ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿ ಬಾ ನನ ಕಂದ...

Last Updated 16 ಮಾರ್ಚ್ 2015, 8:53 IST
ಅಕ್ಷರ ಗಾತ್ರ

ತುಮಕೂರು: ಮನೆ ಮುಂದೆ ಅಂಗಳವಿಲ್ಲ, ಬಡಾವಣೆಗೆ ಒಂದಾದರೂ ಆಟದ ಮೈದಾನ ಇಲ್ಲದೇ ಕ್ರೀಡೆಗಳಿಂದ ವಂಚಿತರಾಗುತ್ತಾ ಬಂದಿದ್ದೇವೆ. ಖಾಲಿ ನಿವೇಶನ ಹಾಗೂ ಉದ್ಯಾನಗಳನ್ನೇ ಆಟಕ್ಕೆ ಬಳಸಿಕೊಳ್ಳುತ್ತಿದ್ದೇವೆ. ಉದ್ಯಾನದಲ್ಲಿ ವಾಕಿಂಗ್‌ ಬರುವವರಿಂದ ಬೈಗುಳ, ಖಾಲಿ ನಿವೇಶನಗಳಲ್ಲಿ ಮಾಲೀಕರ ಮಾತಿನಿಂದ ಬೇಸತ್ತು ಹೋಗಿದ್ದೇವೆ...

– ಇದು ನಗರದಲ್ಲಿ ಕ್ರೀಡೆಗಳಿಂದ ವಂಚಿತರಾದ ಮಕ್ಕಳ ಅಳಲು.

ಇಂದಿನ ಧಾವಂತದ ಯುಗದಲ್ಲಿ ಮಕ್ಕಳೊಂದಿಗೆ ಕಾಲ ಕಳೆಯಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಕ್ಕಳು ಬಾಲ್ಯವನ್ನು ಪ್ಲೇ ಹೋಂ ಹಾಗೂ ಬೇಸಿಗೆ ಶಿಬಿರಗಳಲ್ಲಿ ಕಳೆಯುವಂತಾಗಿದೆ.

ನಗರದಲ್ಲಿ ಸಾರ್ವಜನಿಕ ಕ್ರೀಡಾಂಗಣಗಳು ಇಲ್ಲದೇ ಮಕ್ಕಳು ಉದ್ಯಾನಗಳಲ್ಲಿ ಆಟ ಆಡುವಂತಾಗಿದೆ. ಮಹಾತ್ಮಗಾಂಧಿ ಕ್ರೀಡಾಂಗಣ, ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಮಾತ್ರ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಿವೆ.

ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಹಿಂಭಾಗ ಹಿಂದೆ ಆಟಕ್ಕೆ ಮುಕ್ತವಾಗಿತ್ತು. ಬ್ಯಾಡ್ಮಿಂಟನ್ ತಂಡಗಳು, ಲಗೋರಿ ಹಾಗೂ ಸಣ್ಣಪುಟ್ಟ ಆಟಗಳು ನಡೆಯುತ್ತಿದ್ದವು. ಅಲ್ಲಿ ವಿ.ವಿ. ಕಾಲೇಜು, ವಸತಿ ನಿಲಯ ನಿರ್ಮಿಸಿದ್ದರಿಂದ ಮೈದಾನವೇ ಇಲ್ಲದಂತಾಗಿದೆ.

ಶಿವಕುಮಾರ್‌ ಸ್ವಾಮೀಜಿ ವೃತ್ತದ ಬಳಿ ಇರುವ ಸಿದ್ದಗಂಗಾ ಬಾಲಕರ ಪ್ರೌಢಶಾಲೆ ಹಾಗೂ ಬಸವೇಶ್ವರ ಶಾಲೆ ಮಕ್ಕಳು ಬಸವೇಶ್ವರ ಶಾಲಾ ಮೈದಾನದಲ್ಲಿ ಕೊಕ್ಕೊ ತರಬೇತಿ ಪಡೆಯುತ್ತಿದ್ದರು. ಇಲ್ಲಿ ತರಬೇತಿ ಪಡೆದ ತಂಡಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸತತವಾಗಿ 12 ಬಾರಿ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಅಷ್ಟೇ ಅಲ್ಲದೇ ಶ್ರೇಷ್ಠ ಕ್ರೀಡಾ ಪ್ರಶಸ್ತಿಯಾದ ಏಕಲವ್ಯ, ವೀರ ಮದಕರಿ ನಾಯಕ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಅಥ್ಲಿಟ್‌ಗಳು ತರಬೇತಿಗಾಗಿ ಇದೇ ಮೈದಾನವನ್ನು ಆಶ್ರಯಿಸಿದ್ದರು. ಆದರೆ ಇಂದು ಮೈದಾನದಲ್ಲಿ ಬೃಹತ್‌ ಕಟ್ಟಡಗಳು ತಲೆಎತ್ತಿದ್ದು, ಮಕ್ಕಳು ಕ್ರೀಡೆಯಿಂದ ವಂಚಿತರಾಗಿದ್ದಾರೆ. ಇದು ಮಕ್ಕಳ ಹಾಗೂ ಭಾರತದ ಕ್ರೀಡಾ ಭವಿಷ್ಯವನ್ನು ಚಿವುಟಿ ಹಾಕಿದೆ.

ಸರ್ಕಾರಿ ಜೂನಿಯರ್‌ ಕಾಲೇಜಿನ ಆಟದ ಮೈದಾನ ರಾಜ್ಯದಲ್ಲೇ ದೊಡ್ಡ ಮೈದಾನ. ಸದ್ಯ ನಗರದ ಜನರಿಗೆ ಮುಕ್ತವಾಗಿರುವುದೂ  ಇದೊಂದೇ. ಇಲ್ಲಿ ವಿವೇಕಾನಂದ ಕ್ರೀಡಾ ಸಂಸ್ಥೆ, ಯಂಗ್‌ ಚಾಲೆಂಜರ್ಸ್‌, ರಾಕ್‌, ಯಂಗ್‌ ಡೈಮಂಡ್‌, ಡಿಲಕ್ಸ್‌ ಸಂಸ್ಥೆಗಳ ಸದಸ್ಯರು ಕ್ರಿಕೆಟ್‌, ಕೊಕ್ಕೊ, ವಾಲಿಬಾಲ್‌, ಬ್ಯಾಸ್ಕೆಟ್‌ ಬಾಲ್‌, ಬಾಲ್‌ ಬ್ಯಾಡ್ಮಿಂಟನ್ ಆಟಗಳಿಗೆ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ತರಬೇತಿ ಪಡೆಯುತ್ತಿದ್ದರು.

ಈಗಲೂ 400 ಮೀಟರ್‌ ಟ್ರ್ಯಾಕ್‌ ಇದೆ. ಆದರೆ ಪ್ರತಿ ನಿತ್ಯ ಒಂದಿಲ್ಲೊಂದು ಸಭೆ ಸಮಾರಂಭಗಳು ಹಾಗೂ ಮೇಳಗಳು ನಡೆಯುವುದರಿಂದ ತರಬೇತಿಗೆ ಕಿರಿಕಿರಿಯುಂಟಾಗುತ್ತಿದೆ.

₨ 5 ಕೋಟಿ ವೆಚ್ಚದಲ್ಲಿ ಎಸ್‌ಎಸ್‌ಐಟಿ ಹಿಂಭಾಗ ಒಳಾಂಗಣ ಕ್ರೀಡಾಂಗಣ ನಿರ್ಮಿಸುವುದಾಗಿ ಈಚೆಗೆ ಸಭೆಯೊಂದರಲ್ಲಿ ನಗರ ಶಾಸಕ ಡಾ.ರಫೀಕ್‌ ಅಹಮದ್‌ ಭರವಸೆ ನೀಡಿದ್ದಾರೆ. ಇದು ಆದಷ್ಟೂ ಬೇಗ ಕಾರ್ಯರೂಪಕ್ಕೆ ಬರಬೇಕು ಎಂದು ಕ್ರೀಡಾ ತರಬೇತುದಾರ ಎಸ್‌.ಪ್ರದೀಪ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT