕು ಎಂಬುದು ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT