ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕಾಂಗ್ರೆಸ್‌ಗೆ ಛಲವಾದಿ, ಮಾದಿಗರ ಬೆಂಬಲ

Published 20 ಏಪ್ರಿಲ್ 2024, 5:34 IST
Last Updated 20 ಏಪ್ರಿಲ್ 2024, 5:34 IST
ಅಕ್ಷರ ಗಾತ್ರ

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಛಲವಾದಿ, ಮಾದಿಗ ಸಮುದಾಯದ ಮುಖಂಡರು ಕಾಂಗ್ರೆಸ್‌ ಬೆಂಬಲಿಸುವ ನಿರ್ಧಾರ ಪ್ರಕಟಿಸಿದರು. ‘ಸಂವಿಧಾನ ವಿರೋಧಿ ಬಿಜೆಪಿ ಸೋಲಿಸಿ’ ಎಂದು ಜಿಲ್ಲಾ ದಲಿತ ಪರ ಒಕ್ಕೂಟದ ಮುಖಂಡರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ದಲಿತ ಸಮುದಾಯಗಳು ಸನಾತನವಾದಿ ಕುತಂತ್ರಕ್ಕೆ ಬಲಿಯಾಗಿವೆ. ಕಳೆದ 10 ವರ್ಷಗಳಲ್ಲಿ ಅಸ್ಪೃಶ್ಯತೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗಿವೆ. ಬಿಜೆಪಿ ಪ್ರಜಾಪ್ರಭುತ್ವ ನಾಶ ಮಾಡಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದ್ವೇಷ ಹರಡುತ್ತಿದೆ. ಪರಿಶಿಷ್ಟ ಸಮುದಾಯಗಳನ್ನು ವಿಭಜನೆ ಮಾಡಿ ಮತ್ತೆ ಗುಲಾಮಗಿರಿಗೆ ತಳ್ಳುತ್ತಿದೆ’ ಎಂದು ಚಿಂತಕ ಕೆ.ದೊರೈರಾಜ್‌ ಆರೋಪಿಸಿದರು.

ಅಸಮಾನತೆ ಪ್ರತಿಪಾದಿಸುವ ಮನುವಾದಿ ಸಿದ್ಧಾಂತ ಕಿತ್ತೊಗೆಯಬೇಕು. ಕಳೆದ 10 ವರ್ಷ ಸುಳ್ಳಿನ ಮೇಲೆ ಸರ್ಕಾರ ನಡೆಸಿ ದೇಶದ ಜನರನ್ನು ದಿಕ್ಕು ತಪ್ಪಿಸಿದೆ. ಮಕ್ಕಳ ಶಿಕ್ಷಣ ಕಿತ್ತುಕೊಳ್ಳಲು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿ ಉದ್ಯೋಗ ಅವಕಾಶ ಇಲ್ಲದಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಸಂವಿಧಾನ ಬದ್ಧವಾದ ಒಳ ಮೀಸಲಾತಿ ಜಾರಿಗೆ ತರದೆ 101 ಜಾತಿ ಪರಿಶಿಷ್ಟರಿಗೆ ದ್ರೋಹ ಬಗೆದಿದೆ. ಸಂವಿಧಾನ ಕಾಪಾಡಿಕೊಳ್ಳಲು ದಲಿತ ಸಮುದಾಯದ ಎಲ್ಲ ಪರಿಶಿಷ್ಟ ಜಾತಿಗಳು ಒಂದಾಗಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್‌ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಛಲವಾದಿ ಮಹಾಸಭಾ ಅಧ್ಯಕ್ಷ ಪಿ.ಚಂದ್ರಪ್ಪ, ‘ಸಂವಿಧಾನ ರಕ್ಷಿಸಲು ಎಲ್ಲ ಅಸ್ಪೃಶ್ಯ ಜಾತಿ, ಸಮುದಾಯಗಳು ಒಂದಾಗಿ ಕಾಂಗ್ರೆಸ್‌ ಬೆಂಬಲಿಸಬೇಕು’ ಎಂದರು.

ಮುಖಂಡ ಕೆಂಚಮಾರಯ್ಯ, ‘ಜಿಲ್ಲೆಯ ಅಭಿವೃದ್ಧಿಗಾಗಿ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಗೆಲ್ಲಿಸಬೇಕು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡ ಜನರಿಗೆ ಶಕ್ತಿ ತುಂಬಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವರಾದ ಜಿ.ಪರಮೇಶ್ವರ, ಕೆ.ಎನ್ ರಾಜಣ್ಣ ಅವರ ಕೈ ಬಲಪಡಿಸಬೇಕು. ದಲಿತ ಸಮುದಾಯದ ಎಡ-ಬಲ ಸಮುದಾಯಗಳು ಕಾಂಗ್ರೆಸ್‌ ಪರ ನಿಲ್ಲಬೇಕು’ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ನರಸಿಂಹಯ್ಯ, ನರಸೀಯಪ್ಪ, ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಮುಖಂಡರಾದ ವಾಲೇಚಂದ್ರಯ್ಯ, ಶಿವಶಂಕರ್, ಮುರುಳೀಧರ್‌, ಬಿ.ಎಚ್‌.ಗಂಗಾಧರ್‌, ಜಯಮೂರ್ತಿ, ಶ್ರೀನಿವಾಸ್‌, ಬಾನುಪ್ರಕಾಶ್, ಶಿವಾಜಿ, ಕೆಂಪರಾಜು ಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT