ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಎನ್.ಹೊಸಕೋಟೆ: ಬಿಸಿಲ ತಾಪ‌ಕ್ಕೆ ಫಸಲಿಗೂ ಎದುರಾಗಿದೆ ಸಂಕಷ್ಟ

Published 2 ಮೇ 2024, 5:08 IST
Last Updated 2 ಮೇ 2024, 5:08 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಜನ ಹೈರಾಣಾಗುತ್ತಿದ್ದಾರೆ.

40-42 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದ್ದು, ಭೂಮಿ ಕಾದ ಹೆಂಚಿನಂತಾಗುತ್ತಿದೆ. ಬೆಳಿಗ್ಗೆ 10 ಗಂಟೆ ದಾಟಿದರೆ ಹೊರಗೆ ಓಡಾಡಲು ಸಾಧ್ಯವಾಗುತ್ತಿಲ್ಲ. ತಲೆನೋವು, ಸ್ನಾಯು ಸೆಳೆತ, ಜ್ವರ ಇನ್ನಿತರೆ ಸಮಸ್ಯೆಯಿಂದ ಜನತೆ ಆಸ್ಪತ್ರೆ ಕಡೆ ಮುಖ ಮಾಡುತ್ತಿದ್ದಾರೆ.

ಬೆಟ್ಟಗುಡ್ಡ, ಜಮೀನುಗಳಲ್ಲಿ ಇರುವ ಹುಲ್ಲು ಒಣಗಿದೆ. ಜಾನುವಾರುಗಳಿಗೆ ಮೇವು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಗಿಡಗಂಟೆಗಳು ಕಮರುತ್ತಿವೆ. ಆಂಧ್ರಪ್ರದೇಶದ ಕನೇಕಲ್ಲು ಪ್ರದೇಶದಿಂದ ಜೋಳದ ಸಿಪ್ಪೆ ಮತ್ತು ಭತ್ತದ ಹುಲ್ಲನ್ನು ಖರೀದಿಸಲಾಗುತ್ತಿದೆ.

ವ್ಯವಸಾಯದ ಬೆಳೆಗಳಿಗೆ ಎಷ್ಟೇ ನೀರು, ಗೊಬ್ಬರ ಕೊಟ್ಟರೂ ಫಸಲು ಕೈಗೆ ಸಿಗುತ್ತಿಲ್ಲ. ಟೊಮೆಟೊ, ಮಾವು, ಪಪ್ಪಾಯಿ ಇನ್ನಿತರೆ ಹಣ್ಣುಗಳಲ್ಲಿ ಮಚ್ಚೆಗಳು ಮೂಡಿ ಹಣ್ಣಾಗದೆ ಕೆಡುತ್ತಿವೆ ಎನ್ನುತ್ತಾರೆ ರೈತರಾದ ಎಚ್.ಎಸ್.ಬೊಮ್ಮಲಿಂಗಪ್ಪ, ತಿಪ್ಪಗಾನಹಳ್ಳಿ ಸದಾನಂದ, ನಾಗಪ್ಪ ಅವರು.

ಚಿಕ್ಕ ಅಡಿಕೆ ಗಿಡಗಳು ಒಣಗುತ್ತಿದ್ದರೆ, ದೊಡ್ಡ ಮರಗಳಲ್ಲಿ ಹೊಂಬಾಳೆ ಮತ್ತು ಕಾಯಿ ಎಸಳುಗಳು ಉದುರುತ್ತಿದೆ. ಮಾವಿನ ಹೂವು ಉದುರಿ ಕೇವಲ ಶೇ 20-30 ಭಾಗ ಕಾಯಿ ಉಳಿದುಕೊಂಡಿದೆ. ಮಾವು ಬೆಳೆಗಾರರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಲ್ಲಿಗೆ, ಕನಕಾಂಬರ, ಸುಗಂಧರಾಜ ಹೂವುಗಳು ಗಿಡದಲ್ಲೇ ಒಣಗಿಹೋಗುತ್ತಿವೆ.

ಹೈನುಗಾರಿಕೆ ಮಾಡುವ ಸಲುವಾಗಿ ಲಕ್ಷಾಂತರ ರೂಪಾಯಿಗಳನ್ನು ಸುರಿದು ಹೈಬ್ರಿಡ್ ತಳಿಯ ಆಕಳನ್ನು ಸಾಕುತ್ತಿದ್ದೇವೆ. ಸರಿಯಾಗಿ ಮೇವು ತಿನ್ನುತ್ತಿಲ್ಲ. ಹಾಲಿನ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ರೈತ ವಿ.ಜಗದೀಶ ಹೇಳಿದರು.

ಮಳೆ ಇಲ್ಲ ಬೆಳೆ ಇಲ್ಲ. ಎಲ್ಲೆಲ್ಲೂ ಹುಲ್ಲಿಲ್ಲ. ಆದಾಗ್ಯೂ ಕುರಿಗಳನ್ನು ಓಡಾಡಿಸಿಕೊಂಡು ಬರಲು ಹೊರಗೆ ಹೋದರೆ ಬಿಸಿಲಿನ ತಾಪಕ್ಕೆ ಕುರಿಗಳ ಮೈಯಲ್ಲಿ ಬೊಬ್ಬೆಗಳು ಬರುತ್ತವೆ. ದಿನದ ಬಹುಭಾಗ ಮರಗಳ ಕೆಳಗೆ ಕಾಲ ಕಳೆಯುತ್ತೇವೆ ಎಂದು ಮೇಗಳಪಾಳ್ಯದ ಕುರಿಗಾಹಿ ಕರಿಯಣ್ಣ ಹೇಳಿದರು.

ಈ ಮೊದಲು ಕೂಲಿ ಕೆಲಸಕ್ಕೆ 9 ಗಂಟೆಯಿಂದ ಹೋಗಿ ಸಂಜೆ ಬರುತ್ತಿದ್ದೆವು. ಮಧ್ಯಾಹ್ನದ ವೇಳೆ ಹೊಲ, ಗದ್ದೆಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬೆಳಿಗ್ಗೆ 6 ಗಂಟೆಗೆ ಹೋಗಿ ಮಧ್ಯಾಹ್ನ 2 ಗಂಟೆಗೆ ಮನೆಗೆ ಬರುತ್ತಿದ್ದೇವೆ ಎಂದು ಕೂಲಿಕಾರ್ಮಿಕರಾದ ಸಿದ್ದಮ್ಮ ತಿಳಿಸಿದರು.

ಮಾರಮ್ಮನಹಳ್ಳಿಯ ಮಕ್ಕಳು ಬಿಸಿಲಿನ ಜಳದಿಂದ ಪಾರಾಗಲು ಅಗಸರ ತೊಟ್ಟಿಯಲ್ಲಿ ಈಜಾಡಿದರು
ಮಾರಮ್ಮನಹಳ್ಳಿಯ ಮಕ್ಕಳು ಬಿಸಿಲಿನ ಜಳದಿಂದ ಪಾರಾಗಲು ಅಗಸರ ತೊಟ್ಟಿಯಲ್ಲಿ ಈಜಾಡಿದರು
ಮಧ್ಯಾಹ್ನದ ಪ್ರಖರ ಬಿಸಿಲಿನಿಂದ ಮಾವಿನ ಕಾಯಿಗಳ ಮೇಲೆ ಮಚ್ಚೆಗಳು ಮೂಡಿ ಹಾಳಾದವು
ಮಧ್ಯಾಹ್ನದ ಪ್ರಖರ ಬಿಸಿಲಿನಿಂದ ಮಾವಿನ ಕಾಯಿಗಳ ಮೇಲೆ ಮಚ್ಚೆಗಳು ಮೂಡಿ ಹಾಳಾದವು
ಬಿಸಿಲಿನ ತಾಪಕ್ಕೆ ತಾಳದೆ ಅಡಿಕೆ ಗಿಡ ಒಣಗಿತು
ಬಿಸಿಲಿನ ತಾಪಕ್ಕೆ ತಾಳದೆ ಅಡಿಕೆ ಗಿಡ ಒಣಗಿತು
ಬಿಸಿಲಿನ ಜಳಕ್ಕೆ ಅಡಿಕೆ ಮರಗಳಲ್ಲಿನ ಹೊಂಬಾಳೆ ಮತ್ತು ಅಡಿಕೆ ಕಾಯಿಗಳು ಉದುರಿದವು.
ಬಿಸಿಲಿನ ಜಳಕ್ಕೆ ಅಡಿಕೆ ಮರಗಳಲ್ಲಿನ ಹೊಂಬಾಳೆ ಮತ್ತು ಅಡಿಕೆ ಕಾಯಿಗಳು ಉದುರಿದವು.
ಸರ್ಕಾರ ಹೋಬಳಿ ಕೇಂದ್ರದಲ್ಲಿ ಮೇವು ಬ್ಯಾಂಕ್ ತೆರೆಯುತ್ತೇವೆ ಎಂದು ತಿಳಿಸುತ್ತಾ ಬಂದಿದೆಯಾದರೂ ಕಾರ್ಯಗತವಾಗಿಲ್ಲ. ಹುಲ್ಲು ಸಿಗದಿದ್ದರೆ ಜಾನುವಾರುಗಳ ಸ್ಥಿತಿಯನ್ನು ನೋಡಲಾಗದೆ ಅನಿವಾರ್ಯವಾಗಿ ಮಾರಬೇಕಾಗುತ್ತದೆ
ಎಚ್.ಕೆ.ರಾಮಚಂದ್ರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT