ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹9 ಕೋಟಿಯಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ

ಶಿಕ್ಷಕರ ಭವನಕ್ಕೆ ಶಂಕು ಸ್ಥಾಪನೆ
Published 12 ಮಾರ್ಚ್ 2024, 2:59 IST
Last Updated 12 ಮಾರ್ಚ್ 2024, 2:59 IST
ಅಕ್ಷರ ಗಾತ್ರ

ತುಮಕೂರು: ‘ಶಿಕ್ಷಕರ ಭವನಕ್ಕೆ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ, ಇತರೆ ಮೂಲಗಳಿಂದ ಅನುದಾನ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು’ ಎಂದು ಶಾಸಕ ಜಿ.ಬಿ.ಜೋತಿಗಣೇಶ್‌ ಹೇಳಿದರು.

ನಗರದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ (ಡಿಡಿಪಿಐ) ಬಳಿ ಸೋಮವಾರ ಶಿಕ್ಷಕರ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ‘ಸುಮಾರು ₹9 ಕೋಟಿ ಅಂದಾಜು ವೆಚ್ಚದ ಕಟ್ಟಡಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಅಗತ್ಯವಿದೆ. ಶಿಕ್ಷಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ನಿಮಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ‘ಶಿಕ್ಷಣ ಇಲಾಖೆಯ ಪ್ರತಿಯೊಂದು ಕೆಲಸ ಸಹ ಮೌಲ್ಯಯುತವಾಗಿದೆ. ಇಲಾಖೆಯ ಮೂಲ ಸ್ವರೂಪಗಳಲ್ಲಿ ಶಿಕ್ಷಕರ ಭವನವೂ ಒಂದು. ಮಾನವ ಸಂಪನ್ಮೂಲ ಬಳಕೆಯಿಂದ ದೇಶದ ಬೆಳವಣಿಗೆ ಅಳೆಯುತ್ತಾರೆ. ಆ ಮಾನವ ಸಂಪನ್ಮೂಲ ಸೃಜಿಸುವ ಗುರುತರ ಜವಾಬ್ದಾರಿ ಶಿಕ್ಷಣ ಇಲಾಖೆ ಮೇಲಿದೆ’ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕರ ಭವನ ಶಿಕ್ಷಕರ ಎಲ್ಲ ಅವಶ್ಯಕತೆ ಪೂರೈಸುವ ಕಟ್ಟಡವಾಗಬೇಕು. ತರಬೇತಿ, ಕೌಶಲಾಭಿವೃದ್ಧಿ, ಕ್ರೀಡಾ ಚಟುವಟಿಕೆ, ಮನರಂಜನಾ ವೇದಿಕೆ ಎಲ್ಲ ಕಾರ್ಯಕ್ರಮಗಳಿಗೆ ಶಿಕ್ಷಕರ ಭವನ ಬಳಕೆಯಾಗಬೇಕು ಎಂದು ಸಲಹೆ ಮಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಪರಶಿವಮೂರ್ತಿ, ‘ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ಭವನದ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿದೆ. ಪ್ರಸ್ತುತ ಶಿಕ್ಷಕರ ಭವನ ಸಮಿತಿಯ ಬಳಿ ₹40 ಲಕ್ಷ ಮಾತ್ರ ಅನುದಾನವಿದೆ. ಸರ್ಕಾರದ ಅನುದಾನದ ಅಗತ್ಯವಿದೆ’ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ರಂಗಧಾಮಯ್ಯ, ಪದವಿಪೂರ್ವ ಕಾಲೇಜು ಉಪನಿರ್ದೇಶಕ ಗಂಗಾಧರ್, ಬಿಇಒ ಸೂರ್ಯಕಲಾ, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ, ಶಿಕ್ಷಕರ ಭವನ ಸಮಿತಿಯ ಕಾರ್ಯದರ್ಶಿ ಟಿ.ಎಸ್‌.ಚಿಕ್ಕಣ್ಣ, ಖಜಾಂಚಿ ಮಂಜುನಾಥ್, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರ ರೆಡ್ಡಿ, ಸರ್ಕಾರಿ ನೌಕರರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT