ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕೊರೊನಾ ವಿರುದ್ಧ ಗೆದ್ದ ಬಾಲಕ!

ಅಮ್ಮ ತುಂಬಿದ ಸ್ಥೈರ್ಯ–ವೈದ್ಯರ ಪ್ರೀತಿಯ ಚಿಕಿತ್ಸೆಯಿಂದಲೇ ಗುಣಮುಖನಾದೆ: 14ರ ಪೋರನ ಮಾತು
Last Updated 26 ಏಪ್ರಿಲ್ 2020, 19:59 IST
ಅಕ್ಷರ ಗಾತ್ರ

ತುಮಕೂರು: ‘ಅಪ್ಪ ತೀರಿಕೊಂಡ ಬಳಿಕ ನಮ್ಮ ಕುಟುಂಬದ ಸದಸ್ಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ನನ್ನ ಮೈಯಲ್ಲಿ ಜ್ವರ, ಕೆಮ್ಮು ಏನೂ ಇರಲಿಲ್ಲ. ಅಪ್ಪ ಅಗಲಿದ ಮೂರನೇ ದಿನಕ್ಕೆ ಸೋಂಕು ತಗುಲಿರುವುದನ್ನು ವೈದ್ಯರು ದೃಢಪಡಿಸಿದರು. ಆ ಬಳಿಕ ನನ್ನನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದರು. ಚನ್ನಾಗಿ ನೋಡಿಕೊಂಡರು. ಅಲ್ಲಿಂದ ಮರಳುವಾಗ ಸಂಪೂರ್ಣ ಗುಣಮುಖನಾಗಿದ್ದೇನೆ ಎಂಬ ಪ್ರಮಾಣಪತ್ರ ನನ್ನ ಕೈಯಲ್ಲಿ ಇತ್ತು’

ಕೋವಿಡ್‌ ಕಾಯಿಲೆಯಿಂದಾಗಿ ತಂದೆಯನ್ನು ಕಳೆದುಕೊಂಡ ಬಳಿಕ, ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿರುವ ಶಿರಾ ಬಾಲಕನ(14) ಮಾತುಗಳಿವು.

‘ಬೆಂಗಳೂರಿಗೆ ಕರೆದುಕೊಂಡು ಹೊರಾಟಾಗ ನನಗೇನೂ ಭಯ ಇರಲೇ ಇಲ್ಲ. ನನ್ನ ಮೈ–ಕೈಯಲ್ಲೂ ಸುಸ್ತು ಇರಲಿಲ್ಲ. ಅಲ್ಲಿ 21 ದಿನ ಪ್ರತ್ಯೇಕ ವಾರ್ಡ್‌ನ ಒಂದು ಬದಿಯ ಹಾಸಿಗೆಯಲ್ಲಿ ನಾನು ವಿಶ್ರಾಂತಿ ಪಡೆಯುತ್ತಿದ್ದೆ. ಮತ್ತೊಂದು ಬದಿಯಲ್ಲಿ ಅಮ್ಮ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಅಮ್ಮನ ಮಾತುಗಳು ನನಗೆ ಕೇಳುತ್ತಿದ್ದವು. ಅಮ್ಮನೊಂದಿಗೆ ಮಾತನಾಡುತ್ತ ಕಾಲ ದೂಡುತ್ತಿದ್ದೆ’ ಎಂದು ಆಸ್ಪತ್ರೆಯಲ್ಲಿದ್ದ ದಿನಗಳನ್ನು ಮೆಲುಕು ಹಾಕಿದನು.

‘ನಿನಗೆ ಏನೂ ಆಗಿಲ್ಲ ಕಣಪ್ಪ ಅಂತ ಅಮ್ಮ ಆತ್ಮಸ್ಥೈರ್ಯ ತುಂಬುತ್ತಿದ್ದಳು. ವೈದ್ಯರೂ ಪಿ.ಪಿ.ಇ. ಕಿಟ್‌ಗಳನ್ನು ಧರಿಸಿಕೊಂಡು ಆಗಾಗ ಬಂದು ಆರೋಗ್ಯ ಪರೀಕ್ಷೆ ಮಾಡುತ್ತಿದ್ದರು. ಅಪ್ಪ ತೀರಿಹೋಗುವ ಮೊದಲೇ ನನ್ನ ಸ್ವಲ್ಪ ಅನಾರೋಗ್ಯ ಇತ್ತು. ಅದರದ್ದೆ ಮಾತ್ರೆಗಳನ್ನು ಮಾತ್ರ ಕೊಡುತ್ತಿದ್ದರು. ಬಹುತೇಕ ಸಮಯವನ್ನು ಬೆಡ್‌ನ ಮೇಲೆ ಕೂತೆ ಕಳೆಯುತ್ತಿದ್ದೆ. ತೀರಾ ಬೇಸರವಾದಾಗ ವಾರ್ಡ್‌ನಲ್ಲೆ ವಾಕ್‌ ಮಾಡುತ್ತಿದ್ದೆ’ ಎಂದು ಚಿಕಿತ್ಸೆಯ ದಿನಗಳ ನೆನಪಿಸಿಕೊಂಡನು.

‘ಮನೆಯಲ್ಲಿನಂತೆಯೇ ಇಡ್ಲಿ, ವಡೆ, ಅನ್ನ, ಸಾಂಬಾರ್‌ ಊಟ ಕೊಡುತ್ತಿದ್ದರು. ಒಂದು ದಿನ ನಾನೇ ಎಗ್‌ ರೈಸ್‌ ತಿನ್ನುವ ಆಸೆ ವ್ಯಕ್ತಪಡಿಸಿದೆ. ಅದನ್ನು ಸಹ ತಂದು ಕೊಟ್ಟಿದ್ದರು. ತುಂಬಾನೇ ಚನ್ನಾಗಿ ನೋಡಿಕೊಂಡರು’ ಎಂದು ಆಸ್ಪತ್ರೆಯ ವ್ಯವಸ್ಥೆಯನ್ನು ಸ್ಮರಿಸಿದನು.

*

ವೈದ್ಯರು, ಅಧಿಕಾರಿಗಳು, ಪೊಲೀಸರಿಗೆ ಥ್ಯಾಂಕ್ಸ್‌

‘ಆರಂಭದಲ್ಲಿ ನೆರೆಹೊರೆಯ ಕೆಲವರು ಏನೋ ಆಗಬಾರದು, ನಮ್ಮ ಮನೆಯಲ್ಲಿ ಆಗಿದೆ ಎಂದು ನಮಗಿಂತಲೂ ಹೆಚ್ಚು ಭೀತಿಗೆ ಒಳಗಾಗಿದ್ದರು. ವೈದ್ಯರ ಚಿಕಿತ್ಸೆ, ಅಧಿಕಾರಿಗಳ ನೆರವು, ಪೊಲೀಸರ ಸಹಕಾರದಿಂದ ನಮ್ಮ ಮೊಹಲ್ಲಾದ ಪರಿಸ್ಥಿತಿ ಈಗ ಸಂಪೂರ್ಣ ಸುಧಾರಿಸಿದೆ. ಸರ್ಕಾರದಿಂದಲೇ ಮನೆಗೆ ಬೇಕಾದ ದಿನಸಿ ಉಚಿತವಾಗಿ ಸರಬರಾಜು ಆಗುತ್ತಿದೆ. ತಾಲ್ಲೂಕು ಆಡಳಿತ ನಮ್ಮನ್ನು ದೊಡ್ಡ ಸಂಕಷ್ಟದಿಂದ ಪಾರು ಮಾಡಿತು. ಅವರಿಗೆ ತುಂಬಾ ಥ್ಯಾಂಕ್ಸ್‌’ ಎಂದು ಬಾಲಕನ ಸಂಬಂಧಿಯೊಬ್ಬರು ಸಂತಸದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT